ಹೈದರಾಬಾದ್: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಆದರೆ ಅನೇಕರಿಗೆ ಫಾರ್ಮ್ 16 ಇಲ್ಲದೇ ರಿಟರ್ನ್ಸ್ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಕೆಲವು ಗೊಂದಲಗಳಿವೆ. ನಿಮಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲವೇ?. ಹಾಗಾದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ. ಆದಾಯವು ತೆರಿಗೆ ಮಿತಿಯನ್ನು ಮೀರಿದಾಗ ಮತ್ತು ಯಾವುದೇ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ವಿಧಿಸಿದಾಗ ಉದ್ಯೋಗದಾತರು ಫಾರ್ಮ್ 16 ಅನ್ನು ನೀಡುತ್ತಾರೆ.
ಕೆಲವು ಉದ್ಯೋಗಿಗಳಿಗೆ ವಿವಿಧ ಕಾರಣಗಳಿಂದ ಈ ನಮೂನೆಯನ್ನು ನೀಡವುದಿಲ್ಲ. ಆದರೂ, ಅವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಫಾರ್ಮ್ 16 ಅನ್ನು ಒಂದು ಹಣಕಾಸು ವರ್ಷದಲ್ಲಿ ಗಳಿಸಿದ ಸಂಬಳ ಮತ್ತು ಪಾವತಿಸಿದ ತೆರಿಗೆಯ ವಿವರಗಳೊಂದಿಗೆ ನೀಡಲಾಗುತ್ತದೆ. ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದ್ದಾಗ ಈ ಫಾರ್ಮ್ ಅನ್ನು ನೀಡಲಾಗುವುದಿಲ್ಲ. ಕೆಲವೊಮ್ಮೆ ಈ ದಾಖಲೆಯನ್ನು ಮಾಲೀಕರಿಂದ ಇನ್ನೂ ಸ್ವೀಕರಿಸದಿರಬಹುದು. ಈ ಸಂದರ್ಭದಲ್ಲಿ ನೀವು ಹೀಗೆ ಮಾಡಬಹುದು.
ಮೊದಲು, 2022-23ರ ಹಣಕಾಸು ವರ್ಷದಲ್ಲಿ ನೀವು ಪಡೆದ ವೇತನದ ವಿವರಗಳನ್ನು ತಿಳಿದುಕೊಳ್ಳಿ. ನಿಮ್ಮ ಪೇ ಸ್ಲಿಪ್‌ಗಳು ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ. ನಂತರ ನಿಮ್ಮ ಒಟ್ಟು ಆದಾಯ ಎಷ್ಟು ಎಂದು ನೋಡಿ. ವೇತನದ ವಿವರಗಳು, ಭವಿಷ್ಯ ನಿಧಿ ಮೊತ್ತ, ಬಾಡಿಗೆ ಭತ್ಯೆ (HRA) ವಿವರಗಳನ್ನು ಸೇರಿಸಿ. ಇವೆಲ್ಲವನ್ನೂ ವಿನಾಯಿತಿಗಳ ಅಡಿ ತೋರಿಸಬಹುದು.
ನಂತರ, ಸಂಬಳವನ್ನು ಹೊರತುಪಡಿಸಿ ಬೇರೆ ಮೂಲಗಳಿಂದ ಯಾವ ಆದಾಯ ಬರುತ್ತಿದೆ ಎಂದು ಪರಿಶೀಲಿಸಿ. ಉದಾಹರಣೆಗೆ ಉಳಿತಾಯ ಖಾತೆಗೆ ಬಡ್ಡಿ ಇದೆಯೇ, ನಿಶ್ಚಿತ ಠೇವಣಿ ಮೇಲಿನ ಬಡ್ಡಿ ಇದೆಯೇ, ಡಿವಿಡೆಂಡ್ ಇದೆಯೇ ಎಂದು ತಿಳಿದುಕೊಳ್ಳಿ. ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿದಾಗ ಇವು ತಿಳಿಯುತ್ತದೆ. ಬಳಿಕ ಆದಾಯ ತೆರಿಗೆ ಪೋರ್ಟಲ್‌ಗೆ ಹೋಗಿ ಮತ್ತು ಲಭ್ಯವಿದ್ದರೆ ಫಾರ್ಮ್ 16, AIS (ವಾರ್ಷಿಕ ಮಾಹಿತಿ ಹೇಳಿಕೆ) ಅನ್ನು ಡೌನ್‌ಲೋಡ್ ಮಾಡಿ. ನಿಮ್ಮ ವಿವರಗಳನ್ನು ಅದರಲ್ಲಿರುವ ಮಾಹಿತಿಯೊಂದಿಗೆ ಹೋಲಿಕೆ ಮಾಡಿ. ಅದರ ನಂತರ, ರಿಟರ್ನ್ಸ್ ಸಲ್ಲಿಸಬಹುದು.
ಅಂತಿಮವಾಗಿ, ವಿನಾಯಿತಿಗಳ ಹೊರೆತಾಗಿ ಯಾವುದೇ ತೆರಿಗೆಯ ಆದಾಯವಿಲ್ಲದಿದ್ದರೂ ಸಹ ರಿಟರ್ನ್ಸ್ ಸಲ್ಲಿಸಲು ಮರೆಯಬೇಡಿ. ಇದು ಭವಿಷ್ಯದಲ್ಲಿ ನಿಮಗೆ ಸಮಸ್ಯೆಯಾಗದಂತೆ ತಡೆಯುತ್ತದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ತೆರಿಗೆ ಮರುಪಾವತಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸೆಕ್ಷನ್ 234H ಅಡಿ ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ಎರಡನ್ನೂ ಲಿಂಕ್ ಮಾಡಿಸಬಹುದು.
ಇದನ್ನೂ ಓದಿ: ಅರಬ್ ರಾಷ್ಟ್ರದಲ್ಲಿ ರುಪೀ ಮೂಲಕ ವಹಿವಾಟಿಗೆ ಅವಕಾಶ: ಆರ್ಬಿಐ, ಯುಎಇಯ ಸೆಂಟ್ರಲ್ ಬ್ಯಾಂಕ್ ಒಪ್ಪಂದ
ಐಟಿ ರಿಟರ್ನ್ ಫೈಲ್ ಮಾಡಲು ಇದೇ ಜುಲೈ 31 ಕೊನೆಯ ದಿನ?: ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರ ನಂತರ ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲದಿರುವುದರಿಂದ ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗನೆ ಐಟಿಆರ್ ಫೈಲಿಂಗ್ ಮುಗಿಸಿಕೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ನಿನ್ನೆ ಈ ಬಗ್ಗೆ ಸ್ಪಷ್ಟಪಡಿಸಿದ್ದರು.