ಮುಂದಿನ ಐದು ವರ್ಷಗಳ ಕಾಲ ಭಾರತದ ಜಿಡಿಪಿ ನಿರಂತರವಾಗಿ ಶೇ 9ರ ದರದಲ್ಲಿ ಬೆಳವಣಿಗೆ ಸಾಧಿಸಿಸಿದರೆ 2028-29ರ ವೇಳೆಗೆ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ ಸುಬ್ಬರಾವ್ ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ 'ಫೆಡರೇಶನ್ ಆಫ್ ತೆಲಂಗಾಣ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆನ್ ಇಂಡಿಯಾ ಅಟ್ ದ ರೇಟ್ ಆಫ್ 75-ಮಾರ್ಚಿಂಗ್ 5 ಟ್ರಿಲಿಯನ್ ಎಕಾನಮಿ' ಎಂಬ ವಿಷಯದ ಕುರಿತು ಮಾತನಾಡಿದ ಅವರು, ಭಾರತಕ್ಕೆ 5 ಟ್ರಿಲಿಯನ್ ಆರ್ಥಿಕತೆಯ ಕನಸನ್ನು ಸಾಧಿಸಲು ಎಂಟು ಪ್ರಮುಖ ಸವಾಲುಗಳಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರಾಜ್ಯಗಳಿಗೆ ನೀಡುವ ಸಬ್ಸಿಡಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಈ ಪರಿಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳು ಕಾರಣವಾಗಿವೆ. ದೇಶದ ಬಳಿ ಹೆಚ್ಚುವರಿ ಬಜೆಟ್ ಇಲ್ಲ ಎಂಬುದನ್ನು ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು ಎಂದು ಸುಬ್ಬರಾವ್ ಎಚ್ಚರಿಕೆ ನೀಡಿದ್ದಾರೆ. ಖಂಡಿತವಾಗಿಯೂ ಕೆಲ ಸುಧಾರಣಾ ಕ್ರಮಗಳ ಅಗತ್ಯವಿದೆ. ಸಾಲವಾಗಿ ಪಡೆದ ಹಣದಲ್ಲಿ ಉಚಿತ ಕೊಡುಗೆಗಳನ್ನು ನೀಡುವುದರ ಬಗ್ಗೆ ಎಚ್ಚರಿಕೆಯಿಂದ ವರ್ತಿಸಬೇಕು. ಮುಂದಿನ ಪೀಳಿಗೆಗೆ ಅನಗತ್ಯ ಸಾಲದ ಹೊರೆ ಬೀಳಬಾರದು. 2028-29 ರ ಮೊದಲು ನರೇಂದ್ರ ಮೋದಿ ಅವರು ಯೋಜಿಸಿದಂತೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಎಂದು ಸುಬ್ಬರಾವ್ ಹೇಳಿದರು.
ಇದಕ್ಕಾಗಿ ನಾವು ಮುಂದಿನ 5 ವರ್ಷಗಳವರೆಗೆ ಸತತವಾಗಿ 9 ಪ್ರತಿಶತದಷ್ಟು ವಾರ್ಷಿಕ ಜಿಡಿಪಿ ಬೆಳವಣಿಗೆಯ ದರವನ್ನು ಸಾಧಿಸಬೇಕಾಗಿದೆ. ಭಾರತದ ಎದುರಿಗೆ ಎಂಟು ಪ್ರಮುಖ ಸವಾಲುಗಳಿವೆ. ಆ ಸವಾಲುಗಳೆಂದರೆ ಹೂಡಿಕೆಯನ್ನು ಹೆಚ್ಚಿಸುವುದು, ಉತ್ಪಾದಕತೆ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಸುಧಾರಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಜಾಗತಿಕ ಮೆಗಾ-ಟ್ರೆಂಡ್‌ಗಳನ್ನು ನಿರ್ವಹಿಸುವುದು ಮತ್ತು ಆಡಳಿತವನ್ನು ಸುಧಾರಿಸುವುದು ಎಂದು ಅವರು ತಿಳಿಸಿದ್ದಾರೆ.