ನವದೆಹಲಿ: ಪ್ರಸ್ತುತ ಷೇರುಮಾರುಕಟ್ಟೆ ಮೇಲ್ಮಟ್ಟದಲ್ಲಿ ಚಲಿಸುತ್ತಿದೆ. ಷೇರು ಮಾರುಕಟ್ಟೆ ವ್ಯವಹಾರ ಔನತ್ಯದಲ್ಲಿರುವುದು ಹೂಡಿಕೆದಾರರು ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ಷೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವ ಏರಿಕೆಯನ್ನು ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮುಂದಾಗುವುದು ಕಾಮನ್.
ಹಾಗಾಗಿ ಸಣ್ಣ ಹೂಡಿಕೆದಾರರು ಎಚ್ಚರಿಕೆಯಿಂದ ಷೇರು ಖರೀದಿ ಮತ್ತು ಮಾರಾಟ ಮಾಡಬೇಕಾಗ ಅವಶ್ಯಕತೆ ಇದೆ. ಪ್ರಸ್ತುತ ಅಜ್ಞಾತವಾಗಿರುವ ಕೆಲವು ನಕಾರಾತ್ಮಕ ಬೆಳವಣಿಗೆಗಳು, ಮಾರುಕಟ್ಟೆ ಮೇಲೆ ತೀಕ್ಷ್ಣವಾದ ಪ್ರಭಾವವನ್ನು ಬೀರಬಹುದು. ಹೀಗಾಗಿ ಎಚ್ಚರಿಕೆಯಿಂದ ವ್ಯವಹರಿಸಿ ಎಂದು ಹೂಡಿಕೆ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ.
ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯಕುಮಾರ್ ಈ ಬಗ್ಗೆ ಮಾತನಾಡಿದ್ದು, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ರ‍್ಯಾಲಿಯು ಭಾರತದ ಷೇರು ಮಾರುಕಟ್ಟೆಯಲ್ಲಿನ ಮೌಲ್ಯವನ್ನು ಹೆಚ್ಚಿಸಿದ್ದು, ಹೂಡಿಕೆದಾರರ ಮಂದಹಾಸಕ್ಕೆ ಕಾರಣವಾಗಿದೆ. ನಿಫ್ಟಿ FY 24 ಗಳಿಕೆಗಳ ಅಂದಾಜು 20 ಪಟ್ಟು ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದು ಐತಿಹಾಸಿಕ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಮೊಮೆಂಟಮ್ ಮಾರುಕಟ್ಟೆಯನ್ನು ಹೆಚ್ಚು ತೆಗೆದುಕೊಳ್ಳಬಹುದು; ಆದರೆ ಹೆಚ್ಚಿನ ಮೌಲ್ಯದ ಷೇರುಗಳಲ್ಲಿ ಅಪಾಯವೂ ಹೆಚ್ಚು. ಪ್ರಸ್ತುತ ಕೆಲವು ಅಜ್ಞಾತ ಋಣಾತ್ಮಕ ಬೆಳವಣಿಗೆಗಳು ತೀಕ್ಷ್ಣವಾದ ಬದಲಾವಣೆಯನ್ನು ತರಬಹುದು. ಹಾಗಾಗಿ, ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ, ಹೂಡಿಕೆದಾರರು ಜಾಗರೂಕರಾಗಿರಬೇಕು" ಎಂದು ಅವರು ಸಲಹೆ ಕೂಡಾ ನೀಡಿದ್ದಾರೆ.
ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಏರಿಕೆಯಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ 65,000 ಕ್ಕೆ ತಲುಪಿದೆ. ಈ ಬಾರಿ ಎಫ್‌ಐಐ ಖರೀದಿಯಿಂದ ಭಾರತೀಯ ಮಾರುಕಟ್ಟೆಗಳು ಹೊಸ ಗರಿಷ್ಠ ಮಟ್ಟಕ್ಕೆ ತಲುಪಿವೆ. ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್ ಸೆನ್ಸೆಕ್ಸ್‌ನಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಏರಿಕೆ ಕಂಡು ಬಂದಿದ್ದು, ಆ ಷೇರುಗಳನ್ನು ಹೊಂದಿದವರು ಸಖತ್ ಲಾಭದಲ್ಲಿದ್ದಾರೆ.
ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ರ‍್ಯಾಲಿಯು ಪ್ರಾಥಮಿಕವಾಗಿ ಯುಎಸ್‌ನ ಆಶ್ಚರ್ಯಕರ ಮತ್ತು ಅನಿರೀಕ್ಷಿತ ಬಲದಿಂದ ನಡೆಸುತ್ತಿದೆ ಎಂದು ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕತೆ (Q1 23 ರಲ್ಲಿ 2 ಶೇಕಡಾ GDP ಬೆಳವಣಿಗೆ), ಅಮೆರಿಕನ್ ಕೇಂದ್ರ ಬ್ಯಾಂಕ್ 500bp ಯಷ್ಟು ಹೆಚ್ಚಳ ಮಾಡಿದ್ದರ ಹೊರತಾಗಿಯೂ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದೆ.
ಅಮೆರಿಕ ಮತ್ತು ಭಾರತದಲ್ಲಿನ ಷೇರು ಮಾರುಕಟ್ಟೆಗಳು ಏರು ಗತಿಯಲ್ಲಿ ಸಾಗುತ್ತಿರುವ ನಡುವಿನ ವ್ಯತ್ಯಾಸ ಎಂದರೆ, ಯುಎಸ್ ರ‍್ಯಾಲಿ ಪ್ರಾಥಮಿಕವಾಗಿ 8 ಟೆಕ್ ಸ್ಟಾಕ್‌ಗಳು ಮುನ್ನಡೆಸುತ್ತಿವೆ. ಮತ್ತು ಭಾರತೀಯ ರ‍್ಯಾಲಿ ಹೆಚ್ಚು ವಿಶಾಲವಾದ ನೆಲೆಗಟ್ಟಿನಲ್ಲಿ ಮಾರುಕಟ್ಟೆ ವ್ಯವಹಾರ ನಡೆಯುತ್ತಿದೆ ಎಂದು ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆ ವೇಗ ಹೆಚ್ಚಿರುವುದರಿಂದ, ಇದೇ ರೀತಿಯ ಓಟ ಮುಂದುವರಿಯಬಹುದು. ಆದರೆ, ಅದು ಯಾವಾಗ ರಿವರ್ಸ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದಿರುವ ಹೂಡಿಕೆ ತಜ್ಞರು, ಸಣ್ಣ ಹೂಡಿಕೆದಾರರು ಈ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಇದನ್ನು ಓದಿ: Sensex: ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್: ಮೊದಲ ಬಾರಿಗೆ 65,000 ಗಡಿ ದಾಟಿ ಸಾರ್ವಕಾಲಿಕ ದಾಖಲೆ!