ನೀವು ಆದಾಯ ತೆರಿಗೆ(ಐಟಿ) ವ್ಯಾಪ್ತಿಗೆ ಬಂದಿದ್ದೀರಾ?, ನಿಮ್ಮ ಕಂಪನಿಯು ನಿಮ್ಮ ಸಂಬಳದ ಮೂಲದಲ್ಲಿ ತೆರಿಗೆ (ಟಿಡಿಎಸ್) ಕಡಿತಗೊಳಿಸುತ್ತದೆಯೇ?, ಹಾಗಿದ್ದರೆ ನೀವು ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಬೇಕಿರುತ್ತದೆ. ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಎಂಬುದು ಅನೇಕರ ಪ್ರಶ್ನೆ. ಇದಕ್ಕೆ ಇಲ್ಲಿದೆ ಉತ್ತರ.
ಕಳೆದ ಹಣಕಾಸು ವರ್ಷ ಅಂದರೆ 2022-23 ರ ರಿಟರ್ನ್ಸ್ ಫೈಲ್ ಮಾಡುವ ಸಮಯ ಸಮೀಪಿಸುತ್ತಿದೆ. ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆಯನ್ನು ಜುಲೈ 31 ರೊಳಗೆ ಪೂರ್ಣಗೊಳಿಸಲು ಹೇಳುತ್ತದೆ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಗಡುವನ್ನು ವಿಸ್ತರಿಸುತ್ತದೆ.
* ಮರುಪಾವತಿ ಪಡೆಯುವುದು ಹೇಗೆ?: ನೀವು ಮೂಲದಲ್ಲಿ ಹೆಚ್ಚುವರಿ ತೆರಿಗೆ ಕಡಿತ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ನಿಯಮಗಳ ಪ್ರಕಾರ, ಆ ಮೊತ್ತವನ್ನು ಮರುಪಾವತಿ ರೂಪದಲ್ಲಿ ಪಡೆಯಲು ಅವಕಾಶವಿದೆ. ನಿಗದಿತ ದಿನಾಂಕಕ್ಕೆ ಮೊದಲು ರಿಟರ್ನ್ಸ್ ಸಲ್ಲಿಸಿದರೆ ಆದಾಯ ತೆರಿಗೆ ಇಲಾಖೆಯು ಬಡ್ಡಿ ಸೇರಿದಂತೆ ಮೊತ್ತ ಪಾವತಿಸುತ್ತದೆ. ನೀವು ತೆರಿಗೆಯನ್ನು ನಿಗದಿತ ಕಾಲವಧಿಯಲ್ಲಿ ಪಾವತಿಸಬೇಕು. ಒಂದು ವೇಳೆ ತಪ್ಪಿಸಿಕೊಂಡರೆ ಬಡ್ಡಿ ಮತ್ತು ದಂಡ ಅನ್ವಯಿಸುತ್ತದೆ.
* ಸಾಲ ಪಡೆಯಲು ಅವಕಾಶ: ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕನಿಷ್ಠ 3 ವರ್ಷಗಳ ತೆರಿಗೆ ರಿಟರ್ನ್‌ಗಳನ್ನು ನಿಮಗೆ ಸಾಲ ನೀಡಲು ಆದಾಯದ ಪುರಾವೆಯಾಗಿ ಕೇಳುತ್ತವೆ. ಆದ್ದರಿಂದ, ವಾರ್ಷಿಕವಾಗಿ ರಿಟರ್ನ್ಸ್ ಸಲ್ಲಿಸಬೇಕು. ಯಾವುದೇ ರಿಟರ್ನ್ಸ್ ಇಲ್ಲದಿದ್ದರೆ, ಗೃಹ ಸಾಲವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.
* ವೀಸಾ ಪಡೆಯಲು ಅನುಕೂಲ: ಅಮೆರಿಕ ಮತ್ತು ಇತರ ದೇಶಗಳಿಗೆ ವೀಸಾ ಬೇಕಾದರೆ ಆದಾಯ ತೆರಿಗೆ ರಿಟರ್ನ್ಸ್ ಕೇಳುವ ಸಾಧ್ಯತೆ ಇದೆ. ಇದು ನಿಮ್ಮ ಆದಾಯದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಗಮನಿಸಿ, ವೀಸಾ ಅರ್ಜಿಯೊಂದಿಗೆ ರಿಟರ್ನ್ಸ್ ಕಡ್ಡಾಯವಲ್ಲ. ಆದ್ರೆ ಸುಲಭವಾಗಿ ವೀಸಾ ಪಡೆಯಲು ಸಾಧ್ಯವಾಗುತ್ತದೆ.
* ನಷ್ಟಗಳ ಹೊಂದಾಣಿಕೆ: ಆಸ್ತಿಗಳು, ಷೇರುಗಳು, ಮ್ಯೂಚುವಲ್ ಫಂಡ್ ಘಟಕಗಳ ಮಾರಾಟದ ಮೇಲೆ ದೀರ್ಘಾವಧಿಯ ಬಂಡವಾಳ ನಷ್ಟವನ್ನು ಭವಿಷ್ಯದ ದೀರ್ಘಾವಧಿಯ ಬಂಡವಾಳ ಲಾಭಗಳ ವಿರುದ್ಧ ಸರಿಹೊಂದಿಸಬಹುದು. ಇದಕ್ಕಾಗಿ ರಿಟರ್ನ್ಸ್ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಿ. ತೆರಿಗೆಗೆ ಒಳಪಡುವ ಆದಾಯ ಇಲ್ಲದೇ ಇದ್ದಲ್ಲಿ ಮೇಲೆ ತಿಳಿಸಿದ ನಷ್ಟಗಳಿದ್ದಾಗ ರಿಟರ್ನ್ಸ್ ಸಲ್ಲಿಸಬೇಕು.
* ಗಡುವು ಮೀರಿದ್ರೆ ಎಷ್ಟು ದಂಡ?: ನಿಗದಿತ ದಿನಾಂಕದ ನಂತರವೂ ರಿಟರ್ನ್ಸ್ ಸಲ್ಲಿಸಬಹುದು. ಆದರೆ, ಇದಕ್ಕೆ ದಂಡ ಪಾವತಿಸಬೇಕು. 5 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದಲ್ಲಿ 1,000 ರೂ., ಅದಕ್ಕಿಂತ ಹೆಚ್ಚು ಇದ್ದರೆ 5,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಡಿಸೆಂಬರ್ 31ರ ನಂತರ ಈ ಮೊತ್ತ 10 ಸಾವಿರ ರೂಪಾಯಿ ಆಗುತ್ತದೆ.
ಸಾಧ್ಯವಾದಷ್ಟು ನಿಗದಿತ ದಿನಾಂಕ ಸಮೀಪಿಸುವ ಮೊದಲು ಅನ್ವಯವಾಗುವ ಐಟಿ ಫಾರ್ಮ್‌ನಲ್ಲಿ ರಿಟರ್ನ್‌ಗಳನ್ನು ಸಲ್ಲಿಸುವುದು ಯಾವಾಗಲೂ ಉತ್ತಮ. ತ್ವರಿತ ಮರುಪಾವತಿಯ ಹೊರತಾಗಿಯೂ ಯಾವುದೇ ತಪ್ಪು ಕಂಡುಬಂದಲ್ಲಿ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ: ನೀವು ಯಾವ ಪದ್ಧತಿಯಲ್ಲಿ ತೆರಿಗೆ ಪಾವತಿಸುತ್ತೀರಿ..? ನಿಮ್ಮ ಸಹಾಯಕ್ಕೆ IT ಇಲಾಖೆಯಿಂದ ಕ್ಯಾಲ್ಕುಲೇಟರ್ ವ್ಯವಸ್ಥೆ!