ನವದೆಹಲಿ : ಜೂನ್ ತಿಂಗಳು ಇನ್ನೇನು ಮುಗಿಯುವ ಹಂತದಲ್ಲಿದೆ. ತಿಂಗಳು ಮುಗಿಯಲು ಇನ್ನು ಮೂರು- ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಅದರ ನಂತರ ಜುಲೈ ತಿಂಗಳ ಹೊಸ ಮಾಸ ಪ್ರಾರಂಭವಾಗುತ್ತದೆ. ಆದರೆ ಜುಲೈ ತನ್ನೊಂದಿಗೆ ಸಾಕಷ್ಟು ಬದಲಾವಣೆಗಳನ್ನು ಕೂಡ ತರಲಿದೆ. ಈ ಬದಲಾವಣೆಗಳು ದೈನಂದಿನ ಜೀವನದಲ್ಲಿ ಪರಿಣಾಮ ಬೀರುವಂಥ ಬದಲಾವಣೆಗಳಾಗಿರುತ್ತವೆ. ಈ ಬದಲಾವಣೆಗಳು ಜುಲೈ ಮೊದಲ ದಿನದಿಂದ ಜಾರಿಗೆ ಬರುತ್ತವೆ ಎಂಬುದು ಗೊತ್ತಿರಲಿ. ಮಾಹಿತಿಯ ಪ್ರಕಾರ ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ಬೆಲೆಗಳಲ್ಲಿ ಬದಲಾವಣೆಯಾಗಲಿದೆ. ಅದೇ ಸಮಯದಲ್ಲಿ ಆದಾಯ ತೆರಿಗೆ ಸಲ್ಲಿಸುವ ಕೊನೆಯ ದಿನಾಂಕ ಸಹ ಹತ್ತಿರ ಬರಲಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ : ಸರ್ಕಾರಿ ಕಂಪನಿಗಳು ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಕಂಪನಿಗಳು ಬೆಲೆಯನ್ನು ಹೆಚ್ಚಿಸುತ್ತವೆ ಅಥವಾ ಕಡಿಮೆಗೊಳಿಸುತ್ತವೆ. ಹೀಗಾಗಿ ಜುಲೈ ಮೊದಲ ತಾರೀಕಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲೂ ಬದಲಾವಣೆ ಕಂಡುಬರಲಿದೆ. ಮಾಹಿತಿಯ ಪ್ರಕಾರ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಆದರೆ 14 ಕೆಜಿ ಸಿಲಿಂಡರ್‌ಗಳ ಬೆಲೆಗಳು ಹಾಗೆಯೇ ಉಳಿದಿವೆ. ಈ ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕ್ರೆಡಿಟ್ ಕಾರ್ಡ್ ಬಳಕೆಗೆ ಟಿಡಿಎಸ್ : ಲಭ್ಯ ಮಾಹಿತಿಯ ಪ್ರಕಾರ, ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದರೆ ಅಂಥ ವಹಿವಾಟಿನ ಮೇಲೆ ಟಿಡಿಎಸ್ ಸಂಗ್ರಹಿಸಲು ಸಿದ್ಧತೆ ನಡೆದಿದೆ. ಈ ಟಿಡಿಎಸ್ ಅನ್ನು ಜುಲೈ 1 ರಿಂದ ಸಂಗ್ರಹಿಸಲಾಗುತ್ತದೆ. ವಿದೇಶದಲ್ಲಿ ಕಾರ್ಡ್ನಿಂದ 7 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಬ್ಯಾಂಕ್‌ಗಳು ಶೇಕಡಾ 20 ರಷ್ಟು ಟಿಡಿಎಸ್ ಅನ್ನು ವಿಧಿಸುತ್ತವೆ. ಅದೇ ಸಮಯದಲ್ಲಿ, ಶಿಕ್ಷಣ ಮತ್ತು ಚಿಕಿತ್ಸೆಗಾಗಿ ಈ ಟಿಡಿಎಸ್ ಶೇಕಡಾ 5 ಆಗಿರುತ್ತದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕ : ಆದಾಯವನ್ನು ಗಳಿಸುವ ಪ್ರತಿಯೊಬ್ಬ ತೆರಿಗೆದಾರನು ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ. ಹೊಸ ತಿಂಗಳು ಜುಲೈನಲ್ಲಿ ಆದಾಯ ತೆರಿಗೆ ಸಲ್ಲಿಸುವ ಕೊನೆಯ ದಿನಾಂಕವಿದೆ. ಎಲ್ಲಾ ತೆರಿಗೆದಾರರು ಜುಲೈ 31 ರೊಳಗೆ ITR ಅನ್ನು ಸಲ್ಲಿಸಬೇಕಾಗುತ್ತದೆ.
ಇಪಿಎಫ್ ಹೆಚ್ಚುವರಿ ಪಿಂಚಣಿ ನೋಂದಣಿ ಅವಧಿ ವಿಸ್ತರಣೆ: ನೌಕರರ ಭವಿಷ್ಯ ನಿಧಿ ಪ್ರಾಧಿಕಾರವು (ಇಪಿಎಫ್‌ಒ) ತನ್ನ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯುವ ಯೋಜನೆಗೆ ದಾಖಲಿಸಿಕೊಳ್ಳಲು ಕೊನೆಯ ದಿನಾಂಕವನ್ನು ಜುಲೈ 11 ರವರೆಗೆ ವಿಸ್ತರಿಸಿದೆ. ಭವಿಷ್ಯ ನಿಧಿ ಪ್ರಾಧಿಕಾರವು ಮಾರ್ಚ್ 3 ರಿಂದ ಮೇ 3 ರವರೆಗೆ ಮತ್ತು ನಂತರ ಜೂನ್ 26 ರವರೆಗೆ ನಿಗದಿತ ದಿನಾಂಕವನ್ನು ಈಗಾಗಲೇ ಮೂರು ಬಾರಿ ವಿಸ್ತರಣೆ ಮಾಡಿತ್ತು. ಹಿರಿಯರಿಗೆ ಹೆಚ್ಚಿನ ಸಮಯ ನೀಡಲು ಮತ್ತು ಅವರು ಎದುರಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಸಹಾಯ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ : Wagner Group: ಯಾರೀತ ಪ್ರಿಗೊಜಿನ್? ಪುಟಿನ್ ವಿರುದ್ಧವೇ ದಂಗೆಯೆದ್ದ ವ್ಯಾಗ್ನರ್ ಸೇನೆ ಬಲ ಎಷ್ಟು?