ನವದೆಹಲಿ: ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ನವೆಂಬರ್ 17ರವರೆಗೆ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ. ಈ ಮೂಲಕ ಅನಿಲ್ ಅಂಬಾನಿ ಐಟಿ ಇಲಾಖೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.
ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ 814 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣದ ಮೇಲಿನ 420 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪದ ಮೇಲೆ ಅನಿಲ್ ಅಂಬಾನಿ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿತ್ತು.
ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಹಣದ ವ್ಯವಹಾರಗಳ ಬಗ್ಗೆ ಭಾರತೀಯ ತೆರಿಗೆ ಅಧಿಕಾರಿಗಳಿಗೆ ಅಂಬಾನಿ ಅವರು ಉದ್ದೇಶಪೂರ್ವಕವಾಗಿ ಮಾಹಿತಿ ನೀಡಿಲ್ಲ. ಇದು ತೆರಿಗೆ ವಂಚನೆ ವ್ಯಾಪ್ತಿಗೆ ಬರುತ್ತದೆ ಎಂದು ಆರೋಪಿಸಿ ಐಟಿ ಇಲಾಖೆ ದೂರಿತ್ತು. ಈ ಬಗ್ಗೆ ವಿವರ ನೀಡಲು ಸೂಚಿಸಿ ನೋಟಿಸ್ ನೀಡಿತ್ತು.
2015 ರ ಕಪ್ಪು ಹಣದ ತೆರಿಗೆ ಕಾಯ್ದೆಯ ಅಡಿ ಅನಿಲ್ ಅಂಬಾನಿ ವಿರುದ್ಧ ಕಾನೂನು ಕ್ರಮ ಮತ್ತು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ಹಣದ ಬಗ್ಗೆ ವಿವರವನ್ನು ಆಗಸ್ಟ್ 31 ರೊಳಗೆ ನೀಡುವಂತೆ ಅನಿಲ್ ಅಂಬಾನಿ ಅವರಿಗೆ ಐಟಿ ಇಲಾಖೆ ಸೂಚಿಸಿತ್ತು.
ಐಟಿ ಇಲಾಖೆಯ ನೋಟಿಸ್ ವಿರುದ್ಧ ಅನಿಲ್ ಅಂಬಾನಿ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಅಂಬಾನಿ ಅವರ ವಿರುದ್ಧ ನವೆಂಬರ್ 17 ರ ವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿದೆ.
ಓದಿ: ಅಟಾರ್ನಿ ಜನರಲ್ ಹುದ್ದೆ ತಿರಸ್ಕರಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ