ನವದೆಹಲಿ: ಯುಎಸ್ ಮೂಲದ ಹೂಡಿಕೆ ಕಂಪನಿ ಇನ್ವೆಸ್ಕೊ ಆಹಾರ ವಿತರಣಾ ಪ್ಲಾಟ್ಫಾರ್ಮ್ ಸ್ವಿಗ್ಗಿಯ ಮೌಲ್ಯವನ್ನು ಸುಮಾರು 8.3 ಬಿಲಿಯನ್ ಡಾಲರ್ಗೆ ಹೆಚ್ಚಿಸಿದೆ. ಜಾಗತಿಕ ಆಸ್ತಿ ನಿರ್ವಹಣಾ ಕಂಪನಿಯಾಗಿರುವ ಇನ್ವೆಸ್ಕೊ ಸ್ವಿಗ್ಗಿಯ ಮೌಲ್ಯವನ್ನು ಸತತ ಎರಡನೇ ಬಾರಿಗೆ ಹೆಚ್ಚಿಸಿದೆ ಎಂದು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಇನ್ವೆಸ್ಕೊ ಸ್ವಿಗ್ಗಿಯ ಮೌಲ್ಯಮಾಪನವನ್ನು ಸುಮಾರು 7.85 ಬಿಲಿಯನ್ ಡಾಲರ್ಗೆ ಹೆಚ್ಚಿಸಿತ್ತು. ಜನವರಿ 2022 ರಲ್ಲಿ ಇನ್ವೆಸ್ಕೊ ನೇತೃತ್ವದ ಸುತ್ತಿನಲ್ಲಿ ಸ್ವಿಗ್ಗಿ 10.7 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ, ಇನ್ವೆಸ್ಕೊ ತನ್ನ ಹಿಡುವಳಿಯಲ್ಲಿ ಸ್ವಿಗ್ಗಿಯ ಮೌಲ್ಯವನ್ನು ಸುಮಾರು 5.5 ಬಿಲಿಯನ್ ಡಾಲರ್ಗೆ ಇಳಿಸಿತ್ತು.
ನವೆಂಬರ್ ನಲ್ಲಿ, ಸ್ವಿಗ್ಗಿಯ ಹೂಡಿಕೆದಾರ ಪ್ರೊಸಸ್ ತನ್ನ ಹಣಕಾಸು ಫೈಲಿಂಗ್ನಲ್ಲಿ, ಸ್ವಿಗ್ಗಿಯ ಪ್ರಮುಖ ಆಹಾರ-ವಿತರಣಾ ವ್ಯವಹಾರವು ಶೇಕಡಾ 17 ರಷ್ಟು ಬೆಳೆದಿದೆ ಮತ್ತು ಹಣಕಾಸು ವರ್ಷದ ಮೊದಲಾರ್ಧದಲ್ಲಿ 1.43 ಬಿಲಿಯನ್ ಡಾಲರ್ ಒಟ್ಟು ಸರಕು ಮೌಲ್ಯವನ್ನು (ಜಿಎಂವಿ) ತಲುಪಿಸಿದೆ ಎಂದು ಹೇಳಿದೆ.
ಸ್ವಿಗ್ಗಿಯಲ್ಲಿ ಶೇಕಡಾ 32.7 ರಷ್ಟು ಪಾಲನ್ನು ಹೊಂದಿರುವ ಪ್ರೊಸಸ್, ಸ್ವಿಗ್ಗಿಯ ವ್ಯಾಪಾರ ನಷ್ಟ 208 ಮಿಲಿಯನ್ ಡಾಲರ್ಗೆ ಇಳಿದಿದೆ ಎಂದು ಉಲ್ಲೇಖಿಸಿದೆ. ಗ್ರಾಹಕರ ಹೆಚ್ಚಳದಿಂದ ಆರ್ಡರ್ ಬೆಳವಣಿಗೆ ಏರಿಕೆಯಾಗಿದ್ದು, ಸ್ವಿಗ್ಗಿ ವಹಿವಾಟು ತ್ವರಿತವಾಗಿ ದಾಪುಗಾಲು ಹಾಕಿದೆ ಎಂದು ಕಂಪನಿ ಹೇಳಿದೆ. ಇಡೀ ಹಣಕಾಸು ವರ್ಷ 23 ರಲ್ಲಿ ಸ್ವಿಗ್ಗಿಯ ನಷ್ಟವು ಸರಿಸುಮಾರು 545 ಮಿಲಿಯನ್ ಡಾಲರ್ ಆಗಿದ್ದು, ಇದು 2022 ರ ಹಣಕಾಸು ವರ್ಷದಲ್ಲಿ ಸುಮಾರು 300 ಮಿಲಿಯನ್ ಡಾಲರ್ಗೆ ಹೋಲಿಸಿದರೆ ಶೇಕಡಾ 80 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
ಸ್ವಿಗ್ಗಿ ಭಾರತದ ಅತಿದೊಡ್ಡ ಆನ್ಲೈನ್ ಆಹಾರ ಪದಾರ್ಥ ಆರ್ಡರ್ ಮತ್ತು ವಿತರಣಾ ಸರಪಳಿಯಾಗಿದ್ದು, ಇದು ಭಾರತದ ಯುನಿಕಾರ್ನ್ ಸ್ಟಾರ್ಟ್ಅಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಆಗಿದ್ದು, 2014 ರಲ್ಲಿ ಪ್ರಾರಂಭವಾಯಿತು ಮತ್ತು ಪ್ರಸ್ತುತ 100 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ವಿಸ್ತರಿಸಿದೆ. ಜನರ ಜೀವನವನ್ನು ಸರಳಗೊಳಿಸಲು ಸ್ವಿಗ್ಗಿ ತ್ವರಿತ ಪಿಕ್-ಅಂಡ್-ಡ್ರಾಪ್ ಆಹಾರ ವಿತರಣಾ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಿತು. ನೆರೆಹೊರೆಯ ತಿನಿಸುಗಳನ್ನು ಆಹಾರ ಪ್ರಿಯರೊಂದಿಗೆ ಸಂಪರ್ಕಿಸುವ ಸಂಪೂರ್ಣ ಆಹಾರ ಲಭ್ಯತೆ ಮತ್ತು ಸಾಗಣೆ ವ್ಯವಸ್ಥೆಯೊಂದಿಗೆ ವ್ಯಾಪಕವಾದ ವೈವಿಧ್ಯಮಯ ರೆಸ್ಟೋರೆಂಟ್ಗಳಿಂದ ಇದರಲ್ಲಿ ಆಹಾರ ಆರ್ಡರ್ ಮಾಡಬಹುದು.
ಇದನ್ನೂ ಓದಿ : 2024ರಲ್ಲಿ ಉದ್ಯೋಗ ನೇಮಕಾತಿ ಶೇ 8.3ರಷ್ಟು ಹೆಚ್ಚಳ: ಅಧ್ಯಯನ ವರದಿ