ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕದಿಂದ (ಸಿಪಿಐ) ಅಳೆಯಲಾಗುವ ಭಾರತದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 7.44ಕ್ಕೆ ಏರಿಕೆಯಾಗಿದೆ. ಆಹಾರ ವಸ್ತುಗಳ ಹಣದುಬ್ಬರವು ಶೇ 11.51ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ. ಜೂನ್ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.87 ರಷ್ಟಿದ್ದರೆ, ಆಹಾರ ಹಣದುಬ್ಬರವು ಶೇಕಡಾ 4.55 ರಷ್ಟಿತ್ತು.
ಜುಲೈ ಹಣದುಬ್ಬರವು ಆರ್ಬಿಐನ ಸಹಿಷ್ಣುತೆಯ ಮಿತಿಯಾದ ಶೇಕಡಾ 6ನ್ನು ದಾಟಿದೆ. ಮುಖ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳು, ಹಾಲಿನ ಉತ್ಪನ್ನಗಳು ಮತ್ತು ಬಟ್ಟೆ ಮತ್ತು ಪಾದರಕ್ಷೆಗಳ ಬೆಲೆಗಳಲ್ಲಿನ ಹೆಚ್ಚಳವು ಜುಲೈನಲ್ಲಿ ಚಿಲ್ಲರೆ ಹಣದುಬ್ಬರದಲ್ಲಿನ ದೊಡ್ಡ ಏರಿಕೆಗೆ ಕಾರಣವಾಗಿದೆ ಎಂದು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಜುಲೈ 2022 ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6.71 ಮತ್ತು ಆಹಾರ ಹಣದುಬ್ಬರವು ಶೇಕಡಾ 6.69 ರಷ್ಟಿತ್ತು.
ಭಾರತದ ವ್ಯಾಪಾರ ಕೊರತೆ 20.67 ಬಿಲಿಯನ್ ಡಾಲರ್: ಜುಲೈ 2023 ರಲ್ಲಿ ಭಾರತದ ವ್ಯಾಪಾರ ಕೊರತೆ 20.67 ಬಿಲಿಯನ್ ಡಾಲರ್ ಆಗಿದ್ದು, ಆಮದು ಪ್ರಮಾಣ 52.92 ಬಿಲಿಯನ್ ಡಾಲರ್ ಮತ್ತು ರಫ್ತು ಪ್ರಮಾಣ 32.25 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವ್ಯಾಪಾರ ಕೊರತೆ 25.43 ಬಿಲಿಯನ್ ಡಾಲರ್ ಆಗಿತ್ತು.
ಜೂನ್ 2023 ರಲ್ಲಿ ವ್ಯಾಪಾರ ಕೊರತೆ 20.13 ಬಿಲಿಯನ್ ಡಾಲರ್ಗೆ ಇಳಿಕೆಯಾಗಿತ್ತು. ಇದು ಮೇ 2023 ರಲ್ಲಿ 22.1 ಬಿಲಿಯನ್ ಡಾಲರ್ ಆಗಿತ್ತು. ಹೀಗಾಗಿ, ಜುಲೈ ವ್ಯಾಪಾರ ಕೊರತೆ ಜೂನ್ಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಏತನ್ಮಧ್ಯೆ, ಸರಕು ವ್ಯಾಪಾರ ರಫ್ತು ಜುಲೈನಲ್ಲಿ ಒಂಬತ್ತು ತಿಂಗಳ ಕನಿಷ್ಠ 32.25 ಬಿಲಿಯನ್ ಡಾಲರ್ಗೆ ಇಳಿದರೆ, ಸರಕುಗಳ ರಫ್ತು ಏಪ್ರಿಲ್-ಜುಲೈ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇಕಡಾ 14.50 ರಷ್ಟು ಕುಸಿದಿದೆ.
ಇದೇ ಅವಧಿಯಲ್ಲಿ ಆಮದು ಶೇ 13.79ರಷ್ಟು ಕುಸಿದಿದೆ. ಭಾರತದ ಸರಕು ಆಮದು ಜುಲೈ 2023 ರಲ್ಲಿ 52.92 ಬಿಲಿಯನ್ ಡಾಲರ್ ಆಗಿದ್ದು, ಇದು 2023 ರ ಜೂನ್ನಲ್ಲಿ ಇದ್ದ 53.10 ಬಿಲಿಯನ್ ಡಾಲರ್ಗಿಂತ ಕಡಿಮೆಯಾಗಿದೆ. ಜೂನ್ 2022 ರಲ್ಲಿ, ಸರಕು ಆಮದು ಮೊತ್ತ 63.77 ಬಿಲಿಯನ್ ಡಾಲರ್ ಆಗಿತ್ತು.
ಜಿಯೋ 26 ಗಿಗಾಹರ್ಟ್ಸ್ ಎಂಎಂವೇವ್ 5ಜಿ ಆರಂಭ: 26 ಗಿಗಾಹರ್ಟ್ಸ್ ಎಂಎಂವೇವ್ (26 GHz mmWave) ಸ್ಪೆಕ್ಟ್ರಮ್ ಬಳಸಿ ದೇಶಾದ್ಯಂತ 5 ಜಿ ಸಂಪರ್ಕವನ್ನು ಪ್ರಾರಂಭಿಸುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್ಜೆಐಎಲ್) ಸೋಮವಾರ ಘೋಷಿಸಿದೆ. ಕಂಪನಿಯು ಆಗಸ್ಟ್ 17, 2022 ರಂದು ನಿಗದಿಪಡಿಸಿದ ಸ್ಪೆಕ್ಟ್ರಮ್ ನಿಯಮಗಳ ಅಡಿಯಲ್ಲಿ ಪ್ರತಿ ಸ್ಪೆಕ್ಟ್ರಮ್ ಬ್ಯಾಂಡ್ ಗಳಾದ್ಯಂತ 22 ಪರವಾನಗಿ ಪಡೆದ ಸೇವಾ ಪ್ರದೇಶಗಳಲ್ಲಿ (ಎಲ್ಎಸ್ಎ) ಕನಿಷ್ಠ ರೋಲ್-ಔಟ್ ಬಾಧ್ಯತೆಗಳನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ : Stock Market: ಹಿಂದಿನ ಸ್ವಾತಂತ್ರ್ಯೋತ್ಸವ ಸಂದರ್ಭಕ್ಕೆ ಹೋಲಿಸಿದರೆ ಸೆನ್ಸೆಕ್ಸ್-ನಿಫ್ಟಿ ಶೇ 10ರಷ್ಟು ಏರಿಕೆ