ನವದೆಹಲಿ : ಭಾರತದ ಸ್ಮಾರ್ಟ್ ಟಿವಿ ಮಾರಾಟ 2022 ರಲ್ಲಿ ಶೇಕಡಾ 28 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದೆ. ಸ್ವದೇಶಿ ಸ್ಮಾರ್ಟ್ ಟಿವಿ ಬ್ರಾಂಡ್‌ಗಳು ವೇಗದ ಮಾರಾಟ ಬೆಳವಣಿಗೆ ದಾಖಲಿಸಿವೆ. ಸ್ವದೇಶಿ ಟಿವಿ ಬ್ರಾಂಡ್‌ಗಳು ದೇಶದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಶೇಕಡಾ 24 ರಷ್ಟು ಪಾಲು ಹೊಂದಿವೆ ಎಂದು ವರದಿ ತೋರಿಸಿದೆ. ಒಟ್ಟಾರೆ ಟಿವಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿಗಳ ಪಾಲು ಶೇಕಡಾ 90ಕ್ಕಿಂತಲೂ ಹೆಚ್ಚಾಗಿದೆ. ಇದು ಸಾರ್ವಕಾಲಿಕ ಅತ್ಯಧಿಕವಾಗಿದೆ.
ದೇಶದಲ್ಲಿ ಮಾರಾಟವಾಗುತ್ತಿರುವ ಶೇಕಡಾ 99 ಕ್ಕಿಂತ ಹೆಚ್ಚು ಟಿವಿಗಳನ್ನು ಈಗ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ. ಕೆಲವು ಉನ್ನತ ಮಟ್ಟದ ಟಿವಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಶೇಕಡಾ 11 ರಷ್ಟು ಪಾಲಿನೊಂದಿಗೆ ಶಿಯೋಮಿ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿದೆ. ಸ್ಯಾಮ್ಸಂಗ್ ಮತ್ತು ಎಲ್ಜಿ ಇದರ ನಂತರದ ಸ್ಥಾನಗಳಲ್ಲಿವೆ. ಗ್ರಾಹಕರು ದೊಡ್ಡ ಗಾತ್ರದ ಪರದೆಗೆ ಆದ್ಯತೆ ನೀಡುತ್ತಿದ್ದಾರೆ, ವಿಶೇಷವಾಗಿ 43-ಇಂಚಿನ ಪರದೆಗೆ ಬೇಡಿಕೆ ಇದೆ. ಈ ಗಾತ್ರದ ಡಿಸ್ಪ್ಲೇಯ ಸ್ಮಾರ್ಟ್ ಟಿವಿ ಮಾರಾಟ 2022 ರಲ್ಲಿ ಶೇಕಡಾ 29 ರಷ್ಟು ಬೆಳೆವಣಿಗೆ ಕಂಡಿದೆ. ಈ ಗಾತ್ರದ ಟಿವಿಗಳ ಬೆಲೆಗಳು ಸಹ ಈಗ ಬಜೆಟ್ ಟಿವಿಗಳ ಮಟ್ಟಕ್ಕೆ ಇಳಿಕೆಯಾಗುತ್ತಿವೆ ಎಂದು ಸಂಶೋಧನಾ ವಿಶ್ಲೇಷಕ ಆಕಾಶ್ ಜಾಟ್ವಾಲಾ ಹೇಳಿದರು.
ಡಾಲ್ಬಿ ಸೌಂಡ್ ಸಿಸ್ಟಮ್ ಅಳವಡಿಕೆಯು ಮತ್ತೊಂದು ಹೆಚ್ಚು ಬೇಡಿಕೆಯ ವೈಶಿಷ್ಟ್ಯವಾಗಿದೆ ಮತ್ತು ಕಡಿಮೆ ಬೆಲೆಯ ಟಿವಿಗಳಲ್ಲಿಯೂ ಇದು ಲಭ್ಯವಿದೆ. ಆಪರೇಟಿಂಗ್ ಸಿಸ್ಟಮ್ ಭಾಗದಲ್ಲಿ, ಗೂಗಲ್ ಟಿವಿ ಬಹುಪಟ್ಟು ಬೆಳೆದಿದೆ ಮತ್ತು ವರ್ಷದಲ್ಲಿ ಮಾರಾಟವಾದ ಒಟ್ಟು ಸ್ಮಾರ್ಟ್ಟಿವಿಗಳ ಪೈಕಿ ಶೇಕಡಾ 4 ರಷ್ಟು ಪಾಲು ಹೊಂದಿದೆ ಎಂದು ಅವರು ಹೇಳಿದರು. ಒನ್ ಪ್ಲಸ್, Vu ಮತ್ತು ಟಿಸಿಎಲ್ 2022 ರಲ್ಲಿ ಸ್ಮಾರ್ಟ್ ಟಿವಿ ವಿಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್‌ಗಳಾಗಿವೆ.
20,000 ದಿಂದ 30,000 ರೂಪಾಯಿ ಬೆಲೆಯ ಶ್ರೇಣಿಯ ಟಿವಿಗಳ ಮಾರಾಟ ಶೇಕಡಾ 40 ರಷ್ಟು ಬೆಳವಣಿಗೆಯಾಗಿ ಒಟ್ಟು ಸ್ಮಾರ್ಟ್ ಟಿವಿ ಮಾರಾಟದ ಶೇಕಡಾ 29 ರಷ್ಟು ಪಾಲು ಪಡೆದಿವೆ. ವರ್ಷದಿಂದ ವರ್ಷಕ್ಕೆ ಸ್ಮಾರ್ಟ್ ಟಿವಿಗಳ ಸರಾಸರಿ ಮಾರಾಟ ಬೆಲೆ (ಎಎಸ್‌ಪಿ) ಶೇಕಡಾ 8 ರಷ್ಟು ಕಡಿಮೆಯಾಗಿ ಸುಮಾರು 30,650 ರೂಪಾಯಿಗಳಿಗೆ ತಲುಪಿದೆ ಎಂದು ಹಿರಿಯ ಸಂಶೋಧನಾ ವಿಶ್ಲೇಷಕ ಅನ್ಶಿಕಾ ಜೈನ್ ಹೇಳಿದ್ದಾರೆ. ಸ್ಮಾರ್ಟ್ ಅಲ್ಲದ ಟಿವಿಗಳ ಮಾರಾಟ 2022 ರಲ್ಲಿ ಶೇಕಡಾ 24 ರಷ್ಟು ಕಡಿಮೆಯಾಗಿದೆ ಮತ್ತು ಆನ್‌ಲೈನ್ ಮೂಲಕ ಅವುಗಳ ಮಾರಾಟ ಶೇಕಡಾ 33 ರಷ್ಟು ಹೆಚ್ಚಾಗಿದೆ.
ಸ್ಮಾರ್ಟ್ ಟಿವಿಗಳು ಇಂಟರ್‌ನೆಟ್‌ಗೆ ಸಂಪರ್ಕಿಸಲು ಅಂತರ್ನಿರ್ಮಿತ ಸಾಮರ್ಥ್ಯವನ್ನು ಹೊಂದಿರುವ ಟಿವಿಗಳಾಗಿವೆ. ಅಂದರೆ, ಆನ್‌ಲೈನ್ ಸೇವೆಗಳನ್ನು ಪ್ರವೇಶಿಸಲು Roku ಬಾಕ್ಸ್ ಅಥವಾ ಗೇಮಿಂಗ್ ಕನ್ಸೋಲ್‌ನಂತಹ ಸಂಪರ್ಕಿತ ಸಾಧನವನ್ನು ಬಳಸುವ ಬದಲು ನಿಮ್ಮ ಟಿವಿ ಆನ್‌ಲೈನ್ ಮೂಲಕ ಕೆಲಸ ಮಾಡುತ್ತದೆ ಎಂದರ್ಥ. ಸ್ಮಾರ್ಟ್ ಟಿವಿಗಳು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವುದರಿಂದ, ನಿಮ್ಮ ಫೋನ್‌ನಲ್ಲಿ ಮಾಡುವ ಹಾಗೆ ನೀವು ಅಪ್ಲಿಕೇಶನ್‌ಗಳನ್ನು ಇದರಲ್ಲಿ ಡೌನ್‌ಲೋಡ್ ಮಾಡಬಹುದು. ಹೆಚ್ಚಿನ ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್‌ಗಳು ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ನಂತಹ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಿಗೆ ಅಪ್ಲಿಕೇಶನ್‌ಗಳನ್ನು ಹೊಂದಿವೆ.
ಇದನ್ನೂ ಓದಿ : ಆರ್ಟೆಮಿಸ್-2 ಬಾಹ್ಯಾಕಾಶ ಯಾನಕ್ಕೆ ತಂಡ ಪ್ರಕಟ: ಚಂದ್ರನ ಅಧ್ಯಯನಕ್ಕಾಗಿ ನಾಸಾ ಮಿಷನ್