ನವದೆಹಲಿ: ಎನ್‌ಎಸ್‌ಇ ನಿಫ್ಟಿ 83.90 ಅಂಕಗಳ ಏರಿಕೆ ಕಾಣುವ ಏರಿಕೆ ಕಂಡು 19,833.15 ಅಂಕಗಳ ದಾಖಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಮುಗಿಸಿದೆ ಎಂದು ಹೆಚ್ಡಿಎಫ್ಸಿ ಸೆಕ್ಯುರಿಟೀಸ್ನ ತಾಂತ್ರಿಕ ಸಂಶೋಧನಾ ವಿಶ್ಲೇಷಕ ನಾಗರಾಜ್ ಶೆಟ್ಟಿ ತಿಳಿಸಿದ್ದಾರೆ.
ಸಕಾರಾತ್ಮಕ ಏರಿಕೆಯೊಂದಿಗೆ ದಿನದ ವಹಿವಾಟು ಪ್ರಾರಂಭವಾದ ನಂತರ 19,833.15 ಅಂಕಗಳಲ್ಲಿ ನಿಫ್ಟಿ ಹೊಸ ಸಾರ್ವಕಾಲಿಕ ಹಾಗೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಮುಗಿಸಿತು ಎಂದಿದ್ದಾರೆ. ಎನ್‌ಎಸ್‌ಇ ನಿಫ್ಟಿ 50ಯು 83.90 ಅಂಕ ಅಥವಾ ಶೇ. 0.42ರಷ್ಟು ಏರಿಕೆ ಕಂಡು 19,833.15 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಬಲವಾದ ಕಾರ್ಯಕ್ಷಮತೆ ಪ್ರದರ್ಶಿಸುವ ಮೂಲಕ ಇದು ದಿನದ ವಹಿವಾಟಿನಲ್ಲಿ 102.45 ಅಂಕ ಅಥವಾ ಶೇ.0.51ರಷ್ಟು ಗಳಿಕೆ ಕಂಡು 19,851.70ರ ಮಟ್ಟಕ್ಕೂ ಮುಟ್ಟಿತ್ತು.
ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಮಾತನಾಡಿ, ದೇಶೀಯ ಹೂಡಿಕೆದಾರರು ಭಾರತೀಯ ಆರ್ಥಿಕತೆಯ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದನ್ನು ತೋರಿಸುತ್ತಿದೆ. ಇದು ದೇಶೀಯ ಸ್ಥೂಲ ಆರ್ಥಿಕ ದತ್ತಾಂಶ ಮತ್ತು ಎಫ್‌ಐಐಗಳಿಂದ ನಿರಂತರ ಒಳಹರಿವುಗಳನ್ನು ಉತ್ತೇಜಿಸುವ ಮೂಲಕ ಷೇರುಪೇಟೆ ಬಲಗೊಂಡಿರುವುದನ್ನು ಅರಿಯಬಹುದಾಗಿದೆ ಎಂದಿದ್ದಾರೆ. ಇಂದು ಕೆಲವು ಆರಂಭಿಕ ಲಾಭದ ಬುಕ್ಕಿಂಗ್ ಇದ್ದರೂ, ಮಾರುಕಟ್ಟೆಯು ಆತ್ಮವಿಶ್ವಾಸದಿಂದ ಚೇತರಿಸಿಕೊಂಡಿದೆ. ಆಟೋ ಮತ್ತು ಐಟಿ ಹೊರತುಪಡಿಸಿ ಎಲ್ಲಾ ಪ್ರಮುಖ ವಲಯಗಳಲ್ಲಿ ಹೂಡಿಕೆದಾರರು ಷೇರುಗಳನ್ನು ಖರೀದಿಸಿರುವುದನ್ನು ಗಮನಿಸಬಹುದಾಗಿದೆ. ಜಾಗತಿಕ ಹಣದುಬ್ಬರ ಇಳಿಕೆಯ ಕಾರಣದಿಂದಾಗಿ ಷೇರುಮಾರುಕಟ್ಟೆ ಚೇತರಿಕೆ ಕಾಣುವಂತಾಗಿದೆ ಎಂದು ನಾಯರ್ ವಿಶ್ಲೇಷಿಸಿದ್ದಾರೆ.
ವಿಶಾಲ ವಲಯಗಳ ಲಾಭಗಳು ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಷೇರುಗಳ ನೆರವಿನಿಂದ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ 67,000 ಅಂಕಗಳ ಮಟ್ಟಕ್ಕಿಂತ ಮೇಲೆ ವಹಿವಾಟು ಕೊನೆಗೊಳಿಸಿದೆ. ಕಳೆದ ಕೆಲವು ದಿನಗಳ ವಹಿವಾಟಿನಲ್ಲಿ ಐಟಿ ಸಂಸ್ಥೆಗಳ ಷೇರುಗಳ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.
66,000 ಅಂಕಗಳ ಮೈಲಿಗಲ್ಲು ದಾಟಿದ ಬಿಎಸ್‌ಇ ಸೆನ್ಸೆಕ್ಸ್: ಗುರುವಾರ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 66,000 ಅಂಕಗಳ ಮೈಲಿಗಲ್ಲನ್ನು ದಾಟಿತ್ತು. ಇಂದು ಆ ಅಂಕಗಳನ್ನೂ ಮೀರಿ 67 ಸಾವಿರದ ಗಡಿಯತ್ತ ದಾಪುಗಾಲು ಇಟ್ಟಿದೆ. ಕಳೆದ ಕೆಲ ತಿಂಗಳ ಹಿಂದೆ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ 70 ಸಾವಿರದ ಗಡಿ ದಾಟಲಿದೆ ಎಂದು ಹೂಡಿಕೆ ತಜ್ಞರು ಭವಿಷ್ಯ ನುಡಿದಿದ್ದರು. ಅವರ ಊಹೆ ಮತ್ತು ಅಂದಾಜು ನಿಜವಾಗುವ ಸಾಧ್ಯತೆಗಳಿವೆ.
ಇದೇನೇ ಇದ್ದರು, ಸಾರ್ವಕಾಲಿಕೆ ಏರಿಕೆ ಕಂಡಿರುವ ಷೇರು ಸೂಚ್ಯಂಕ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸಣ್ಣ ಹೂಡಿಕೆದಾರರು ಎಚ್ಚರಿಕೆಯಿಂದ ಷೇರು ವ್ಯವಹಾರ ನಡೆಸಬೇಕು ಎಂದು ಹೂಡಿಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: BSE Sensex: ಮೊದಲ ಬಾರಿಗೆ 66,000 ಗಡಿ ಮೀರಿ ಹೊಸ ದಾಖಲೆ!