ನವದೆಹಲಿ : ಭಾರತದ ಸರಕು ವ್ಯಾಪಾರ ಕೊರತೆಯು (merchandise trade deficit) ಅಕ್ಟೋಬರ್ನಲ್ಲಿ 31.46 ಶತಕೋಟಿ ಡಾಲರ್ಗೆ ಏರಿಕೆಯಾಗಿದ್ದು, ಅದೇ ಸಮಯದಲ್ಲಿ ದೇಶದ ಆಮದು 65.03 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಬುಧವಾರ ತಿಳಿಸಿದ್ದಾರೆ. ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯ ಕಾರಣದಿಂದ ದೇಶದ ಆಮದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಅಂತೆಯೇ ಚಿನ್ನದ ಆಮದು 2022 ರ ಅಕ್ಟೋಬರ್ಗೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿ 29.48 ಬಿಲಿಯನ್ ಡಾಲರ್ಗೆ ತಲುಪಿದೆ.
ಸೆಪ್ಟೆಂಬರ್ನಲ್ಲಿ ವ್ಯಾಪಾರ ಕೊರತೆ 19.37 ಬಿಲಿಯನ್ ಡಾಲರ್ ಆಗಿತ್ತು. ದೇಶದ ಸರಕು ರಫ್ತು ಅಕ್ಟೋಬರ್ನಲ್ಲಿ ಶೇಕಡಾ 6.2 ರಷ್ಟು ಏರಿಕೆಯಾಗಿ 33.57 ಬಿಲಿಯನ್ ಡಾಲರ್ಗೆ ತಲುಪಿದೆ. ಇದು 2022 ರ ಅಕ್ಟೋಬರ್ನಲ್ಲಿ ಇದ್ದ 31.60 ಬಿಲಿಯನ್ ಡಾಲರ್ಗಿಂತೆ ಹೆಚ್ಚಾಗಿದೆ. ಇನ್ನು ಸರಕು ಆಮದು 65.03 ಬಿಲಿಯನ್ ಡಾಲರ್ಗೆ ತಲುಪಿದೆ.
ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ - ಅಕ್ಟೋಬರ್ ಅವಧಿಯಲ್ಲಿ ಸರಕು ರಫ್ತು ಶೇಕಡಾ 7 ರಷ್ಟು ಕುಸಿದು 244.89 ಬಿಲಿಯನ್ ಡಾಲರ್ಗೆ ತಲುಪಿದೆ. ಏಪ್ರಿಲ್ - ಅಕ್ಟೋಬರ್ ಸರಕು ಆಮದು 391.96 ಬಿಲಿಯನ್ ಡಾಲರ್ಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 8.95 ರಷ್ಟು ಕಡಿಮೆಯಾಗಿದೆ.
ಒಂದು ದೇಶದ ಆಮದಿನ ವೆಚ್ಚವು ಅದರ ರಫ್ತು ವೆಚ್ಚವನ್ನು ಮೀರಿದಾಗ ವ್ಯಾಪಾರ ಕೊರತೆ ಉಂಟಾಗುತ್ತದೆ. ಇದನ್ನು ವ್ಯಾಪಾರದ ನಕಾರಾತ್ಮಕ ಸಮತೋಲನ ಎಂದೂ ಕರೆಯಲಾಗುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ವಾಣಿಜ್ಯದ ಪ್ರಮಾಣವನ್ನು ಅಳೆಯುವ ಒಂದು ಮಾರ್ಗವಾಗಿದೆ. ವ್ಯಾಪಾರ ಕೊರತೆಯನ್ನು ಒಂದು ದೇಶದ ರಫ್ತುಗಳ ಒಟ್ಟು ಮೌಲ್ಯವನ್ನು ಅದರ ಒಟ್ಟು ಆಮದು ಮೌಲ್ಯದಿಂದ ಕಳೆಯುವ ಮೂಲಕ ಲೆಕ್ಕಹಾಕಲಾಗುತ್ತದೆ.
"ವ್ಯಾಪಾರ ಕೊರತೆ" ಎಂಬ ಪದವು ಪ್ರಪಂಚದಾದ್ಯಂತದ ದೇಶಗಳ ನಡುವೆ ನಡೆಯುವ ಅಂತಾರಾಷ್ಟ್ರೀಯ ವ್ಯಾಪಾರದ ಪ್ರಮಾಣವನ್ನು ಸೂಚಿಸುತ್ತದೆ. ವ್ಯಾಪಾರ ಅಸಮತೋಲನ ಮುಂದುವರಿದರೆ, ಅಂತರವನ್ನು ಮುಚ್ಚಲು ಸರ್ಕಾರವು ಹೆಚ್ಚುವರಿ ವಿದೇಶಿ ವಿನಿಮಯವನ್ನು ಪಡೆಯಬೇಕಾಗುತ್ತದೆ ಮತ್ತು ಇದರಿಂದಾಗಿ ಸ್ಥಳೀಯ ಕರೆನ್ಸಿ ಕುಸಿಯುತ್ತದೆ. ಸಣ್ಣ ಮಟ್ಟದ ವ್ಯಾಪಾರ ಕೊರತೆಯು ದೇಶದ ಅಭಿವೃದ್ಧಿಗೆ ಅವಶ್ಯಕವಾಗಿದೆ. ಏಕೆಂದರೆ ಅದು ಬೇಡಿಕೆ, ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಇದನ್ನೂ ಓದಿ : ಯಾರಿಗೆ ಸೇರಲಿದೆ ಸಹಾರಾದ ₹25 ಸಾವಿರ ಕೋಟಿ? ಹೂಡಿಕೆದಾರರ ಕತೆ ಏನು?