ಬಿಲಾಸ್ಪುರ್ (ಹಿಮಾಚಲ ಪ್ರದೇಶ): ನಷ್ಟದ ಹಿನ್ನೆಲೆ ಇಲ್ಲಿರುವ ಎಸಿಸಿ ಸಿಮೆಂಟ್ ಘಟಕಕ್ಕೆ ಬೀಗ ಹಾಕಲಾಗಿದ್ದು, ತಕ್ಷಣದಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಬರದಂತೆ, ಇಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಕುರಿತು ನೋಟಿಸ್ ಜಾರಿ ಮಾಡಲಾಗಿದೆ. ಘಟಕ ಬಂದ್ ಮಾಡುತ್ತಿರುವ ಹಿನ್ನೆಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಟ್ರಕ್ ಆಪರೇಟರ್‌ಗಳು ನಿರುದ್ಯೋಗಿಗಳಾಗಿದ್ದು, ಉದ್ಯೋಗದ ಬಿಕ್ಕಟ್ಟು ಎದುರಿಸುವಂತಾಗಿದೆ.
ನೌಕರರಿಗೆ ಬರಸಿಡಿಲಿನಂತೆ ಬಂದ ನೋಟಿಸ್.. 'ಪ್ರಿಯ ನೌಕರರೇ, ಸದ್ಯದ ಮಾರುಕಟ್ಟೆ ಸ್ಥಿತಿಯಲ್ಲಿ ಕಾರ್ಯ ನಿರ್ವಹಣೆ ವೆಚ್ಚ ದುಬಾರಿಯಾಗಿದೆ ಎಂಬುದು ನಿಮ್ಮ ಅರಿವಿಗೆ ಬಂದಿದೆ. ಸಿಮೆಂಟ್ ಸಾರಿಗೆಯಲ್ಲಿ ಅಸಮರ್ಪಕತೆ ಕಂಡು ಬಂದಿದ್ದು, ಇದರಲ್ಲಿ ಭಾರೀ ಇಳಿಕೆ ಇದೆ. ಇದು ಕಳಪೆ ಮಟ್ಟದ ಸಿಮೆಂಟ್ ರವಾನೆಗೆ ಕಾರಣವಾಗಿದೆ. ಇದು ನಮ್ಮ ಮಾರುಕಟ್ಟೆಯ ಷೇರುಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಂಪನಿಯ ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಕಾಣವಾಗಿದೆ. ಈ ಎಲ್ಲಾ ಪರಿಸ್ಥಿತಿಗಳ ಅವಲೋಕನ ನಡೆಸಿ ಆಡಳಿತ ಮಂಡಳಿ, ಘಟಕದ ಕಾರ್ಯ ಚಟುವಟಿಕೆ ನಿಲ್ಲಿಸಲು ನಿರ್ಧರಿಸಿದೆ. ತಕ್ಷಣಕ್ಕೆ ಇದು ಜಾರಿಯಾಗಲಿದೆ. ಈ ಹಿನ್ನೆಲೆ ಎಸಿಸಿ ಗಗ್ಗಲ್ ಸಿಮೆಂಟ್ನ ಎಲ್ಲಾ ನೌಕರರು ಮುಂದಿನ ಆದೇಶದವರೆಗೂ ಕೆಲಸಕ್ಕೆ ಬರಬೇಡಿ' ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ.
ಮೂರು ದಶಕದ ಹಿಂದೆ ಸ್ಥಾಪನೆಯಾಗಿದ್ದ ಘಟಕ.. 1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್ ವಲಫರ್ಜ್ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್ಗೆ ಸೇರಿದೆ. ಸದ್ಯ ಸಿಮೆಂಟ್ ಕಂಪನಿ ಮತ್ತು ಸಾರಿಗೆ ನಡುವೆ ಸಹಕಾರ ವೃದ್ಧಿ ಕಾರ್ಯ ನಡೆಯುತ್ತಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ.
ಹಿಮಾಚಲ ಪ್ರದೇಶ ಸೇರಿದಂತೆ ನೆರೆಯ ರಾಜ್ಯದ ಅನೇಕ ಮಂದಿ ಈ ಸ್ಥಾವರದ ಅವಲಂಬನೆಯಿಂದ ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ. ಇದೀಗ ಏಕಾಏಕಿ ಕೆಲಸಕ್ಕೆ ಹಾಜರಾಗಬೇಡಿ ಎಂಬ ಸೂಚನೆ ಹಿನ್ನೆಲೆ ಅವರು ಆರ್ಥಿಕ ಮತ್ತು ಉದ್ಯೋಗ ಬಿಕ್ಕಟ್ಟು ಎದುರಿಸಲಿದ್ದಾರೆ.
ಎಸಿಸಿ ಗಗ್ಗಲ್ ಸಿಮೆಂಟ್ ಘಟಕದಿಂದ ಸಿಮೆಂಟ್ ಸಾಗಿಸುವ ಸಾರಿಗೆ ಸಂಸ್ಥೆಗಳಿಗೆ ಕಳೆದ ಹಲವು ದಿನಗಳಿಂದ ಸರಿಯಾದ ಸಿಮೆಂಟ್ ಸಾಗಣೆ ಕೆಲಸ ಸಿಗುತ್ತಿಲ್ಲ. ಜೊತೆಗೆ ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದು, ಲಾರಿಗಳ ಸಾಲದ ಕಂತುಗಳನ್ನು ಪಾವತಿಸಲು ಮತ್ತು ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ನಿರ್ವಾಹಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: 2000 ರೂಪಾಯಿ ನೋಟು ಮುದ್ರಣ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ