ನವದೆಹಲಿ: 2030ರ ಸುಮಾರಿಗೆ ಭಾರತ 'ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿ'ಯಾಗಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಮಂಗಳವಾರ ತಿಳಿಸಿದೆ. ಹಲವು ಅವಕಾಶಗಳನ್ನು ತೆರೆದಿಡುವ ಮೂಲಕ ದೇಶವು ದೊಡ್ಡ ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ ಎಂದು ಅಮೆರಿಕ ಮೂಲದ ಈ ಸಂಸ್ಥೆ ಅಂದಾಜು ಮಾಡಿದೆ.
ವೇಗವಾಗಿ ಬೆಳೆಯುತ್ತಿರುವ ಭಾರತವು ಮುಂದಿನ ಮೂರು ವರ್ಷಗಳಲ್ಲಿ ಪ್ರಮುಖ ಆರ್ಥಿಕತೆಯಾಗುವ ನಿರೀಕ್ಷೆಯಲ್ಲಿದೆ. 2026ರ ವೇಳೆಗೆ ದೇಶದ ಜಿಡಿಪಿ ಬೆಳವಣಿಗೆಯು ಶೇಕಡಾ 7 ತಲುಪಲಿದೆ. ಪ್ರಸಕ್ತ ಹಣಕಾಸು ವರ್ಷದ ಶೇ.6.4ರಷ್ಟಿರುವ ಅಭಿವೃದ್ಧಿಯನ್ನು ಇದು ದಾಟಿ ಬೆಳವಣಿಗೆ ಕಾಣಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಹೇಳಿದೆ.
2022-23 ಹಣಕಾಸು ವರ್ಷದಲ್ಲಿ ಭಾರತ ಶೇ 7.2ರಷ್ಟು ಬೆಳವಣಿಗೆ ಕಂಡಿದೆ. ಜೂನ್ ಮತ್ತು ಸೆಪ್ಟೆಂಬರ್ಲ್ಲಿ ಅನುಕ್ರಮವಾಗಿ ಶೇ7.8 ಮತ್ತು ಶೇ7.6 ಜಿಡಿಪಿ ದಾಖಲಾಗಿದೆ. ಇದು ಮುಂದೆ ಇನ್ನಷ್ಟು ಬೆಳವಣಿಗೆಯಾಗುವ ಮೂಲಕ 2030ರ ಹೊತ್ತಿಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ನೆರವಾಗಲಿದೆ. ಇದರ ಜೊತೆಗೆ ದೇಶ ಮುಂದಿನ ದೊಡ್ಡ ಜಾಗತಿಕ ಉತ್ಪಾದನಾ ಕೇಂದ್ರವಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಊಹಿಸಿದೆ.
ದೇಶವನ್ನು ಸೇವಾ ಕ್ಷೇತ್ರದ ಆರ್ಥಿಕತೆಯಿಂದ ಉತ್ಪಾದನಾ ಕ್ಷೇತ್ರಕ್ಕೆ ಪರಿವರ್ತಿಸಬೇಕಿದೆ. ಇದರಿಂದ ಆರ್ಥಿಕ ಶಕ್ತಿ ಪ್ರಗತಿ ಕಾಣಲಿದೆ. ಜಾಗತಿಕ ಉತ್ಪಾದನಾ ಹಬ್ ಆಗಿ ಕೂಡ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಎಸ್ ಆ್ಯಂಡ್ ಪಿ ತನ್ನ 'ಗ್ಲೋಬಲ್ ಕ್ರೆಡಿಟ್ ಔಟ್‌ಲುಕ್ 2024: ಹೊಸ ಅಪಾಯಗಳು, ಹೊಸ ಪ್ಲೇಬುಕ್' ಎಂಬ ವರದಿಯಲ್ಲಿ ವಿವರಿಸಿದೆ.
$5 ಟ್ರಿಲಿಯನ್ ಗುರಿ: 2022-23ರ ಆರ್ಥಿಕ ವರ್ಷದ ಕೊನೆಯಲ್ಲಿ 3.73 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿ ಗಾತ್ರವನ್ನು ಹೊಂದಿರುವ ಭಾರತವು ಪ್ರಸ್ತುತ ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್‌ನ ನಂತರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. 2027-28ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗುವ ಮೂಲಕ ಮೂರನೇ ಅತಿದೊಡ್ಡ ಜಿಡಿಪಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ.
ಪ್ರಧಾನಿ ಮೋದಿ ಗ್ಯಾರಂಟಿ: ಇನ್ನು ಕೆಲವೇ ವರ್ಷಗಳಲ್ಲಿ ದೇಶವನ್ನು ಮೂರನೇ ಆರ್ಥಿಕ ರಾಷ್ಟ್ರವನ್ನಾಗಿ ಮಾಡಲಾಗುವುದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚುನಾವಣಾ ರ್ಯಾಲಿಗಳಲ್ಲೂ ಇದನ್ನು ಅವರು ಪ್ರಸ್ತಾಪಿಸಿದ್ದಾರೆ. ತಾವು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಲ್ಲಿ ದೇಶದ ಆರ್ಥಿಕತೆಯನ್ನು ಬಲಪಡಿಸಲಾಗುವುದು ಎಂದು ಪ್ರಧಾನಿ ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದ ಜಿಡಿಪಿ ಶೇ 7.6ರಷ್ಟು ಬೆಳವಣಿಗೆ: ಕನಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ