ನವದೆಹಲಿ: ಕಚ್ಚಾ ತೈಲದ ಬೆಲೆ 110 ಡಾಲರ್ ಗೆ ಏರಿದರೆ, ಆರ್ಬಿಐ ಮತ್ತೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕ್ ಮೋರ್ಗನ್ ಸ್ಟಾನ್ಲಿ ನಿರೀಕ್ಷಿಸಿದೆ. ಭಾರತವು ತನ್ನ ಕಚ್ಚಾ ತೈಲದ ಶೇಕಡಾ 80 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ, ಕಚ್ಚಾ ತೈಲದ ಬೆಲೆ ಏರಿಕೆಯಾದಲ್ಲಿ ಅದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ತೈಲ ಬೆಲೆ 10 ಡಾಲರ್ ಹೆಚ್ಚಾದಲ್ಲಿ ಅದರಿಂದ ಹಣದುಬ್ಬರವು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಗುತ್ತದೆ. ಮತ್ತು ಚಾಲ್ತಿ ಖಾತೆ ಸಮತೋಲನದಲ್ಲಿ ಇದರಿಂದ 30 ಬೇಸಿಸ್ ಪಾಯಿಂಟ್ ವಿಸ್ತರಣೆಯಾಗುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ವರದಿ ತಿಳಿಸಿದೆ.
ಕಚ್ಚಾ ತೈಲ ದರ 10 ಡಾಲರ್ ಏರಿಕೆ ಆದರೆ ಕ್ರಮ ಸಾಧ್ಯತೆ: "ತೈಲ ದರಗಳು ಬ್ಯಾರೆಲ್ಗೆ 110 ಡಾಲರ್ಗಿಂತ ಹೆಚ್ಚಾದಲ್ಲಿ ಅದು ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತದೆ. ಇದರ ಪರಿಣಾಮವಾಗಿ ದೇಶೀಯ ಇಂಧನ ಬೆಲೆಗಳು ಮತ್ತು ಎರಡನೇ ಸುತ್ತಿನ ಹಣದುಬ್ಬರ ಪರಿಣಾಮಗಳು ಉಂಟಾಗುತ್ತವೆ" ಎಂದು ಸ್ಟಾನ್ಲಿ ಹೇಳಿದೆ. ಚಾಲ್ತಿ ಖಾತೆ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 2.5 ರ ಮಿತಿಯನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಆರ್ಥಿಕ ದರ ಕುಂಠಿತ ಬಯಸದ ಆರ್ಬಿಐ: ಬಡ್ಡಿದರ ಹೆಚ್ಚಿಸಿ ಬೆಳವಣಿಗೆ ಕುಂಠಿತಗೊಳಿಸಲು ಬಯಸದ ಆರ್ಬಿಐ ಈ ವರ್ಷ ತನ್ನ ರೆಪೊ ದರವನ್ನು ತಡೆಹಿಡಿದಿದೆ. ಆದಾಗ್ಯೂ, ಆರ್ಬಿಐನ ನೀತಿಯು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಬ್ಯಾರೆಲ್ಗೆ 85 ಡಾಲರ್ ಕಚ್ಚಾ ತೈಲ ಬೆಲೆಯನ್ನು ಆಧರಿಸಿದೆ. ತೈಲ ಬೆಲೆಗಳು ಬ್ಯಾರೆಲ್ಗೆ 95 ಡಾಲರ್ ಇದ್ದರೆ, ಭಾರತೀಯ ಆರ್ಥಿಕತೆಯು ಸರಾಗವಾಗಿ ನಿರ್ವಹಿಸಲ್ಪಡುತ್ತದೆ ಮತ್ತು ಆರ್ಬಿಐ ಬಡ್ಡಿದರ ಹೆಚ್ಚಿಸುವ ಅಗತ್ಯವಿರುವುದಿಲ್ಲ ಮೋರ್ಗನ್ ಸ್ಟಾನ್ಲಿ ಅಭಿಪ್ರಾಯಪಟ್ಟಿದೆ.
ಭಾರತದ ಕಚ್ಚಾ ತೈಲ ಆಮದು ಬೆಲೆಗಳು ನವೆಂಬರ್ 2 ರ ವೇಳೆಗೆ ಬ್ಯಾರೆಲ್ಗೆ ಸರಾಸರಿ 87.09 ಡಾಲರ್ ಆಗಿತ್ತು. ಇದು ಅಕ್ಟೋಬರ್ ಪೂರ್ಣ ತಿಂಗಳಲ್ಲಿ ಬ್ಯಾರೆಲ್ಗೆ ಸರಾಸರಿ 90.08 ಡಾಲರ್ ಇತ್ತು. ಮುಂಬರುವ ಚುನಾವಣೆಗಳ ನಂತರ ಭಾರತದಲ್ಲಿ ದುರ್ಬಲ ಸರ್ಕಾರ ಸ್ಥಾಪನೆಯಾದರೆ ಹಣಕಾಸು ಮಾರುಕಟ್ಟೆಗಳಿಗೆ ತೀವ್ರ ಹೊಡೆತ ಬೀಳಲಿದೆ. ಇದು ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಮತ್ತು ಪೂರೈಕೆ ಕ್ಷೇತ್ರದ ಸುಧಾರಣೆಗಳನ್ನು ಜಾರಿಗೆ ತರಲು ಕಾರಣವಾಗಬಹುದು" ಎಂದು ಮೋರ್ಗನ್ ಸ್ಟಾನ್ಲಿ ವರದಿ ತಿಳಿಸಿದೆ.
ಇದನ್ನೂ ಓದಿ : ಸೆಪ್ಟೆಂಬರ್ನಲ್ಲಿ ಪ್ರಮುಖ ಹಣದುಬ್ಬರ ಶೇ 4.5ಕ್ಕೆ ಇಳಿಕೆ; ಹಣಕಾಸು ಸಚಿವಾಲಯ ಹೇಳಿಕೆ