ಬೆಂಗಳೂರು : ಭಾರತದ ಸ್ಟಾರ್ಟಪ್ ವಲಯದಲ್ಲಿ ಉದ್ಯೋಗ ಕಡಿತದ ಪರ್ವ ಇನ್ನೂ ಮುಂದುವರಿಯುತ್ತಿದೆ. ಒಟ್ಟು 84 ಭಾರತೀಯ ಸ್ಟಾರ್ಟಪ್ಗಳಲ್ಲಿನ 24,250 ಉದ್ಯೋಗಿಗಳು ಈವರೆಗೆ ಕೆಲಸ ಕಳೆದುಕೊಂಡಿದ್ದಾರೆ. ಪ್ರಮುಖ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಪ್ರಾಕ್ಟೊ, ಕಂಪನಿಯ ನಿರಂತರ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಯೋಜನಾ ಪ್ರಕ್ರಿಯೆಯ ಭಾಗವಾಗಿ 41 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ಹೆಚ್ಚಾಗಿ ಇಂಜಿನಿಯರ್‌ಗಳು ಸೇರಿದ್ದಾರೆ. ದೇಶದ ಸ್ಥಳೀಯ ಕ್ವಿಕ್ - ಗ್ರೋಸರಿ ಡೆಲಿವರಿ ಪ್ರೊವೈಡರ್ ಆಗಿರುವ ಡಂಜೊ ತನ್ನ ಉದ್ಯೋಗಿಗಳ ಕನಿಷ್ಠ ಶೇಕಡಾ 30 ರಷ್ಟು ಅಂದರೆ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಡಂಜೊ ಮತ್ತೊಂದು ಸುತ್ತಿನ ನಿಧಿ ಸಂಗ್ರಹಣೆಯಲ್ಲಿ 75 ಮಿಲಿಯನ್ ಡಾಲರ್ ಬಂಡವಾಳ ಕ್ರೋಢೀಕರಿಸಿರುವುದು ಗಮನಾರ್ಹ.
ವರದಿಗಳ ಪ್ರಕಾರ, ಬೆಂಗಳೂರು ಮೂಲದ ಜೆಸ್ಟ್‌ಮನಿ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದು ಸುಮಾರು 100 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಹೋಮ್‌ಗ್ರೋನ್ ಫ್ಯಾಂಟಸಿ ಇ-ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಫ್ಯಾನ್‌ಕ್ಲಾಶ್ ತನ್ನ ಉದ್ಯೋಗಿಗಳ ಪೈಕಿ ಸುಮಾರು 75 ಪ್ರತಿಶತದಷ್ಟು ಜನರನ್ನು ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ. ಫ್ಯಾನ್ ಕ್ಲ್ಯಾಶ್ ಮೂರು ಹಂತಗಳಲ್ಲಿ 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾಗೊಂಡ ಉದ್ಯೋಗಿಗಳಿಗೆ ಕಂಪನಿ ಎರಡು ತಿಂಗಳ ಸಂಬಳವನ್ನು ಪರಿಹಾರವಾಗಿ ನೀಡಿದೆ. ನಾವು ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಗಳಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ತಂಡದ ಗಾತ್ರವನ್ನು 12 ಪ್ರತಿಶತ ಅಥವಾ 350 ಕ್ಕೂ ಹೆಚ್ಚು ಉದ್ಯೋಗಿಗಳಿಂದ ಕಡಿಮೆಗೊಳಿಸುವುದಾಗಿ ಘೋಷಿಸಿದರು ಅನಾಕಾಡೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಗೌರವ್ ಮುಂಜಾಲ್ ಕಳೆದ ತಿಂಗಳ ಕೊನೆಯಲ್ಲಿ ಘೋಷಿಸಿದ್ದರು.
ಯಾವ ಯಾವ ಸ್ಟಾರ್ಟ್ಅಪ್ಗಳಲ್ಲಿ ಉದ್ಯೋಗ ಕಡಿತ: ಬೈಜುಸ್, ಓಲಾ, ಓಯೊ, ಮೀಶೊ, ಎಂಪಿಎಲ್, ಲಿವ್ ಸ್ಪೇಸ್, ಇನ್ನೋವಾಕರ್, ಅನಾಕಾಡೆಮಿ ಮತ್ತು ವೇದಾಂತು ಸೇರಿದಂತೆ ಹಲವಾರು ಸ್ಟಾರ್ಟಪ್ಗಳು ಉದ್ಯೋಗ ಕಡಿತ ಮಾಡಿವೆ. ಹೋಮ್ ಇಂಟೀರಿಯರ್ಸ್ ಮತ್ತು ರಿನೋವೇಶನ್ ಪ್ಲಾಟ್‌ಫಾರ್ಮ್ ಲಿವ್ ಸ್ಪೇಸ್ ಇತ್ತೀಚೆಗೆ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಕನಿಷ್ಠ 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆನ್‌ಲೈನ್ ಸ್ಟೋರ್‌ಗಳಾದ ದುಕಾನ್ SaaS ಪ್ಲಾಟ್‌ಫಾರ್ಮ್, ಸುಮಾರು 30 ಪ್ರತಿಶತದಷ್ಟು ಉದ್ಯೋಗಿಗಳನ್ನು ಅಥವಾ ಸುಮಾರು 60 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಆರು ತಿಂಗಳಲ್ಲಿ ಇದು ಎರಡನೇ ವಜಾ ಕ್ರಮವಾಗಿದೆ. ಹೆಲ್ತ್‌ಕೇರ್ ಯುನಿಕಾರ್ನ್ ಪ್ರಿಸ್ಟಿನ್ ಕೇರ್ ತನ್ನ ಹಲವಾರು ವಿಭಾಗಗಳಲ್ಲಿನ 350 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆನ್‌ಲೈನ್ ಉನ್ನತ ಶಿಕ್ಷಣ ಕಂಪನಿ ಅಪ್‌ಗ್ರಾಡ್ ತನ್ನ ಅಂಗಸಂಸ್ಥೆ ಕ್ಯಾಂಪಸ್ ನಲ್ಲಿ ಸುಮಾರು 30 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಮೇ 2020 ರಿಂದ ಓಲಾ ನಾಲ್ಕು ಬಾರಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೇ 2020 ರಲ್ಲಿ 1,400 ಮತ್ತು ಜುಲೈ 2022 ರಲ್ಲಿ 1,000 ಜನರನ್ನು ವಜಾ ಮಾಡಿದೆ. ಸೆಪ್ಟೆಂಬರ್ 2022 ರಲ್ಲಿ 200 ಜನರನ್ನು ಮತ್ತು 2023 ರ ಜನವರಿಯಲ್ಲಿ ಮತ್ತೆ 200 ಉದ್ಯೋಗಿಗಳನ್ನು ಓಲಾ ವಜಾಗೊಳಿಸಿತು. ಉದ್ಯೋಗ ಕಡಿತ ಕ್ರಮದಿಂದ ಭಾರಿ ಆಕ್ರೋಶಗೊಂಡ ಗೂಗಲ್ ಉದ್ಯೋಗಿಗಳು ಕಂಪನಿಯ ಲಂಡನ್ ಕಚೇರಿಯಲ್ಲಿ ಈ ವಾರದ ಆರಂಭದಲ್ಲಿ ಕಚೇರಿಯಿಂದ ಹೊರನಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನ ಕೂಡ ಭಾರತದಂತೆ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬಯಸಿತ್ತು: ಇಮ್ರಾನ್ ಖಾನ್