ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಸ್ತಕ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 272.35 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಅನುಭವಿಸಿದೆ.
ಕಂಪನಿ ಮಾಡಿರುವ ಫೈಲಿಂಗ್ ಪ್ರಕಾರ, 2021ರ ಜುಲೈ-ಸೆಪ್ಟೆಂಬರ್‌ನಲ್ಲಿ 6,360.05 ಕೋಟಿ ರೂಪಾಯಿಗಳ ಲಾಭಕ್ಕೆ ಹೋಲಿಸಿದರೆ ಈ ಬಾರಿ 272.35 ಕೋಟಿ ರೂಪಾಯಿಗಳ ನಿವ್ವಳ ನಷ್ಟವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಎಲ್‌ಪಿಜಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ಸತತ ಎರಡನೇ ತ್ರೈಮಾಸಿಕದಲ್ಲಿ ಈ ನಷ್ಟ ಉಂಟಾಗಿದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಸರಿಯಾಗಿಟ್ಟುಕೊಳ್ಳಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಇತರ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆಗಳು ಪ್ರಸಕ್ತ 2022-23 ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್)ದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದವು. ಇದರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 1,992.53 ಕೋಟಿ ರೂ. ನಿವ್ವಳ ನಷ್ಟ ಕಂಡಿತ್ತು. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳನ್ನು ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸದ ಕಾರಣ ಮತ್ತು ಸರ್ಕಾರಕ್ಕೆ ಹಣದುಬ್ಬರವನ್ನು ನಿಯಂತ್ರಿಸಲು ಇದು ನೆರವಾಗಿತ್ತು.
ಹಿಂದಿನ ತ್ರೈಮಾಸಿಕದಲ್ಲಿ ಉಂಟಾದ 1,992.53 ಕೋಟಿ ರೂಪಾಯಿಗಳ ನಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಕುಸಿತ ಕಂಡುಬಂದಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಸತತ ಎರಡನೇ ತ್ರೈಮಾಸಿಕದಲ್ಲಿ ನಷ್ಟವನ್ನು ಐಒಸಿ ಕಂಡಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಐಒಸಿ ಕಂಪನಿಯು ಒಟ್ಟಾರೆ 2,264.88 ಕೋಟಿ ನಿವ್ವಳ ನಷ್ಟವನ್ನು ಅನುಭವಿಸಿದಂತೆ ಆಗಿದೆ.
ಇದನ್ನೂ ಓದಿ: ಎಸ್ಬಿಐ ಕ್ಲರ್ಕ್ ಪರೀಕ್ಷೆ ಪ್ರವೇಶ ಪತ್ರ ಇಂದಿನಿಂದ ವೆಬ್ಸೈಟ್ನಲ್ಲಿ ಲಭ್ಯ