ಮುಂಬೈ : ದಿನದ ಆರಂಭದಲ್ಲಿ ನಷ್ಟದಲ್ಲಿ ವಹಿವಾಟು ಆರಂಭಿಸಿದ್ದ ಮುಂಬೈ ಷೇರುಪೇಟೆಯಲ್ಲಿ ದಿನದಾಂತ್ಯಕ್ಕೆ ಸೆನ್ಸೆಕ್ಸ್ 231 ಅಂಕಗಳನ್ನು ಹೆಚ್ಚಿಸಿಕೊಂಡು 57,593ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 69 ಅಂಶಗಳ ಜಿಗಿತ ಕಂಡು 17,222ಕ್ಕೆ ತಲುಪಿದೆ.
ಬೆಳಗಿನ ವಹಿವಾಟಿನಲ್ಲಿ 537.11 ಪಾಯಿಂಟ್‌ಗಳ ಕುಸಿತದ ನಂತರ ಸೆಕ್ಸೆನ್ಸ್ 56,825ಕ್ಕೆ ತಲುಪಿತ್ತು. ಆದರೆ, ಮಧ್ಯಾಹ್ನದ ವಹಿವಾಟಿನಲ್ಲಿ ಚೇತರಿಕೆಯ ಹಾದಿಗೆ ಮರಳಿತು. ಪ್ರಮುಖ ಷೇರು ಕಂಪನಿಗಳಾದ ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಟಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಾಭಗಳಿಸಿದವು.
ಮತ್ತೊಂದೆಡೆ ನೆಸ್ಲೆ ಇಂಡಿಯಾ, ಹೆಚ್‌ಡಿಎಫ್‌ಸಿ, ಹೆಚ್‌ಸಿಎಲ್ ಟೆಕ್ನಾಲಜೀಸ್, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್, ವಿಪ್ರೋ, ಟೆಕ್ ಮಹೀಂದ್ರಾ ನಷ್ಟದಲ್ಲಿ ಕೊನೆಗೊಂಡವು. ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಸೂಚನೆಯಿಂದಾಗಿ ಮುಂಬೈ ಷೇರುಪೇಟೆ ಹಸಿರು ಬಣ್ಣಕ್ಕೆ ತಿರುಗಿತು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್ ರಂಗನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಟೋಕಿಯೋ ಮತ್ತು ಸಿಯೋಲ್ ಮಾರುಕಟ್ಟೆಗಳು ನಷ್ಟದಲ್ಲಿ ಸಾಗಿದರೆ, ಹಾಂಗ್ ಕಾಂಗ್ ಮತ್ತು ಶಾಂಘೈ ಪೇಟೆಗಳು ಲಾಭದಲ್ಲಿ ಕೊನೆಗೊಂಡಿವೆ. ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ಏರಿಕೆಯಾಗಿ 76.16ಕ್ಕೆ ತಲುಪಿ ಇಂದಿನ ವ್ಯಾಪಾರ ಮುಗಿಸಿದೆ.
ಇದನ್ನೂ ಓದಿ: ಅಮೆಜಾನ್ ಗೇಮ್ಸ್ ಸ್ಟುಡಿಯೋ ಮುಖ್ಯಸ್ಥ ಮೈಕ್ ಫ್ರಾಝ್ಝಿನಿ ರಾಜೀನಾಮೆ