ನವದೆಹಲಿ: ಭಾರತವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಇತರ ದೇಶಗಳಿಂದ ಪಡೆದ ಸಾಲಗಳು ಮತ್ತು ಇತರ ಹೊಣೆಗಾರಿಕೆಗಳ ಮೊತ್ತ ಮಾರ್ಚ್‌ನಲ್ಲಿ ಕೊನೆಗೊಂಡ ಕಳೆದ ಹಣಕಾಸು ವರ್ಷದ ಕೊನೆಯಲ್ಲಿ $624 ಶತಕೋಟಿಗಿಂತ ಹೆಚ್ಚಾಗಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್- ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ತಾತ್ಕಾಲಿಕ ಮಾಹಿತಿಯ ಪ್ರಕಾರ, ದೇಶದ ಬಾಹ್ಯ ಸಾಲವು 624.65 ಬಿಲಿಯನ್ ಯುಎಸ್ ಡಾಲರ್ ಆಗಿದೆ ಎಂದು ಸದನಕ್ಕೆ ತಿಳಿಸಿದರು. ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಬಹುಪಕ್ಷೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ ಬಾಹ್ಯ ಸಾಲವು $ 74.84 ಬಿಲಿಯನ್ ಆಗಿದೆ. ಇದರಲ್ಲಿ $ 63.45 ಶತಕೋಟಿ ಸರ್ಕಾರ ಪಡೆದ ಸಾಲವಾಗಿದ್ದರೆ, ಸರ್ಕಾರೇತರ ಸಾಲವನ್ನು $ 11.39 ಶತಕೋಟಿ ಎಂದು ಅಂದಾಜಿಸಲಾಗಿದೆ.
ಹಾಗೆಯೇ, ದ್ವಿಪಕ್ಷೀಯ ಬಾಹ್ಯ ಸಾಲಗಳನ್ನು ನೋಡುವುದಾದರೆ- ದ್ವಿಪಕ್ಷೀಯ ವಿದೇಶಿ ವ್ಯವಸ್ಥೆಗಳ ಅಡಿಯಲ್ಲಿ ಪಡೆದ ಒಟ್ಟು $ 34.57 ಶತಕೋಟಿ ಸಾಲದ ಪೈಕಿ ಸರ್ಕಾರದ ಪಾಲು $ 27.57 ಶತಕೋಟಿ ಆಗಿದೆ. ಈ ವರ್ಗದ ಸಾಲಗಳಲ್ಲಿ ಸರ್ಕಾರೇತರ ಸಾಲವನ್ನು $ 7 ಶತಕೋಟಿ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) $22.26 ಶತಕೋಟಿ ಸಾಲ ಪಡೆಯಲಾಗಿದೆ ಎಂದು ಅಂದಾಜಿಸಲಾಗಿದೆ.
$22.26 ಶತಕೋಟಿಗಿಂತ ಹೆಚ್ಚಿನ ಸಾಲ ಪಾವತಿಗಳು IMF ನಿಂದ ವಿಶೇಷ ಡ್ರಾಯಿಂಗ್ ಹಕ್ಕುಗಳ (Special Drawing Rights) ಹಂಚಿಕೆಯನ್ನು ಪ್ರತಿನಿಧಿಸುತ್ತದೆ. “ಅವು ದೀರ್ಘಾವಧಿಯ ಸಾಲಗಳಾಗಿವೆ. ಕಂಪೈಲರ್‌ಗಳು ಮತ್ತು ಬಳಕೆದಾರರಿಗೆ ಬಾಹ್ಯ ಸಾಲದ ಅಂಕಿಅಂಶಗಳಿಗಾಗಿ IMF ನ ಮಾರ್ಗದರ್ಶಿಯ ಪ್ರಕಾರ ಅವುಗಳನ್ನು ಒಟ್ಟು ಬಾಹ್ಯ ಸಾಲದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ಆದಾಗ್ಯೂ, ಸಣ್ಣ ಲೆಕ್ಕಾಚಾರದ ಪ್ರಕಾರ ಈ ಮೂರು ವಿದೇಶಿ ಸಾಲಗಳು ದೇಶದ ಒಟ್ಟು ಬಾಕಿ ಉಳಿದಿರುವ ಸುಮಾರು $131.67 ಶತಕೋಟಿ ಬಾಹ್ಯ ಸಾಲಗಳ ಪೈಕಿ ಒಂದು ಸಣ್ಣ ಭಾಗವಾಗಿರುವುದು ಕಾಣಿಸುತ್ತದೆ. ಸುಮಾರು 80 ಪ್ರತಿಶತ ಬಾಹ್ಯ ಹೊಣೆಗಾರಿಕೆಗಳನ್ನು 'ಇತರ' ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿರುವುದರಿಂದ ಒಟ್ಟು ಬಾಹ್ಯ ಹೊಣೆಗಾರಿಕೆಗಳಲ್ಲಿ ಇದು ಕೇವಲ ಐದನೇ ಒಂದು ಭಾಗವಾಗಿದೆ. ಈ ವರ್ಗದ ಅಡಿಯಲ್ಲಿ ಬಾಹ್ಯ ಹೊಣೆಗಾರಿಕೆಗಳು ರಫ್ತು ಕ್ರೆಡಿಟ್, ವಾಣಿಜ್ಯ ಸಾಲಗಳು, NRI ಠೇವಣಿಗಳು, ರೂಪಾಯಿ ಸಾಲ ಮತ್ತು ಅಲ್ಪಾವಧಿಯ ಸಾಲವನ್ನು ಒಳಗೊಂಡಿವೆ.
ಭಾರತದ ವಿದೇಶಿ ಸಾಲ 4 ವರ್ಷಗಳಲ್ಲಿ 12% ರಷ್ಟು ಏರಿಕೆ: ಭಾರತದ ಬಾಹ್ಯ ಸಾಲದ ಬಾಕಿಯು ವಿಶೇಷ ಡ್ರಾಯಿಂಗ್ ಹಕ್ಕುಗಳು (SDR) ಹಂಚಿಕೆಗಳು, ಕರೆನ್ಸಿ ಮತ್ತು ಠೇವಣಿಗಳು, ಸಾಲ ಭದ್ರತೆಗಳು, ಸಾಲಗಳು, ವ್ಯಾಪಾರ ಕ್ರೆಡಿಟ್ ಮತ್ತು ಮುಂಗಡಗಳು, ಇತರ ಸಾಲದ ಹೊಣೆಗಾರಿಕೆಗಳು ಮತ್ತು ನೇರ ಹೂಡಿಕೆ ಅಥವಾ ಅಂತರ ಕಂಪನಿ ಸಾಲವನ್ನು ಒಳಗೊಂಡಿದೆ ಎಂದು ಸೀತಾರಾಮನ್ ಹೇಳಿದರು.
ರಿಸರ್ವ್ ಬ್ಯಾಂಕಿನ ತಾತ್ಕಾಲಿಕ ಮಾಹಿತಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಬಾಹ್ಯ ಸಾಲಗಳು ಮಾರ್ಚ್ 2020 ರಲ್ಲಿ $558.3 ಶತಕೋಟಿಯಿಂದ ಮಾರ್ಚ್ 2023 ರಲ್ಲಿ $624.7 ಶತಕೋಟಿಗೆ ಏರಿದೆ ಎಂದು ದತ್ತಾಂಶವು ತೋರಿಸಿದೆ. ಪರಿಷ್ಕೃತ ಮಾಹಿತಿಯ ಪ್ರಕಾರ, ಭಾರತದ ಬಾಹ್ಯ ಸಾಲವು 2021 ರಲ್ಲಿ $ 573.4 ಬಿಲಿಯನ್ ಆಗಿತ್ತು ಮತ್ತು RBI ಯ ಭಾಗಶಃ ಪರಿಷ್ಕೃತ ಡೇಟಾದ ಪ್ರಕಾರ ಮಾರ್ಚ್ 2022 ರಲ್ಲಿ $ 619.1 ಶತಕೋಟಿ ಆಗಿತ್ತು.
2020 ರಿಂದ $68 ಶತಕೋಟಿಗಿಂತ ಹೆಚ್ಚು ಬಡ್ಡಿ ಪಾವತಿ: ಕಳೆದ ನಾಲ್ಕು ವರ್ಷಗಳಲ್ಲಿ ದೇಶವು ಬಾಹ್ಯ ಸಾಲದ ಮೇಲೆ $68.8 ಶತಕೋಟಿಗಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸಿದೆ. 2020 ರಲ್ಲಿ, ಭಾರತದ ಬಾಹ್ಯ ಸಾಲದ ಮೇಲಿನ ಬಡ್ಡಿ ಪಾವತಿ ಹೊಣೆಗಾರಿಕೆ $18.63 ಶತಕೋಟಿ ಆಗಿತ್ತು. ಆದರೆ ಮುಂದಿನ ಎರಡು ವರ್ಷಗಳಲ್ಲಿ ದೇಶವು 2021 ರಲ್ಲಿ $15.41 ಶತಕೋಟಿ ಮತ್ತು 2022 ರಲ್ಲಿ $15.13 ಶತಕೋಟಿಯನ್ನು ಬಡ್ಡಿಯಾಗಿ ಪಾವತಿಸಿದ ಕಾರಣ ಇದು ಸ್ವಲ್ಪಮಟ್ಟಿಗೆ ಕುಸಿಯಿತು. ಆದಾಗ್ಯೂ, ಕಳೆದ ಹಣಕಾಸು ವರ್ಷದಲ್ಲಿ ಬಾಹ್ಯ ಸಾಲದ ಮೇಲಿನ ಬಡ್ಡಿ ಪಾವತಿ $19.66 ಶತಕೋಟಿಗೆ ಏರಿದೆ.
ಇದನ್ನೂ ಓದಿ : ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಎಫೆಕ್ಟ್: 'ಕುಟುಂಬಕ್ಕೊಂದೇ ಅಕ್ಕಿ ಚೀಲ'