ಮುಂಬೈ: 2,000 ರೂಪಾಯಿ ನೋಟುಗಳನ್ನು ಇನ್ನೂ ಬದಲಾಯಿಸಿಕೊಳ್ಳದೇ ಇರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತಷ್ಟು ರಿಲೀಫ್ ನೀಡಿದೆ. ಬ್ಯಾಂಕ್‌ನಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮತ್ತೆ ಅವಕಾಶ ಕಲ್ಪಿಸಿದೆ.
ಈ ಮೊದಲು ಕೇಂದ್ರೀಯ ಬ್ಯಾಂಕ್, ಈ ನೋಟುಗಳನ್ನು ಹಿಂಪಡೆಯುವ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಿತ್ತು. ಈ ದಿನಾಂಕದವರೆಗೆ ಸಾರ್ವಜನಿಕರು ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು ಎಂದಿತ್ತು. ಆದರೆ ಇದೀಗ, ಈ ಗಡುವಿನ ನಂತರವೂ 2 ಸಾವಿರ ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ (legal tender) ಎಂದು ಸ್ಪಷ್ಟಪಡಿಸಿದೆ. ಆದರೆ ಆರ್‌ಬಿಐ ವಿತರಣಾ ಕಚೇರಿಗಳಲ್ಲಿ ಮಾತ್ರ ಇವುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಇಡಬಹುದು. ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೋಟುಗಳನ್ನು ಠೇವಣಿ ಮಾಡಲು/ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹ.
ವಿನಿಮಯ ಹೇಗೆ?: ಗ್ರಾಹಕರು ಆರ್‌ಬಿಐ ವಿತರಣಾ ಕಚೇರಿಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೋಟುಗಳನ್ನು ಭಾರತೀಯ ಅಂಚೆ ಮೂಲಕ ಆಯಾ ಆರ್‌ಬಿಐ ಕಚೇರಿಗಳಿಗೆ ಕಳುಹಿಸಬೇಕು. ಒಂದು ಬಾರಿಗೆ ಗರಿಷ್ಠ 20,000 ರೂ.ವರೆಗೆ ಮಾತ್ರ ಸಾಧ್ಯವಿದೆ. ಅಂದರೆ ಗ್ರಾಹಕರು ಒಂದೇ ಬಾರಿಗೆ ರೂ.20,000ಕ್ಕಿಂತ ಹೆಚ್ಚು ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತಿಲ್ಲ/ಠೇವಣಿ ಇಡುವಂತಿಲ್ಲ. ಒಬ್ಬ ವ್ಯಕ್ತಿ/ಕಂಪನಿಯು ತಮ್ಮ 2000 ರೂ ಮುಖಬೆಲೆಯ ನೋಟುಗಳನ್ನು ವಿತರಣಾ ಕಚೇರಿಯಲ್ಲಿ ಠೇವಣಿ ಮಾಡಿದಾಗ ಅಗತ್ಯವಿದ್ದಲ್ಲಿ ಅವರು ಗುರುತಿನ ದಾಖಲೆ ಸಲ್ಲಿಸಬೇಕಾಗುತ್ತದೆ.
ಶೇ 97ರಷ್ಟು ನೋಟುಗಳು ವಾಪಸ್: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆದ ಕುರಿತು ಆರ್‌ಬಿಐ ಮಾಹಿತಿ ನೀಡಿದೆ. ಇದುವರೆಗೆ ಶೇ.97ಕ್ಕೂ ಹೆಚ್ಚು ನೋಟುಗಳು ವಾಪಸಾಗಿವೆ. 10,000 ಕೋಟಿ ನೋಟುಗಳು ಮಾತ್ರ ಚಲಾವಣೆಯಲ್ಲಿವೆ ಎಂದು ತಿಳಿಸಿದೆ. 19 ಮೇ 2023ರಂದು ಈ ನೋಟುಗಳ ಅಮಾನ್ಯೀಕರಣದ ವೇಳೆಗೆ ದೇಶದಲ್ಲಿ3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಅಕ್ಟೋಬರ್ 31ರ ಸುಮಾರಿಗೆ ಈ ಪೈಕಿ ಶೇ 97ಕ್ಕಿಂತ ಹೆಚ್ಚು ನೋಟುಗಳು ಮರಳಿವೆ ಎಂದು ಅಪೆಕ್ಸ್ ಬ್ಯಾಂಕ್ ಮಾಹಿತಿ ನೀಡಿದೆ.
ಇದನ್ನೂ ಓದಿ: 500 ರೂ ನೋಟುಗಳನ್ನ ವಾಪಸ್ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್‌ಬಿಐ