ಹೈದರಾಬಾದ್: ನೀವು ಬ್ಯಾಂಕ್ಗಳಿಂದ ಯಾವುದೇ ರೀತಿಯ ಸಾಲ ಪಡೆಯಬೇಕಿದ್ದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳುವುದು ಬಹಳ ಅಗತ್ಯ. ಯಾವುದೇ ಹೊಸ ಸಾಲವನ್ನು ಮಂಜೂರು ಮಾಡುವ ಮೊದಲು ಬ್ಯಾಂಕ್‌ಗಳು ನಿಮ್ಮ ಕ್ರೆಡಿಟ್ ಹಿಸ್ಟರಿ ನೋಡುತ್ತವೆ. ಹೀಗಾಗಿ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು 750 ಅಥವಾ ಅದಕ್ಕೂ ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಸಾಧ್ಯವಾದಷ್ಟು ಮಟ್ಟಿಗೆ, ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಕೆಳಗೆ ಇಳಿಯಲು ಬಿಡಬೇಡಿ. ನಿಮ್ಮ ಪ್ರಸ್ತುತ ಸಾಲಗಳ ಕಂತುಗಳನ್ನು ನಿಗದಿತ ದಿನಾಂಕಕ್ಕೆ ಮರುಪಾವತಿ ಮಾಡುವಲ್ಲಿ ನೀವು ಎಷ್ಟು ನಿಖರವಾಗಿರುವಿರಿ ಎಂಬುದು ನಿಮ್ಮ ಕ್ರೆಡಿಟ್ ರಿಪೋರ್ಟ್ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ: ನಾವು ಯಾವುದೇ ಸಾಲ ತೆಗೆದುಕೊಂಡ ನಂತರ ಅದನ್ನು ಪೂರ್ಣವಾಗಿ ಮರುಪಾವತಿ ಮಾಡುವವರೆಗೂ ಕೆಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಲು ಸಾಧ್ಯ. ಇತ್ತೀಚೆಗೆ ಬಡ್ಡಿದರಗಳು ಹೆಚ್ಚುತ್ತಿವೆ ಮತ್ತು ಅದೇ ಸಮಯದಲ್ಲಿ ಚಿಲ್ಲರೆ ಸಾಲಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಲ ನೀಡುವಾಗ ಬ್ಯಾಂಕ್‌ಗಳು ಹೆಚ್ಚಿನ ಮುಂಜಾಗ್ರತೆ ವಹಿಸುತ್ತಿವೆ. ಹೀಗಾಗಿ ಸಾಲ ಪಡೆಯಬೇಕಾದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರುವುದು ಕಡ್ಡಾಯ.
ನೀವು ಯಾವುದೋ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ, ತಿಂಗಳ EMI ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿ ವಿಳಂಬ ಮಾಡಿದ್ದರೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್ ಖಂಡಿತವಾಗಿಯೂ ಇಳಿಕೆಯಾಗುತ್ತದೆ. ಸ್ಕೋರ್ 700 ಕ್ಕಿಂತ ಕಡಿಮೆಯಿದ್ದರೆ ಬ್ಯಾಂಕ್ ಸಾಲ ನೀಡಲು ಹಿಂಜರಿಯುವ ಸಾಧ್ಯತೆ ಹೆಚ್ಚು. ಸಾಲ ನೀಡಿದರೂ ಹೆಚ್ಚಿನ ಬಡ್ಡಿ ವಿಧಿಸಬಹುದು. ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ಸಾಲ ಪಡೆಯುವುದು ದೊಡ್ಡ ಸವಾಲಾಗಿದೆ.
ಸರಿಯಾದ ಸಮಯಕ್ಕೆ ನಿಮ್ಮ ಕಂತುಗಳನ್ನು ಪಾವತಿಸಿ: ಸತತ ಮೂರು ತಿಂಗಳು ಕಂತುಗಳನ್ನು ಪಾವತಿಸದಿದ್ದರೆ, ಬ್ಯಾಂಕ್‌ಗಳು ಅದನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಪರಿಗಣಿಸುತ್ತವೆ. ಸಾಲ ಮರುಪಾವತಿ ಸಂಪೂರ್ಣವಾಗಿ ನಿಂತು ಹೋದಾಗ ಅದನ್ನು ಡೀಫಾಲ್ಟ್ ಎಂದು ಪರಿಗಣಿಸಿ ಬ್ಯಾಂಕ್‌ಗಳು ಕೆಲವೊಂದಿಷ್ಟು ಮೊತ್ತವನ್ನು ರೈಟ್ ಆಫ್ ಮಾಡುತ್ತವೆ. ಇದನ್ನು 'ಸೆಟಲ್ಮೆಂಟ್' ಎಂದು ಕರೆಯಲಾಗುತ್ತದೆ. ಸೆಟಲ್ಮೆಂಟ್ ಪ್ರಕಾರ ಒಪ್ಪಿದ ಮೊತ್ತವನ್ನು ಪಾವತಿಸಿದರೆ, ಸಾಲವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. ಬ್ಯಾಂಕ್‌ಗಳು ಇದನ್ನು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡುತ್ತವೆ. ಅಂತಹ ಸಾಲಗಳನ್ನು 'ಸೆಟಲ್ಡ್' ಎಂದು ಕರೆಯಲಾಗುತ್ತದೆ. ಏನೇ ಆದರೂ ಸಾಲಗಳನ್ನು ಬಾಕಿ ಉಳಿಸಿಕೊಳ್ಳದೇ ಅವನ್ನು ಸಂಪೂರ್ಣ ಮರುಪಾವತಿ ಮಾಡುವುದು ಉತ್ತಮ.
ಯಾವಾಗಲೂ ಸಾಲದ ಕಂತುಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಿ. ಒಂದೇ ಒಂದು ಲೇಟ್ ಪೇಮೆಂಟ್ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು 100 ಅಂಕಗಳಷ್ಟು ಕಡಿಮೆ ಮಾಡಬಹುದು. ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳಲು ಎಲ್ಲಾ ಸಾಲ ಮರು ಪಾವತಿಗಳನ್ನು ನಿಗದಿತ ದಿನಾಂಕದ ಮೊದಲು ಮಾಡಬೇಕು. ನಿಮಗೆ ಹಣಕಾಸಿನ ತೊಂದರೆಗಳಿದ್ದರೆ, ಕ್ರೆಡಿಟ್ ಕಾರ್ಡ್‌ಗಳಿಗೆ ಸಮಯಕ್ಕೆ ಕನಿಷ್ಠ ಮೊತ್ತವನ್ನು ಪಾವತಿಸಿ. ನಂತರ ಉಳಿದ ಬಾಕಿಯನ್ನು ಪಾವತಿಸಿ. ಬಿಲ್ ಅಧಿಕವಾಗಿದ್ದರೆ, ನಿಮ್ಮ ಕಾರ್ಡ್‌ನ ಕ್ರೆಡಿಟ್ ಮಿತಿಯನ್ನು ನೀವು ಅತಿಯಾಗಿ ಬಳಸುತ್ತಿದ್ದೀರಿ ಎಂದು ಬ್ಯಾಂಕ್‌ಗಳು ಭಾವಿಸುತ್ತವೆ.
ಕರೆಗಳ ಬಗ್ಗೆ ಜಾಗರೂಕರಾಗಿರಿ: ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬೇಕೇ ಎಂದು ಕೇಳುವ ಕರೆಗಳಿಗೆ ಪ್ರತಿಕ್ರಿಯಿಸುವಾಗ ಜಾಗರೂಕರಾಗಿರಿ. ಅಂಥ ಕರೆಗಳಿಗೆ ಆಮೇಲೆ ನೋಡೋಣ ಎಂದು ಉತ್ತರಿಸಬೇಡಿ. ನಿಮಗೆ ಸಾಲ ಅಗತ್ಯವಿಲ್ಲದಿದ್ದರೆ ಬೇಡ ಎಂದು ನೇರವಾಗಿ ಹೇಳಿ. ನೀವು ನೋಡೋಣ ಎಂದಾಗ ನಿಮ್ಮ ಸಾಲದ ಅರ್ಜಿಯನ್ನು ಅವರು ಪರಿಗಣೀಸಬಹುದು. ಆದರೆ ಹೀಗೆ ಪದೇ ಪದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ನೀವು ಸಾಲಕ್ಕಾಗಿ ಕಾಯುತ್ತಿದ್ದೀರಿ ಎಂದರ್ಥ. ಈ ವಿಷಯಕ್ರೆಡಿಟ್ ಬ್ಯೂರೋಗಳನ್ನು ತಲುಪುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಅಂತಹ ಅಪ್ಲಿಕೇಶನ್‌ಗಳ ಪುನರಾವರ್ತಿತ ನಿರಾಕರಣೆ ನಿಮ್ಮ ಕ್ರೆಡಿಟ್ ದಾಖಲೆಯ ಮೇಲೆ ಪರಿಣಾಮ ಬೀರುತ್ತದೆ.
ಸಾಲಗಾರರು ತಿಂಗಳಿಗೊಮ್ಮೆಯಾದರೂ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬೇಕು. ಅನೇಕ ವೆಬ್‌ಸೈಟ್‌ಗಳು ಈಗ ಈ ಕ್ರೆಡಿಟ್ ವರದಿಯನ್ನು ಉಚಿತವಾಗಿ ನೀಡುತ್ತವೆ. ಇದಕ್ಕಾಗಿ ವಿಶ್ವಾಸಾರ್ಹ ವೆಬ್‌ಸೈಟ್ ಆಯ್ಕೆಮಾಡಿ. ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ತಕ್ಷಣವೇ ಬ್ಯಾಂಕ್ಗೆ ತಿಳಿಸಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕ್ರೆಡಿಟ್ ವರದಿಯನ್ನು ನೀವೇ ಪರಿಶೀಲಿಸಿ.
ನಿಮ್ಮ ಕ್ರೆಡಿಟ್ ವರದಿಯ ಆಧಾರದ ಮೇಲೆ ಹೊಸ ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಚಿನ್ನ ಮತ್ತು ಸ್ಥಿರ ಠೇವಣಿಗಳಿಂದ ಸುರಕ್ಷಿತವಾದ ಸಾಲ ಪಡೆಯಲು ಯತ್ನಿಸಿ. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಕಡಿಮೆ ಮಾಡಿ. ಇಲ್ಲಿ ಆರ್ಥಿಕ ಶಿಸ್ತು ಅತ್ಯಗತ್ಯ. ಆಗ ಮಾತ್ರ ನಿಮ್ಮ ಕ್ರೆಡಿಟ್ ಸ್ಕೋರ್ 750 ದಾಟಲು ಸಾಧ್ಯ.
ಇದನ್ನೂ ಓದಿ: ಬಜೆಟ್ 2023: ಷೇರು ಮಾರುಕಟ್ಟೆ ಮೇಲೆ ಪರಿಣಾಮವೇನು?.. ಏನು ಹೇಳುತ್ತೆ ಮಾರ್ಗನ್ ಸ್ಟಾನ್ಲಿ ರಿಪೋರ್ಟ್