ನವದೆಹಲಿ : ಭಾರತವು ತನ್ನ ರೂಪಾಯಿಯನ್ನು ಜಾಗತಿಕ ಕರೆನ್ಸಿಯನ್ನಾಗಿ ಮಾಡುವತ್ತ ಹೆಜ್ಜೆ ಇಡಲಾರಂಭಿಸಿದೆ. ರೂಪಾಯಿಯನ್ನು ಅಂತಾರಾಷ್ಟ್ರೀಕರಣ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂತರ್ ಇಲಾಖೆಯ ಗುಂಪು (ಐಡಿಜಿ) ಬುಧವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದ್ದು, ಪ್ರಮುಖ ಜಾಗತಿಕ ಆರ್ಥಿಕ ಹಿಂಜರಿತಗಳ ಮಧ್ಯೆಯೂ ಸ್ಥಿರವಾದ ಆರ್ಥಿಕತೆ ಕಾಯ್ದುಕೊಂಡಿದೆ. ಹೀಗಾಗಿ ಭಾರತದ ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾಗುವ ಸಾಮರ್ಥ್ಯ ಹೊಂದಿರುವುದು ಸಾಬೀತಾಗಿದೆ.
ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದ್ದು ಮತ್ತು ಅಂತಾರಾಷ್ಟ್ರೀಯ ವಹಿವಾಟುಗಳಿಗಾಗಿ ಜಗತ್ತು ಯುಎಸ್ ಡಾಲರ್‌ಗೆ ಪರ್ಯಾಯ ಹುಡುಕುತ್ತಿರುವ ಸನ್ನಿವೇಶದಲ್ಲಿ ಆರ್‌ಬಿಐ ನ ಈ ಶಿಫಾರಸುಗಳು ಮಹತ್ವದ್ದಾಗಿವೆ.
ಏನಿದು ರೂಪಾಯಿ ಅಂತಾರಾಷ್ಟ್ರೀಕರಣ?: ರೂಪಾಯಿ ಅಂತಾರಾಷ್ಟ್ರೀಕರಣ ಎಂಬುದು ಗಡಿಯಾಚೆಗಿನ ವಹಿವಾಟುಗಳಲ್ಲಿ ರೂಪಾಯಿಯ ಬಳಕೆಯನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ಇದು ಆಮದು ಮತ್ತು ರಫ್ತು ವ್ಯಾಪಾರಕ್ಕಾಗಿ ರೂಪಾಯಿ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ನಂತರ ಇತರ ಚಾಲ್ತಿ ಖಾತೆಯ ವಹಿವಾಟುಗಳನ್ನು ಒಳಗೊಂಡಿರುತ್ತದೆ. ನಂತರ ಬಂಡವಾಳ ಖಾತೆಯ ವಹಿವಾಟುಗಳಲ್ಲಿ ಕೂಡ ರೂಪಾಯಿಯ ಬಳಕೆಯನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಭಾರತದಲ್ಲಿನ ನಿವಾಸಿಗಳು ಮತ್ತು ಅನಿವಾಸಿಗಳ ನಡುವಿನ ವಹಿವಾಟುಗಳಾಗಿವೆ.
ರೂಪಾಯಿ ಅಂತಾರಾಷ್ಟ್ರೀಕರಣಕ್ಕೆ ಕರೆನ್ಸಿ ಸೆಟ್ಲಮೆಂಟ್ ಮತ್ತು ಬಲವಾದ ಸ್ವಾಪ್ ಮತ್ತು ವಿದೇಶೀ ವಿನಿಮಯ ಮಾರುಕಟ್ಟೆಯನ್ನು ಮತ್ತಷ್ಟು ಸರಳಗೊಳಿಸುವ ಅಗತ್ಯವಿದೆ. ಎಲ್ಲದಕ್ಕೂ ಮುಖ್ಯವಾಗಿ ಬಂಡವಾಳ ಖಾತೆಯಲ್ಲಿನ ಕರೆನ್ಸಿಯ ಸಂಪೂರ್ಣ ಪರಿವರ್ತನೆಯ (full convertibility) ಅಗತ್ಯವಿರುತ್ತದೆ ಮತ್ತು ಯಾವುದೇ ನಿರ್ಬಂಧಗಳಿಲ್ಲದೆ ಹಣದ ಗಡಿಯಾಚೆಗಿನ ವರ್ಗಾವಣೆಗೆ ಅವಕಾಶ ನೀಡುವುದು ಅಗತ್ಯವಿರುತ್ತದೆ. ಭಾರತವು ಚಾಲ್ತಿ ಖಾತೆಯಲ್ಲಿ ಮಾತ್ರ ಸಂಪೂರ್ಣ ಪರಿವರ್ತನೆಯನ್ನು ಅನುಮತಿಸಿದೆ.
ಸದ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ವಿಶೇಷ ಅಧಿಕಾರ: ಪ್ರಸ್ತುತ ಅಮೆರಿಕ ಡಾಲರ್ ಅತಿಯಾದ ವಿಶೇಷಾಧಿಕಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಪ್ರಪಂಚದ ಇತರ ಎಲ್ಲಾ ದೇಶಗಳು ಯುಎಸ್ ಡಾಲರ್ ಅನ್ನು ತಮ್ಮ ಅಂತಾರಾಷ್ಟ್ರೀಯ ವಹಿವಾಟುಗಳಲ್ಲಿ ತಮ್ಮ ಕರೆನ್ಸಿಯಾಗಿ ಬಳಸುವುದರಿಂದ ಅಮೆರಿಕಕ್ಕಾಗುವ ಲಾಭಗಳನ್ನು ಇದು ಉಲ್ಲೇಖಿಸುತ್ತದೆ. ಡಾಲರ್‌ನ ಸ್ಥಿರತೆಯು ಅಮೆರಿಕದ ಆರ್ಥಿಕತೆಯ ಗಾತ್ರ, ಅದರ ವ್ಯಾಪಾರ ಮತ್ತು ಹಣಕಾಸು ಜಾಲಗಳ ವ್ಯಾಪ್ತಿ, ಯುಎಸ್ ಹಣಕಾಸು ಮಾರುಕಟ್ಟೆಗಳ ಆಳ ಮತ್ತು ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಕರೆನ್ಸಿ ಪರಿವರ್ತನೆಯ ಇತಿಹಾಸವನ್ನು ಒಳಗೊಂಡಂತೆ ಹಲವಾರು ಅಂಶಗಳಿಂದ ಬೆಂಬಲಿತವಾಗಿದೆ. ಇನ್ನು ಡಾಲರ್‌ಗೆ ಬೇರೆ ಪರ್ಯಾಯವಿಲ್ಲದ ಕಾರಣದಿಂದಲೂ ಡಾಲರ್ ಪ್ರಬಲವಾಗಿ ವಹಿವಾಟು ನಡೆಸುತ್ತಿದೆ.
ಆರ್‌ಬಿಐನ ವರ್ಕಿಂಗ್ ಗ್ರೂಪ್ ಪ್ರಕಾರ, ಯುಎಸ್ ಡಾಲರ್‌ಗೆ ಚೀನಾದ ರೆನ್ಮಿನ್ಬಿ ನೇರವಾದ ಪ್ರತಿಸ್ಪರ್ಧಿಯಾಗಿದೆ. ಆದಾಗ್ಯೂ, US ಡಾಲರ್‌ಗೆ ಪ್ರತಿಸ್ಪರ್ಧಿಯಾಗುವ ಅದರ ಸಾಮರ್ಥ್ಯವು ಯುಎಸ್ ಮತ್ತು ಚೀನಾ ಎರಡರ ಭವಿಷ್ಯದ ನೀತಿಗಳನ್ನು ಅವಲಂಬಿಸಿರುತ್ತದೆ. ಚೀನೀ ಆರ್ಥಿಕತೆಯ ಸಾಮರ್ಥ್ಯ ಮತ್ತು ಅದರ ಆರ್ಥಿಕ ವ್ಯವಸ್ಥೆಯಲ್ಲಿ ದೀರ್ಘಾವಧಿಯ ಸ್ಥಿರತೆ, ಸಮಗ್ರತೆ, ಪಾರದರ್ಶಕತೆ, ಮುಕ್ತತೆ ಮತ್ತು ಸ್ಥಿರತೆಗಳು ಇದರ ಮೇಲೆ ಪರಿಣಾಮ ಬೀರಲಿವೆ.
ರೂಪಾಯಿ ಅಂತಾರಾಷ್ಟ್ರೀಕರಣದ ಪ್ರಯೋಜನಗಳು: ಗಡಿಯಾಚೆಗಿನ ವಹಿವಾಟುಗಳಲ್ಲಿ ರೂಪಾಯಿಯ ಬಳಕೆಯು ಭಾರತೀಯ ವ್ಯವಹಾರಗಳಿಗೆ ಕರೆನ್ಸಿ ಅಪಾಯ ಕಡಿಮೆ ಮಾಡುತ್ತದೆ. ಕರೆನ್ಸಿ ಚಂಚಲತೆಯಿಂದ ಸಿಗುವ ರಕ್ಷಣೆಯು ವ್ಯಾಪಾರದ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ, ವ್ಯಾಪಾರದ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಭಾರತೀಯ ವ್ಯವಹಾರಗಳು ಜಾಗತಿಕವಾಗಿ ಬೆಳೆಯುವ ಅವಕಾಶಗಳನ್ನು ಹೆಚ್ಚಿಸುತ್ತದೆ.
ವಿನಿಮಯ ದರದ ಚಂಚಲತೆಯನ್ನು ನಿರ್ವಹಿಸಲು ಮತ್ತು ಬಾಹ್ಯ ಸ್ಥಿರತೆಯನ್ನು ಯೋಜಿಸಲು ಮೀಸಲುಗಳು ಸಹಾಯ ಮಾಡುತ್ತವೆ. ರೂಪಾಯಿಯ ಅಂತಾರಾಷ್ಟ್ರೀಕರಣವು ವಿದೇಶಿ ವಿನಿಮಯ ಸಂಗ್ರಹವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ವಿದೇಶಿ ಕರೆನ್ಸಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರಿಂದ ಬಾಹ್ಯ ಆಘಾತಗಳಿಂದ ಭಾರತಕ್ಕೆ ಉಂಟಾಗಬಹುದಾದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ರೂಪಾಯಿಯ ಬಳಕೆಯು ಹೆಚ್ಚಾದಂತೆ ಭಾರತೀಯ ವ್ಯವಹಾರಗಳ ಚೌಕಾಶಿ ಸಾಮರ್ಥ್ಯವು ಸುಧಾರಿಸುತ್ತದೆ. ಭಾರತೀಯ ಆರ್ಥಿಕತೆಗೆ ಮೌಲ್ಯ ನೀಡುತ್ತದೆ ಮತ್ತು ಭಾರತದ ಜಾಗತಿಕ ಸ್ಥಾನಮಾನ ಮತ್ತು ಗೌರವವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಜಿಎಸ್ಟಿ ಸಂಗ್ರಹ ಶೇ 12ರಷ್ಟು ಹೆಚ್ಚಳ; ಏರುಗತಿಯಲ್ಲಿ ಭಾರತದ ಆರ್ಥಿಕತೆ