ವಿವಿಧ ವಸ್ತುಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ದರಗಳನ್ನು ಪರಿಷ್ಕರಿಸುವ, ಹೊಸದಾಗಿ ವಿಧಿಸುವ ಜಿಎಸ್‌ಟಿ ಮಂಡಳಿಯ ನೂತನ ನಿರ್ಧಾರಗಳು ಜಾರಿಯಾಗಲಿದ್ದು, ಗ್ರಾಹಕರು ಇಂದಿನಿಂದ ಕೆಲ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಕೆಲ ಹೊಸ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲಾಗಿದೆ. ಅದರಂತೆ ಇನ್ನೂ ಕೆಲವೊಂದು ವಸ್ತು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ಅವು ಅಗ್ಗವಾಗಲಿವೆ.
ಕಳೆದ ತಿಂಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹಲವಾರು ಸರಕು ಮತ್ತು ಸೇವೆಗಳ ಮೇಲೆ ತೆರಿಗೆಯನ್ನು ವಿಧಿಸಲಾಗಿತ್ತು.
ಯಾವುದು ದುಬಾರಿ?
- ಆಟಾ, ಪನೀರ್ ಮತ್ತು ಮೊಸರು ಮುಂತಾದ ಮೊದಲೇ ಪ್ಯಾಕ್ ಮಾಡಿದ, ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ 5 ಜಿಎಸ್‌ಟಿ
- 5,000 ರೂಪಾಯಿಗಳಿಗಿಂತ ಹೆಚ್ಚಿನ ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳ ಮೇಲೆ ಶೇ 5 ಜಿಎಸ್‌ಟಿ
- ನಕ್ಷೆ ಮತ್ತು ಚಾರ್ಟ್‌ಗಳು, ಅಟ್ಲಾಸ್‌ಗಳಿಗೆ ಶೇ 12 ರಷ್ಟು ಜಿಎಸ್‌ಟಿ
- ಟೆಟ್ರಾ ಪ್ಯಾಕ್‌ಗಳ ಮೇಲೆ ಶೇ 18 ಜಿಎಸ್‌ಟಿ
- ಚೆಕ್‌ಗಳ ವಿತರಣೆಗೆ (ಸಡಿಲ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ ಶೇ 18 ಜಿಎಸ್‌ಟಿ
- ಮುದ್ರಣ, ಬರವಣಿಗೆ ಅಥವಾ ಶಾಯಿಯಂತಹ ಉತ್ಪನ್ನಗಳು, ಕತ್ತರಿಸುವ ಬ್ಲೇಡ್‌ಗಳು, ಪೇಪರ್ ಚಾಕುಗಳು ಮತ್ತು ಪೆನ್ಸಿಲ್ ಶಾರ್ಪನರ್, ಎಲ್ಇಡಿ ದೀಪಗಳು, ಡ್ರಾಯಿಂಗ್ ಮತ್ತು ಮಾರ್ಕ್ ಔಟ್ ಉಪಕರಣಗಳ ಮೇಲೆ ಪ್ರಸ್ತುತ ಇರುವ ಜಿಎಸ್‌ಟಿ ದರಗಳು ಶೇ 12 ರಿಂದ ಶೇ 18 ಕ್ಕೆ ಹೆಚ್ಚಳ
- ಸೋಲಾರ್ ವಾಟರ್ ಹೀಟರ್ ಮೇಲೆ ಇದ್ದ ಶೇ 5 ಜಿಎಸ್‌ಟಿ ಶೇ 12 ಕ್ಕೆ ಹೆಚ್ಚಳ
- ರಸ್ತೆಗಳು, ಸೇತುವೆಗಳು, ರೈಲುಮಾರ್ಗಗಳು, ಮೆಟ್ರೋ, ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು ಮತ್ತು ಸ್ಮಶಾನಗಳ ಕೆಲಸದ ಒಪ್ಪಂದಗಳಂತಹ ಸೇವೆಗಳಿಗೆ ಪ್ರಸ್ತುತ ಇರುವ ಶೇ 12 ರಿಂದ ಶೇ 18 ಕ್ಕೆ ಜಿಎಸ್‌ಟಿ ಹೆಚ್ಚಳ
ಯಾವುದು ಅಗ್ಗ?
- ವೈದ್ಯಕೀಯ ಚಿಕಿತ್ಸೆಯಲ್ಲಿ ತ್ಯಾಜ್ಯ ಸಂಗ್ರಹಿಸುವ ಉಪಕರಣಗಳು, ರೋಪ್‌ವೇ ಮೂಲಕ ಸರಕು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆ ಶೇ 12 ರಿಂದ ಶೇ 5 ಕ್ಕೆ ಕಡಿತ
- ಟ್ರಕ್, ಸರಕು ಸಾಗಣೆಯ ಬಾಡಿಗೆಗೆ ಇಂಧನದ ವೆಚ್ಚವನ್ನು ಸೇರಿಸಿದ ಮೊತ್ತದ ಮೇಲೆ ಈಗ ವಿಧಿಸಲಾಗುತ್ತಿರುವ ಶೇ 18 ರ ಬದಲಾಗಿ ಶೇ 12 ರಷ್ಟು ಜಿಎಸ್‌ಟಿ
- ಈಶಾನ್ಯ ರಾಜ್ಯಗಳು ಮತ್ತು ಬಾಗ್ಡೋಗ್ರಾದಿಂದ ವಿಮಾನದ ಮೂಲಕ ಪ್ರಯಾಣಿಕರ ಸಾಗಣೆಗೆ ನೀಡಲಾಗಿರುವ ಜಿಎಸ್‌ಟಿ ವಿನಾಯಿತಿ ಎಕಾನಮಿ ಕ್ಲಾಸ್ಗೆ ಮಾತ್ರ ಸೀಮಿತವಾಗಿರುತ್ತದೆ.
- ಬ್ಯಾಟರಿ ಪ್ಯಾಕ್ ಇರುವ ಅಥವಾ ಇಲ್ಲದಿರುವ ಎಲೆಕ್ಟ್ರಿಕ್ ವಾಹನಗಳಿಗೆ ಶೇ 5ರಷ್ಟು ರಿಯಾಯಿತಿ ದರದ ಜಿಎಸ್‌ಟಿ