ನವದೆಹಲಿ: ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (Payments Infrastructure Development Fund - PIDF) ಯೋಜನೆಯ ಅವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಇದೇ ವೇಳೆ, ಈ ಯೋಜನೆಯಡಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇಂದು ಎರಡನೇ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಿ ಅವರು, ಈ ವಿಷಯವನ್ನು ತಿಳಿಸಿದರು.
2021ರ ಜನವರಿಯಲ್ಲಿ ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯು ಪಾವತಿ ಸ್ವೀಕಾರ ಮೂಲಸೌಕರ್ಯಗಳಾದ ಭೌತಿಕ ಪಾಯಿಂಟ್ ಆಫ್ ಸೇಲ್ (Point of Sale - PoS), ಕ್ವಿಕ್ ರೆಸ್ಪಾನ್ಸ್ (Quick Response -QR) ಕೋಡ್‌ಗಳನ್ನು ಟೈರ್-3 ನಗರಗಳಿಂದ ಟೈರ್-6 ನಗರಗಳು, ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರೋತ್ಸಾಹಿಸುವ ಗುರಿ ಹೊಂದಿದೆ. ಇದರ ಮೂಲ ಯೋಜನೆಯ ಪ್ರಕಾರ, ಪಿಐಡಿಎಫ್ ಯೋಜನೆಯ ಅವಧಿಯನ್ನು 2023ರ ಡಿಸೆಂಬರ್ರವರೆಗೆ ಮೂರು ವರ್ಷಗಳ ಅವಧಿಗೆ ನಿಗದಿಪಡಿಸಲಾಗಿದೆ. ಇದೀಗ ಈ ಯೋಜನೆಯನ್ನು ಇನ್ನೂ ಎರಡು ವರ್ಷಗಳ ಅವಧಿ ಎಂದರೆ 2025ರ ಡಿಸೆಂಬರ್ 31ರ ರವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಮಾಹಿತಿ ನೀಡಿದರು.
ಇದೇ ವೇಳೆ, ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳನ್ನು ಟೈರ್-1 ಮತ್ತು ಟೈರ್ 3 ನಗರಗಳನ್ನು 2021ರ ಆಗಸ್ಟ್ನಲ್ಲಿ ಪಿಐಡಿಎಫ್ ಯೋಜನೆಯಡಿ ಸೇರಿಸಲಾಗಿದೆ. 2023ರ ಆಗಸ್ಟ್ ಅಂತ್ಯದ ವೇಳೆಗೆ ಯೋಜನೆಯ ಅಡಿ 2.66 ಕೋಟಿಗೂ ಹೆಚ್ಚು ಹೊಸ ಟಚ್ ಪಾಯಿಂಟ್‌ಗಳನ್ನು ನಿಯೋಜಿಸಲಾಗಿದೆ. ಇದೀಗ ಪಿಐಡಿಎಫ್ ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಣೆಯೊಂದಿಗೆ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳನ್ನು ಎಲ್ಲ ಕೇಂದ್ರಗಳಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಪಿಐಡಿಎಫ್ ಯೋಜನೆಯಡಿ ಉದ್ದೇಶಿತ ಫಲಾನುಭವಿಗಳನ್ನು ವಿಸ್ತರಿಸುವ ನಿರ್ಧಾರವು ತಳಮಟ್ಟದಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್‌ನ ಪ್ರಯತ್ನಗಳಿಗೆ ಪೂರಕವಾಗಿದೆ. ಇದಲ್ಲದೇ, ಉದ್ಯಮದಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ, ಸೌಂಡ್‌ಬಾಕ್ಸ್ ಸಾಧನಗಳು ಮತ್ತು ಆಧಾರ್ ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಸಾಧನಗಳಂತಹ ಪಾವತಿ ಸ್ವೀಕಾರದ ಉದಯೋನ್ಮುಖ ವಿಧಾನಗಳ ಅಳವಡಿಕೆಯನ್ನು ಪಿಐಡಿಎಫ್ ಯೋಜನೆಯಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಳೆದ ತಿಂಗಳು ಪ್ರಧಾನಿ ಮೋದಿ, ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಕುಶಲಕರ್ಮಿಗಳಿಗೆ ನೀಡುವ ಸಾಲಕ್ಕೆ ಶೇ.8ರಷ್ಟು ಸಬ್ಸಿಡಿ ಕಲ್ಪಿಸಲಾಗುತ್ತದೆ. ಅಕ್ಕಸಾಲಿಗ, ಕಮ್ಮಾರ, ಗಾರೆ, ಶಿಲ್ಪ, ಕ್ಷೌರಿಕ ಮತ್ತು ದೋಣಿ ತಯಾರಕರು ಸೇರಿದಂತೆ 18 ಕ್ಷೇತ್ರಗಳ ಕುಶಲಕರ್ಮಿಗಳು ಯೋಜನೆಯಡಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಆರಂಭದಲ್ಲಿ 1 ಲಕ್ಷ ರೂ. ಸಾಲ ನೀಡಲಾಗುತ್ತದೆ. ಫಲಾನುಭವಿಯು 18 ತಿಂಗಳಲ್ಲಿ ತನ್ನ ಸಾಲ ಮರುಪಾವತಿಸಿದ ನಂತರ 2 ಲಕ್ಷ ರೂ. ಸಾಲ ಒದಗಿಸಲಾಗುತ್ತದೆ. ಈ ಯೋಜನೆಯು ಕೇವಲ ಹಣಕಾಸಿನ ನೆರವು ಮಾತ್ರವಲ್ಲದೇ ಸುಧಾರಿತ ಕೌಶಲ್ಯ ತರಬೇತಿ ಸೇರಿದಂತೆ ಇತರ ಸಾಮಾಜಿಕ ಭದ್ರತೆ ಅಂಶಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್ಬಿಐ... ಸಾಲಗಾರರಿಗೆ ಇಲ್ಲ ಯಾವುದೇ ಚಿಂತೆ!