ಕ್ರೆಡಿಟ್ ಸ್ಕೋರ್ ಆಧರಿಸಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಮಿತಿ ನಿರ್ಧರಿಸುತ್ತವೆ. ಆದರೆ, ಕೆಲವೊಮ್ಮೆ ನಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಮಾಡಲಾಗುತ್ತದೆ, ಇನ್ನು ಕೆಲವೊಮ್ಮೆ ಈ ಮಿತಿಯನ್ನು ಹೆಚ್ಚಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಮಿತಿ ಇಳಿಕೆಗೆ ಕಾರಣಗಳು: ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಕೆಲವು ಇತಿಮಿತಿಗಳೊಂದಿಗೆ ಕಾರ್ಡ್ ನೀಡುತ್ತವೆ. ಆದರೆ, ಇವುಗಳನ್ನು ವಿತರಿಸುವ ಮುನ್ನ ಬ್ಯಾಂಕುಗಳು ಕೆಲ ವಿಷಯಗಳನ್ನು ಪರಿಗಣಿಸುತ್ತವೆ. ಮುಖ್ಯವಾಗಿ ವೈಯಕ್ತಿಕ ಆದಾಯ ಮತ್ತು ಸಕಾಲಿಕ ಪಾವತಿಗಳನ್ನು ಒಳಗೊಂಡಿರುತ್ತದೆ. ಇದರ ಆಧಾರದ ಮೇಲೆಯೇ ನೀಡಲಾದ ಕ್ರೆಡಿಟ್ ಕಾರ್ಡ್ ಮಿತಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬದಲಾವಣೆಯಿಂದಾಗಿ ನಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.
ಹೆಚ್ಚು ಬಳಸಿದರೆ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ : ಬ್ಯಾಂಕುಗಳು ತಮ್ಮ ಗ್ರಾಹಕರ ಕ್ರೆಡಿಟ್ ಕಾರ್ಡ್ ಬಳಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತವೆ. ನಿಶ್ಚಿತ ಕ್ರೆಡಿಟ್ ಮಿತಿಯಲ್ಲಿ ಎಷ್ಟು ಖರ್ಚು ಮಾಡಲಾಗುತ್ತಿದೆ? ಎಂಬುದನ್ನು ಕಾಲಕಾಲಕ್ಕೆ ಗಮನಿಸಲಾಗುತ್ತದೆ. ಉದಾಹರಣೆಗೆ, ಒಬ್ಬ ಗ್ರಾಹಕನಿಗೆ 2 ಲಕ್ಷ ರೂ.ಗಳ ಕ್ರೆಡಿಟ್ ಕಾರ್ಡ್ ಮಿತಿ ಇದೆ ಎಂದಿಟ್ಟುಕೊಳ್ಳಿ. ಅದರಲ್ಲಿ 60,000 - 80,000 ರೂ.ಗಳನ್ನು ಖರ್ಚು ಮಾಡಿದರೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ನೀವು ನೀಡಲಾದ ಮಿತಿಯಲ್ಲಿ 1,50,000 ರೂ. ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನಿಮ್ಮನ್ನು ಅಪಾಯಕಾರಿ ಗ್ರಾಹಕ ಎಂದು ಪರಿಗಣಿಸುತ್ತಾರೆ ಮತ್ತು ತಕ್ಷಣವೇ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡುತ್ತಾರೆ.
ದೀರ್ಘಕಾಲ ಕಾರ್ಡ್ ಬಳಸದಿದ್ದರೂ ಸಮಸ್ಯೆ : ದೀರ್ಘಕಾಲದವರೆಗೆ ಕ್ರೆಡಿಟ್ ಕಾರ್ಡ್ ಬಳಸದವರೂ ಸಹ ಕ್ರೆಡಿಟ್ ಮಿತಿ ಸಮಸ್ಯೆಯನ್ನು ಎದುರಿಸುತ್ತಾರೆ. ಆಯಾ ಬ್ಯಾಂಕ್‌ಗಳು ಇನ್ - ಆಕ್ಟಿವೇಟೆಡ್ ಕ್ರೆಡಿಟ್ ಕಾರ್ಡ್‌ಗಳಿಂದ ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ. ಆದ್ದರಿಂದ ನಿಷ್ಕ್ರಿಯ ಕಾರ್ಡ್‌ದಾರರ ಮಿತಿಯನ್ನು ಬ್ಯಾಂಕ್‌ಗಳು ಕಡಿತ ಮಾಡುತ್ತವೆ.
ತಡವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ : ಕೆಲವರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದಿಲ್ಲ. ಇದರೊಂದಿಗೆ, ಬ್ಯಾಂಕ್‌ಗಳು ವಿಳಂಬ ಪಾವತಿಗಳ ಅಡಿ ಅವರಿಗೆ ಶುಲ್ಕ ವಿಧಿಸುತ್ತವೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಪಾವತಿ ವಿಳಂಬವಾದರೆ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಮಿತಿಯನ್ನು ತಗ್ಗಿಸುತ್ತವೆ.
ಇತರ ಕಾರಣಗಳು : ನೀವು ಕಡಿಮೆ ಅವಧಿಯಲ್ಲಿ ಹೆಚ್ಚು ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೂ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಮಿತಿಯನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಹಣಕಾಸಿನ ಅಸ್ಥಿರತೆ, ಭೌಗೋಳಿಕ ಮತ್ತು ರಾಜಕೀಯ ಅನಿಶ್ಚಿತತೆ ಉಂಟಾದಾಗ ಪೂರ್ವಭಾವಿ ನಷ್ಟಗಳನ್ನು ತಡೆಗಟ್ಟುವ ಸಲುವಾಗಿ ಬ್ಯಾಂಕ್‌ಗಳು ವ್ಯಕ್ತಿಗಳ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡುತ್ತವೆ. ಉದಾಹರಣೆಗೆ ಕೊರೊನಾ ವೈರಸ್ ಸಮಯದಲ್ಲಿ ಬ್ಯಾಂಕ್‌ಗಳು ಅನೇಕ ಕಾರ್ಡ್ ಹೊಂದಿರುವವರ ಕ್ರೆಡಿಟ್ ಮಿತಿಗಳನ್ನು ಕಡಿತಗೊಳಿಸಿದ್ದವು.
ಇದನ್ನೂ ಓದಿ : ಗೂಗಲ್ ಪೇ ಜೊತೆಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್: ಅನುಕೂಲವೇನು?
ಕ್ರೆಡಿಟ್ ಕಾರ್ಡ್ ಮಿತಿ ಮೇಲೆ ಕಣ್ಣಿಡಿ : ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆಯಾಗಿದ್ದರೆ ಮೊದಲು ಸಂಬಂಧಪಟ್ಟ ಬ್ಯಾಂಕ್ ಗ್ರಾಹಕ ಸೇವೆಯನ್ನು ಸಂಪರ್ಕಿಸಬೇಕು. ಬಳಿಕ, ಕಾರ್ಡ್ ಮಿತಿಯನ್ನು ಕಡಿಮೆ ಮಾಡಲು ಕಾರಣವನ್ನು ವಿಚಾರಿಸಬೇಕು. ಕ್ರೆಡಿಟ್ ಸ್ಟೇಟ್‌ಮೆಂಟ್‌ನಲ್ಲಿ ಯಾವುದೇ ತಪ್ಪು ಕಂಡುಬಂದರೆ ಅದನ್ನು ತಕ್ಷಣವೇ ಸರಿಪಡಿಸಬೇಕು. ಬಳಕೆದಾರರ ಒಟ್ಟಾರೆ ವೆಚ್ಚಗಳು ಮತ್ತು ಪಾವತಿಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಹೆಚ್ಚಳ ಮತ್ತು ಇಳಿಕೆಗಳನ್ನು ಮಾಡಲಾಗುತ್ತದೆ. ಹಾಗಾಗಿ, ಯಾವಾಗಲೂ ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ನಿಗಾ ಇರಿಸಿ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ.. ಆಗಾಗ ಕ್ರೆಡಿಟ್ ಸ್ಕೋರ್ ಮೇಲೆ ಗಮನ ಹರಿಸಿ!