ಹೈದರಾಬಾದ್: 2022-23 ರ ಸಾಲಿನ ಹಣಕಾಸು ವರ್ಷದ 7 ತಿಂಗಳೊಳಗೆ ಮೊಬೈಲ್ ರಫ್ತು 10 ಬಿಲಿಯನ್ (ಸುಮಾರು ಒಂದು ಸಾವಿರ ಕೋಟಿ) ಅಮೆರಿಕನ್ ಡಾಲರ್ಗೆ ತಲುಪಿದೆ. ಕಳೆದ ವರ್ಷದ ಇದೇ 7 ತಿಂಗಳ ಅವಧಿಯಲ್ಲಿ ಕೇವಲ 4.97 ಬಿಲಿಯನ್ ಡಾಲರ್ ವಹಿವಾಟು ನಡೆದಿತ್ತು. ಈ ವರ್ಷ ಇದು ಶೇಕಡಾ 60ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಈ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಸಕ್ತ ಹಣಕಾಸು ವರ್ಷದ 7 ತಿಂಗಳಲ್ಲಿ ಮೊಬೈಲ್ ರಫ್ತು ಗಣನೀಯ ಪ್ರಮಾಣದಲ್ಲಿ ತಲುಪಿದೆ. ಕಡಿಮೆ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ಒಂದಿ ಸಾವಿರ ಕೋಟಿಯಷ್ಟು ವಹಿವಾಟು ನಡೆಸಲಾಗಿದೆ. ಕಳೆದ ವರ್ಷ ಇಷ್ಟೇ ಅವಧಿಯಲ್ಲಿ 4.97 ಬಿಲಿಯನ್ ಡಾಲರ್ (500 ಕೋಟಿ ರೂಪಾಯಿ) ರಫ್ತು ವಹಿವಾಟು ನಡೆಸಲಾಗಿತ್ತು. ಅಂದರೆ ಈ ಸಾಲಿನಲ್ಲಿ ಶೇಕಡಾ 60 ರಷ್ಟು ಹೆಚ್ಚಾಗಿದೆ. ಪ್ರತಿ ತಿಂಗಳು ಸರಾಸರಿ 1 ಬಿಲಿಯನ್ ಡಾಲರ್ ಮೊಬೈಲ್ಗಳನ್ನು ರಫ್ತು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶ್ವದ ಎಲ್ಲ ಮೊಬೈಲ್ ತಯಾರಕ ಕಂಪನಿಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ, ಟೆಲಿಕಾಂ ಉತ್ಪಾದನೆಯು ಗಣನೀಯವಾಗಿ ಬೆಳೆಯುತ್ತದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಅಶ್ವಿನಿ ವೈಷ್ಣವ್ ಅವರು ಭಾರತದಲ್ಲಿ ಟೆಲಿಕಾಂ ಉದ್ಯಮವು ಭಾರೀ ಪ್ರಗತಿ ಕಾಣುತ್ತಿದೆ. ಉದ್ಯೋಗ ಜನರೇಟರ್ ಮತ್ತು ಮೊಬೈಲ್ ರಫ್ತುಗಳು ಪ್ರಸಕ್ತ ಹಣಕಾಸು ವರ್ಷವಾದ 2022-23 ರಲ್ಲಿ 10 ಬಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ತನ್ನ ಆತ್ಮನಿರ್ಭರ್ ಯೋಜನೆಯ ಭಾಗವಾಗಿ, ಕೇಂದ್ರ ಸರ್ಕಾರವು ಭಾರತೀಯ ಸಂಸ್ಥೆಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆದಾರ ಗುಂಪಿನಲ್ಲಿ ಭಾರತವನ್ನು ನಿಲ್ಲಿಸಲು ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ವಿವಿಧ ವಲಯಗಳಲ್ಲಿ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳನ್ನು ಪ್ರಾರಂಭಿಸಿತು. ಇದಾದ ಬಳಿಕ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಉತ್ಪಾದನೆಯಾಗಿ ವಿಶ್ವಕ್ಕೆ ರಫ್ತಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಐಫೋನ್ ತಯಾರಕ ಕಂಪನಿ ಆ್ಯಪಲ್ ಕಳೆದ ಒಂದೂವರೆ ವರ್ಷಗಳಲ್ಲಿ ಭಾರತದಲ್ಲಿ ಒಂದು ಲಕ್ಷ ಹೊಸ ಉದ್ಯೋಗಗಳನ್ನು ಒದಗಿಸಿದೆ ಎಂದೂ ಹೇಳಿದೆ.
ಇದನ್ನೂ ಓದಿ: ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು: ಕೇಂದ್ರ ಸರ್ಕಾರ