ಗಾಂಧಿನಗರ (ಗುಜರಾತ್): ಇಂಡಿಯಾ ಇಂಟರ್ ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ (IIBX) ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ GIFT-IFSC ಸಿಟಿಗೆ ಭೇಟಿ ನೀಡಲಿದ್ದಾರೆ. ದೇಶದ ಹಲವಾರು ಗಣ್ಯಮಾನ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ಗಿಫ್ಟ್ ಸಿಟಿಯು ಅಂತಾರಾಷ್ಟ್ರೀಯ ವ್ಯಾಪಾರ ವಿನಿಮಯ ಸಾಧನಗಳಾದ ಕಮಾಡಿಟಿಗಳು, ಕರೆನ್ಸಿಗಳು, ಬಡ್ಡಿದರಗಳು ಅಥವಾ ಇನ್ನಾವುದಾದರೂ ಹಣಕಾಸು ಸಾಧನದ ಬೆಲೆ ನಿರ್ಧಾರಕನಾಗಬೇಕೆಂದು 2017 ರಲ್ಲಿ ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದರು.
ಬೆಲೆಬಾಳುವ ಲೋಹಗಳ ಮಾರುಕಟ್ಟೆಯನ್ನು ಬೆಳೆಸುವ ಉದ್ದೇಶವನ್ನು ಐಎಫ್ಎಸ್ಸಿಎ ಹೊಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವು ಬೆಲೆ ನಿರ್ಧಾರಕನಾಗುವ ಮತ್ತು ಬೆಲೆ ಪ್ರಭಾವಿಕನಾಗಲು ಇದು ಸಹಾಯಕವಾಗಲಿದೆ.
ಅತಿ ದೊಡ್ಡ ಆಮದು ದೇಶ: ಪ್ರತಿ ವರ್ಷ 1000 ಟನ್ ಚಿನ್ನ ಆಮದು ಮಾಡಿಕೊಳ್ಳುವ ಭಾರತ ಚಿನ್ನದ ಅತಿ ದೊಡ್ಡ ಆಮದು ದೇಶವಾಗಿದೆ. ಚಿನ್ನದ ಅತ್ಯಂತ ದೊಡ್ಡ ಗ್ರಾಹಕನಾದರೂ ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳನ್ನು ನಿರ್ಧರಿಸುವಲ್ಲಿ ಭಾರತದ ಪಾತ್ರ ಬಹಳ ಸೀಮಿತವಾಗಿದೆ. ಹೀಗಾಗಿಯೇ ಭಾರತದಲ್ಲಿ ಇಂಟರ್ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ ಸ್ಥಾಪಿಸುವ ಬಗ್ಗೆ ಪ್ರಧಾನಿ ಮೋದಿ ಕನಸು ಕಂಡಿದ್ದರು. ಈಗ ಜುಲೈ 29 ರಂದು ಆ ಕನಸು ಸಾಕಾರವಾಗಲಿದೆ.
ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಬುಲಿಯನ್ ವ್ಯವಸ್ಥೆಯ ಸುಧಾರಣಾ ಕ್ರಮಗಳಲ್ಲಿ ಸಂಘಟಿತ ಮಾರುಕಟ್ಟೆ, ಸ್ಥಳೀಯ ಆಭರಣ ತಯಾರಕರಿಂದ ಆಮದು, ಚಿನ್ನದ ದಾಸ್ತಾನು ಇಡುವ ವ್ಯವಸ್ಥೆ, ಚಿನ್ನ ನಗದೀಕರಿಸುವ ವ್ಯವಸ್ಥೆ ಮುಂತಾದುವು ಸೇರಿವೆ.
ಈ ಎಕ್ಸ್ಚೇಂಜ್ ತಂತ್ರಜ್ಞಾನ ಆಧರಿತ ಆರ್ಡರ್ ಮ್ಯಾಚಿಂಗ್, ಬುಲಿಯನ್ ಡಿಪಾಸಿಟರಿ ರಸೀದಿಗಳ ಕ್ಲಿಯರೆನ್ಸ್ ಮತ್ತು ಸೆಟ್ಲಮೆಂಟ್ ಸೇವೆಗಳನ್ನು ನೀಡಲಿದೆ. ಇದು ನೈಜ ಲೋಹದ ಸುರಕ್ಷತೆಯನ್ನು ಹೊಂದಿರಲಿದೆ. ವಾಣಿಜ್ಯ ಹೂಡಿಕೆದಾರರು ಸೇರಿದಂತೆ ವಿವಿಧ ಬಂಡವಾಳ ಹೂಡಿಕೆದಾರರಿಗೆ ಇದೊಂದು ವ್ಯಾಪಾರ ವಹಿವಾಟು ಕೇಂದ್ರವಾಗಲಿದೆ.
ಇದನ್ನು ಓದಿ:ಭಾರತದ ಆರ್ಥಿಕ ವೃದ್ಧಿ ದರ ಕಡಿತಗೊಳಿಸಿದ ಐಎಂಎಫ್: ಕಾರಣವೇನು?