ಇಸ್ಲಾಮಾಬಾದ್: ಒಂದು ದೇಶ ಆರ್ಥಿಕ, ರಾಜಕೀಯ ಸಾರ್ವಭೌಮತ್ವ ಸಾಧಿಸದೇ ಇದ್ದರೆ ಏನೇನೆಲ್ಲ ಗಂಭೀರ ಸ್ವರೂಪದ ಸಮಸ್ಯೆಗಳು ಎದುರಾಗಬಹುದು ಎಂಬುದಕ್ಕೆ ಪಾಕಿಸ್ತಾನವೇ ಜ್ವಲಂತ ಸಾಕ್ಷಿ. ಇರಾನ್ನಿಂದ ಅಗ್ಗದ ಇಂಧನ ಆಮದು ಮಾಡಿಕೊಳ್ಳಲು ಬಹುಕೋಟಿ ವೆಚ್ಚದ ಯೋಜನೆ ರೂಪಿಸಿ, ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನದ ಮೇಲೆ ಅಮೆರಿಕ ಗದಾಪ್ರಹಾರ ಮಾಡಿದೆ ಎಂದೇ ಹೇಳಲಾಗುತ್ತಿದೆ. ವಿಶ್ವದ ದೊಡ್ಡಣ್ಣ (ಅಮೆರಿಕ) ತನ್ನ ಗುರಿ ಸಾಧನೆಗಾಗಿ ಪಾಕ್-ಇರಾನ್ ಅನಿಲ ಒಪ್ಪಂದವನ್ನೇ ಮುರಿಯುವಂತೆ ಮಾಡಿದ್ದಾನೆ.
ಯೋಜನೆಯ ವಿವರ: ತೀವ್ರ ಆರ್ಥಿಕ ಹಿಂಜರಿತದಿಂದ ನಲುಗಿರುವ ಪಾಕಿಸ್ತಾನ ತನ್ನ ನೆರೆ ದೇಶ ಇರಾನ್ನಿಂದ ಅಗ್ಗದ ದರದಲ್ಲಿ ಅನಿಲ ಪೂರೈಕೆ ಒಪ್ಪಂದ ಮಾಡಿಕೊಂಡಿತ್ತು. ಮೊದಲು ಇದನ್ನು ಭಾರತ-ಪಾಕಿಸ್ತಾನ ಮತ್ತು ಇರಾನ್ ಸಹಯೋಗದಲ್ಲಿ ಯೋಜನೆ ರೂಪಿಸಲು ಮುಂದಾಗಿತ್ತು. ಕಾಲಾನಂತರದಲ್ಲಿ ಭಾರತ ಯೋಜನೆಯಿಂದ ಹಿಂದೆ ಸರಿದಿತ್ತು. ಬಳಿಕ ಪಾಕ್ ಮತ್ತು ಇರಾನ್ 7.5 ಬಿಲಿಯನ್ ಡಾಲರ್ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು.
ಕಳೆದ ವಾರ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದೊಲ್ಲಾಹಿಯಾನ್ ಪಾಕಿಸ್ತಾನಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಯೋಜನೆಯನ್ನು ಪೂರ್ಣಗೊಳಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. "ಇದು ಎರಡು ದೇಶಗಳ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಈಗಾಗಲೇ ಯೋಜನೆಯ ಭಾಗವಾಗಿ ಇರಾನ್ನಿಂದ 1,150 ಕಿಲೋಮೀಟರ್ ಪೈಪ್ಲೈನ್ನ ಹಾಕಲಾಗಿದೆ. ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಆರಂಭಿಸಬೇಕಿದೆ" ಎಂದು ಹೇಳಿದ್ದರು.
2013ರಲ್ಲಿ ಯೋಜನೆಗೆ ಒಪ್ಪಿಗೆ: ಪಾಕಿಸ್ತಾನದ ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಇರಾನ್ನ ಮಹಮೂದ್ ಅಹ್ಮದಿನೆಜಾದ್ 2013ರ ಮಾರ್ಚ್ನಲ್ಲಿ ಜಂಟಿಯಾಗಿ ಚಬಹಾರ್ ಬಳಿಯ ಗಬ್ದ್ನಲ್ಲಿ ಅಂದಿನ ಅಂದಾಜು ವೆಚ್ಚ 7.5 ಬಿಲಿಯನ್ ಡಾಲರ್ ಯೋಜನೆಗೆ ಅಂಕಿತ ಹಾಕಿದ್ದರು. ಅದಾದ ಬಳಿಕ ನಾನಾ ಕಾರಣಗಳಿಗಾಗಿ ಕುಂಟುತ್ತಾ ಸಾಗಿದ್ದ ಯೋಜನೆ ಸ್ಥಗಿತಕ್ಕೆ ಅಮೆರಿಕ ಈಗ ತೀವ್ರ ಒತ್ತಡ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಮೆರಿಕದ ಒತ್ತಡವೇಕೆ?: ಸದ್ಯ ಪಾಕಿಸ್ತಾನಕ್ಕೆ ಅಮೆರಿಕದಿಂದ ಮಾತ್ರ ಹಣಕಾಸಿನ ನೆರವು ಸಿಗುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೆರವಿನೊಂದಿಗೆ 3 ಬಿಲಿಯನ್ ಡಾಲರ್ ಸಾಲ ನೀಡಲು ಅಮೆರಿಕ ಮುಂದಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಇದು ಸದ್ಯಕ್ಕೆ ಅತಿ ಅಗತ್ಯ. ಹೀಗಾಗಿ ಆ ದೇಶದ ಹಂಗಿನಲ್ಲಿ ಸಿಲುಕಿರುವ ರಾಷ್ಟ್ರ ದೊಡ್ಡಣ್ಣನ ತಾಳಕ್ಕೆ ಕುಣಿಯುವಂತಾಗಿದೆ.
ಇತ್ತ ಇರಾನ್ ಮತ್ತು ಅಮೆರಿಕದ ಮಧ್ಯೆ ಪರಮಾಣು ವಿಚಾರವಾಗಿ ಮೊದಲಿನಿಂದಲೂ ಸಂಘರ್ಷ ನಡೆಯುತ್ತಿದೆ. ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಬೆದರಿಕೆಗಳನ್ನು ಹತ್ತಿಕ್ಕಲು ಇರಾನ್ ಮೇಲೆ ಅಮೆರಿಕ ಹಲವಾರು ನಿರ್ಬಂಧ ವಿಧಿಸಿದೆ. ಇರಾನ್ ವಿರುದ್ಧ ಹೋರಾಡುತ್ತಿರುವಾಗಲೇ ಪಾಕಿಸ್ತಾನ ತನ್ನ ಶತ್ರುರಾಷ್ಟ್ರದೊಂದಿಗೆ ಬಹುಕೋಟಿ ಯೋಜನೆಗೆ ಮುಂದಾಗಿದ್ದು ಅಮೆರಿಕಕ್ಕೆ ಸರಿಕಾಣಲಿಲ್ಲ. ಇದರಿಂದ ಯೋಜನೆಯನ್ನೇ ಕೈಬಿಡಲು ಒತ್ತಡ ಹೇರಿದೆ ಎಂದು ವರದಿಯಾಗಿದೆ.
ಇರಾನ್ ಜೊತೆಗಿನ ಯೋಜನೆಯು ದಿನಕ್ಕೆ 750 ಮಿಲಿಯನ್ ಘನ ಅಡಿಗಳಷ್ಟು ಅನಿಲವನ್ನು ಪೂರೈಸುವ ಗುರಿ ಹೊಂದಿತ್ತು. ಆದರೆ, ಇದನ್ನು ಅಮೆರಿಕ ಅಧಿಕಾರಿಗಳು ಬಹಿರಂಗವಾಗಿ ಮತ್ತು ರಾಜತಾಂತ್ರಿಕವಾಗಿ ತೀವ್ರವಾಗಿ ವಿರೋಧಿಸಿದರು.
ಅಮೆರಿಕದ ಒತ್ತಡಕ್ಕೆ ಮಣಿದ ಆರೋಪದ ಮೇಲೆ ಇರಾನ್ ಜೊತೆ ಮಾಡಿಕೊಂಡಿದ್ದ ಅನಿಲ ಯೋಜನೆಯನ್ನು ಪಾಕಿಸ್ತಾನ ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂದು ಘೋಷಿಸಿದೆ. ಅನಿಲ ಮಾರಾಟ ಮತ್ತು ಖರೀದಿ ಒಪ್ಪಂದದ (ಜಿಎಸ್ಪಿಎ) ಕುರಿತು ಪಾಕಿಸ್ತಾನ ಇರಾನ್ಗೆ ಫೋರ್ಸ್ ಮಜ್ಯೂರ್ ಮತ್ತು ಎಕ್ಸ್ಕ್ಯೂಸಿಂಗ್ ಈವೆಂಟ್ ನೋಟಿಸ್ ನೀಡಿದೆ. ಸದ್ಯಕ್ಕೆ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ ಸಂಸತ್ತಿನಲ್ಲಿ ಘೋಷಿಸಿದ್ದರು.
ಇದನ್ನೂ ಓದಿ: ಜುಕರ್ಬರ್ಗ್ - ಎಲೋನ್ ಮಸ್ಕ್ ಕೇಜ್ ಫೈಟ್ ಎಕ್ಸ್ನಲ್ಲಿ ಪ್ರಸಾರ!