ಬೆಂಗಳೂರು/ ಹೈದರಾಬಾದ್: ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾಫ್ಟವೇರ್ ಕಂಪನಿಗಳು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳಿಂದ ಕ್ಯಾಂಪಸ್ ನೇಮಕಾತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಆಗಸ್ಟ್ 2021 ರಿಂದ ಫೆಬ್ರವರಿ 2022 ರವರೆಗೆ ನೇಮಕಾತಿ ಮಾಡಿಕೊಂಡ ಪ್ರಮುಖ ಕಂಪನಿಗಳು ಈಗ ನೇಮಕಾತಿಯನ್ನು ನಿಧಾನ ಮಾಡಿವೆ. ಕೆಲ ಕಂಪನಿಗಳು ಮಾರ್ಚ್ 2023 ರ ನಂತರ ಕರೆ ಮಾಡುವುದಾಗಿ ಹೇಳುತ್ತಿವೆ. ಇನ್ನು ಕೆಲವೆಡೆ ಕಾಲೇಜುಗಳ ಕ್ಯಾಂಪಸ್ ನೇಮಕಾತಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಕಂಪನಿಗಳು: ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಐಟಿ ಕಂಪನಿಗಳು ಈಗಿನಿಂದಲೇ ನೇಮಕಾತಿಯಲ್ಲಿ ಎಚ್ಚರಿಕೆ ವಹಿಸುತ್ತಿವೆ. ಪ್ರಸ್ತುತ ಕ್ಯಾಂಪಸ್ ನೇಮಕಾತಿಯಲ್ಲಿ ಶೇ 25 ರಿಂದ ಶೇ 30ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ಹೇಳಿವೆ.
ಈ ಆರ್ಥಿಕ ಹಿಂಜರಿತ ಮುಂದಿನ ವರ್ಷ ಜುಲೈವರೆಗೆ ಇರಬಹುದು ಎಂದು ಐಟಿ ಕಂಪನಿಗಳು ಅಂದಾಜಿಸಿವೆ. ಕಳೆದ ವರ್ಷ ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳಲ್ಲಿ, ಏಪ್ರಿಲ್ ಮತ್ತು ಮೇನಲ್ಲಿ ಬಿ ಟೆಕ್ ತಾತ್ಕಾಲಿಕ ಪ್ರಮಾಣಪತ್ರಗಳನ್ನು ಪಡೆದ ಬಹುತೇಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಆರ್ಥಿಕ ಹಿಂಜರಿತದ ನಿರೀಕ್ಷೆಯಲ್ಲಿ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲು ಹಿಂಜರಿಯುತ್ತಿವೆ.
ಸಾಫ್ಟ್‌ವೇರ್ ಕಂಪನಿಗಳು ಈಗ ಹಂತ ಹಂತವಾಗಿ ನೇಮಕ ಮಾಡಿಕೊಳ್ಳುತ್ತಿವೆ. ಮೊದಲು ಕಡಿಮೆ ಸಂಖ್ಯೆಯ ನೇಮಕಾತಿಗಳನ್ನು ಮಾಡಿ ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವ ನೀತಿ ಅನುಸರಿಸಲಾಗುತ್ತಿದೆ. ಇಲ್ಲಿಯವರೆಗೆ ಬಹುತೇಕ ನೇಮಕಾತಿಗಳನ್ನು ಒಂದೇ ಬಾರಿಗೆ ಮಾಡಲಾಗುತ್ತಿತ್ತು. ಅಗತ್ಯ ಬಿದ್ದರೆ ಮತ್ತೆ ನೇಮಕಾತಿ ಮಾಡಲಾಗುತ್ತಿತ್ತು.
ಅರ್ಧಕ್ಕರ್ಧ ನೇಮಕ ಪ್ರಕ್ರಿಯೆ ಕಡಿತ: ಈ ಹಿಂದೆ 500 ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಅದರಲ್ಲಿ ಕನಿಷ್ಠ 200 ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದರು. ಆದರೆ ಈಗ ಅದು 100ಕ್ಕಿಂತ ಕಡಿಮೆಯಾಗಿದೆ. ಈಗಾಗಲೇ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಯನ್ನು ಮುಂದೂಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳಲ್ಲಿ ಆತಂಕ ಮುಂದುವರಿದಿದೆ.
ಇವರು ಈಗಾಗಲೇ ಆಯಾ ಕಂಪನಿಗಳು ನಿಗದಿಪಡಿಸಿದ ಸರ್ಟಿಫಿಕೇಟ್ ಕೋರ್ಸ್ ಮತ್ತು ಇಂಟರ್ನ್‌ಶಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸುಮಾರು ಎರಡ್ಮೂರು ತಿಂಗಳಿಂದ ಅಭ್ಯರ್ಥಿಗಳು ಮನೆಯಲ್ಲಿಯೇ ಇದ್ದಾರೆ. ನೇಮಕಾತಿ ಕುರಿತು ಕಂಪನಿಗಳನ್ನು ಸಂಪರ್ಕಿಸಿದರೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೆಲೆಕ್ಷನ್ ಆದರೂ ಆರ್ಡರ್ ಕೊಡಲು ಮೀನಮೇಷ: ಪ್ರಮುಖ ಸಾಫ್ಟ್‌ವೇರ್ ಕಂಪನಿಯೊಂದು ಬಿಟೆಕ್ ಮೂರನೇ ವರ್ಷ ಮತ್ತು ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ ಆಯ್ಕೆ ಮಾಡಿದೆ. ಕಂಪನಿಗಳು ಇಲ್ಲಿಯವರೆಗೆ ಅನುಸರಿಸಿದ ಕಾರ್ಯವಿಧಾನದ ಪ್ರಕಾರ, ಈ ವಿದ್ಯಾರ್ಥಿಗಳಿಗೆ ನಾಲ್ಕನೇ ವರ್ಷದ ಎರಡನೇ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್ ನೀಡಬೇಕು.
ಆದರೆ, ಸೆಮಿಸ್ಟರ್ ಮುಗಿಯುವ ಸಮಯ ಬಂದರೂ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದೆ. ಜುಲೈ 2023 ರ ನಂತರ ಇಂಟರ್ನ್‌ಶಿಪ್ ನೀಡಲಾಗುವುದು ಎಂದು ಈಗ ಕಂಪನಿ ಹೇಳುತ್ತಿದೆ. ಅಲ್ಲಿಯವರೆಗೆ ಪರ್ಯಾಯ ಮಾರ್ಗಗಳನ್ನು ನೋಡಿಕೊಳ್ಳುವಂತೆ ಕಾಲೇಜಿಗೆ ಇ-ಮೇಲ್ ಕಳುಹಿಸಲಾಗಿದೆ. ಮೊದಲಿಗೆ 12 ಲಕ್ಷ ರೂ.ವರೆಗೆ ಸಂಬಳದ ಪ್ಯಾಕೇಜ್ ನೀಡುವುದಾಗಿ ಹೇಳಲಾಗಿತ್ತಾದರೂ ಈಗ ಇದರ ಬಗ್ಗೆ ಯಾವುದೇ ಮಾತಿಲ್ಲ.
ಇದನ್ನೂ ಓದಿ: ಡಿವೋರ್ಸ್ಗಾಗಿ ಮ್ಯಾಟ್ರಿಮೊನಿಯಲ್ ಸೈಟ್ನಲ್ಲಿ ಹೆಂಡ್ತಿ ಪ್ರೊಫೈಲ್.. ಸಾಫ್ಟವೇರ್ ಗಂಡನ ಬಂಧನ