ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿ ನಂತರ ಡಾಲರ್ ಎದುರು ಭಾರಿ ಕುಸಿತ ಕಂಡಿದ್ದ ರಷ್ಯಾದ ಕರೆನ್ಸಿ ರೂಬಲ್ ತನ್ನ ಮೌಲ್ಯವನ್ನು ಮತ್ತೆ ಹೆಚ್ಚಿಸಿಕೊಂಡಿದೆ. ಆ ಮೂಲಕ ಜಾಗತಿಕವಾಗಿ ಕಾರ್ಯನಿರ್ವಹಣೆಯ ಅಗ್ರ ಕರೆನ್ಸಿ ಎನಿಸಿಕೊಂಡಿದೆ.
ಮಾರ್ಚ್ ಮೊದಲ ವಾರದಲ್ಲಿ ಕನಿಷ್ಠ ಮಟ್ಟವನ್ನು ದಾಖಲಿಸಿಕೊಂಡಿದ್ದ ರೂಬಲ್ ಅಮೆರಿಕದ ಡಾಲರ್ ಎದುರು ಶೇ.60ರಷ್ಟು ಹೆಚ್ಚಿಸಿಕೊಂಡಿದೆ. ಮಾರ್ಚ್ 7 ರಂದು ದಾಖಲೆಯ ಕನಿಷ್ಠ 139ಕ್ಕೆ ಏರಿದ್ದ ಈ ಕರೆನ್ಸಿ ಮಂಗಳವಾರ ಡಾಲರ್ ಎದುರು 83ಕ್ಕೆ ತಲುಪಿದೆ.
ಯುಎಸ್, ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ಆರ್ಥಿಕತೆಗೆ ನಿರ್ಬಂಧ ಹೇರಿದ ನಂತರ ರೂಬಲ್ ತನ್ನ ಮೌಲ್ಯವನ್ನು ಭಾರಿ ಪ್ರಮಾಣದಲ್ಲಿ ಕಳೆದುಕೊಂಡಿತ್ತು. ಪುಟಿನ್ ಸರ್ಕಾರದ ಆರ್ಥಿಕತೆಯ ವಿರುದ್ಧ ಪಶ್ಚಿಮ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸಿದರೆ, ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಶೇ.20ರಷ್ಟು ಏರಿಸಿತ್ತು. ಜೊತೆಗೆ ರೂಬಲ್‌ಗಳನ್ನು ಡಾಲರ್ ಅಥವಾ ಯೂರೋಗಳಿಗೆ ವಿನಿಮಯ ಮಾಡಿಕೊಳ್ಳಲು ಬಯಸುವವರಿಗೆ ಕಟ್ಟುನಿಟ್ಟಾದ ಬಂಡವಾಳ ನಿಯಂತ್ರಣಗಳನ್ನೂ ವಿಧಿಸಿದೆ.
ಉಕ್ರೇನ್‌ನಿಂದ ತನ್ನ ಸೈನ್ಯ ಕಡಿತ ಮಾಡಲು ಮುಂದಾದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ನಿರ್ಬಂಧಗಳು ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸುವ ಮೊದಲು ರೂಬಲ್ ಡಾಲರ್ ಎದುರು ಸರಿಸುಮಾರು 85ರಲ್ಲಿ ವ್ಯಾಪಾರ ಮಾಡುತ್ತಿತ್ತು. ಬೈಡನ್ ಆಡಳಿತವು ರಷ್ಯಾದ ತೈಲ ಮತ್ತು ಅನಿಲ ಆಮದುಗಳನ್ನು ನಿಷೇಧಿಸುತ್ತದೆ ಎಂಬ ಸುದ್ದಿ ಹೊರಹೊಮ್ಮಿದಾಗ, ಮಾರ್ಚ್ 7 ರಂದು ಡಾಲರ್ ವಿರುದ್ಧ ರೂಬಲ್ ಗಣನೀಯವಾಗಿ ಕಡಿಮೆಯಾಗಿ ಸರಿಸುಮಾರು 150ಕ್ಕೆ ತಲುಪಿತ್ತು.
ಉಕ್ರೇನ್‌ನೊಂದಿಗೆ ಕದನ ವಿರಾಮದ ಮಾತುಕತೆ ಹೆಚ್ಚು ಮುಕ್ತವಾಗಿದೆ ಎಂಬ ವರದಿಗಳ ಮಧ್ಯೆ ರೂಬಲ್ ಮೌಲ್ಯ ಏರಿದೆ. ಯುಎಸ್ ಮತ್ತು ಪಾಶ್ಚಿಮಾತ್ಯ ಅಧಿಕಾರಿಗಳು ಮಾತ್ರ ರಷ್ಯಾ ಕಾರ್ಯಾಚರಣೆಯನ್ನು ಕಡಿತ ಮಾಡುವ ಘೋಷಣೆಯ ಬಗ್ಗೆ ಸದ್ಯದ ಮಟ್ಟಿಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಇದು ಮಾರುಕಟ್ಟೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ಫೆಡ್‌ಎಕ್ಸ್‌ನ ಅಧ್ಯಕ್ಷ, ಸಿಇಒ ಆಗಿ ಆಯ್ಕೆಯಾಗಿರುವ ಭಾರತೀಯ-ಅಮೆರಿಕನ್ ರಾಜ್ ಸುಬ್ರಮಣ್ಯಂ