ನವದೆಹಲಿ: ಫೇಸ್ಬುಕ್, ವಾಟ್ಸ್ಆ್ಯಪ್ಗಳ ಒಡೆತನ ಹೊಂದಿರುವ ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೇರೊಂದು ಅವಕಾಶ ಅರಸಿ ಬಂದಿದ್ದಕ್ಕೆ ಮೋಹನ್ ಅವರು ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ತೊರೆದಿದ್ದಾಗಿ ತಿಳಿದುಬಂದಿದೆ.
ಅಜಿತ್ ಮೋಹನ್ ಅವರ ರಾಜೀನಾಮೆ ದೃಢಪಡಿಸಿರುವ ಮೆಟಾ, ಮೋಹನ್ ಅವರು ಕಳೆದ 4 ವರ್ಷಗಳಿಂದ ಕಂಪನಿಯ ಪರವಾಗಿ ಭಾರತದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಂಪನಿಯ ನೀತಿ ನಿರೂಪಣೆ ಅನುಷ್ಠಾನ, ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಇದರಿಂದಾಗಿ ಲಕ್ಷಾಂತರ ಭಾರತೀಯ ವ್ಯಾಪಾರಿಗಳು, ಪಾಲುದಾರರು ಮತ್ತು ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದು ಎಂದು ಮೆಟಾ ಹೇಳಿದೆ.
ಭಾರತದೊಂದಿಗೆ ನಮ್ಮದು ಆಳವಾದ ಸಂಬಂಧ ಹೊಂದಿದೆ. ನಮ್ಮೆಲ್ಲಾ ಕೆಲಸ ಮತ್ತು ಪಾಲುದಾರಿಕೆಗಳನ್ನು ಮುಂದುವರಿಸಲು ಬಲವಾದ ನಾಯಕತ್ವದ ತಂಡವನ್ನು ಹೊಂದಿದ್ದೇವೆ. ಇದಕ್ಕೆ ಅಜಿತ್ ಮೋಹನ್ ಅವರು ಈವರೆಗೂ ನಾಯಕತ್ವ ವಹಿಸಿದ್ದರು. ಅವರ ಈವರೆಗಿನ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದು ಮೆಟಾ ಹಾರೈಸಿದೆ.
ಮೋಹನ್ ಅವರು 2019 ರಲ್ಲಿ ಹಾಟ್‌ಸ್ಟಾರ್‌ನಿಂದ ಮೆಟಾ ಕಂಪನಿಗೆ ಸೇರಿದ್ದರು. ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓದಿ: ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಮಾಡಿರುವ ಪ್ರಸ್ತಾವನೆಗಳಿಗೆ ಮೂರು ತಿಂಗಳಲ್ಲಿ ಒಪ್ಪಿಗೆ : ಸಚಿವ ಮುರುಗೇಶ್ ನಿರಾಣಿ