ಹೈದರಾಬಾದ್ : ಪ್ರತಿಯೊಬ್ಬರೂ ಸುಸ್ಥಿರ ಜೀವನ ಹೊಂದಲು ದುಡಿಮೆ ಮಾಡುತ್ತೇವೆ. ನಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡುವುದು ಮುಖ್ಯವಾಗುತ್ತದೆ. ಈ ರೀತಿ ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿತಾಯ ಮಾಡಲು ತೆರಿಗೆ ಉಳಿತಾಯ ಯೋಜನೆ ಹೊಂದುವುದು ಪ್ರಮುಖ ಸಂಗತಿಯಾಗಿದೆ.
ತೆರಿಗೆ ಉಳಿತಾಯ ಮಾಡಲು ಸ್ಥಿರ ಠೇವಣಿಗಳು : ನಾವು ದುಡಿದ ಹಣವನ್ನು ವಿವಿಧ ರೀತಿಯಲ್ಲಿ ಉಳಿತಾಯ ಮಾಡಬಹುದು. ಪ್ರತಿಯೊಬ್ಬರೂ ಅವರಿಗೆ ಸೂಕ್ತವಾದ ವಿಭಿನ್ನ ಆಯ್ಕೆಗಳನ್ನು ಹೊಂದಲು ಇಲ್ಲಿ ಅವಕಾಶ ಇದೆ. ಇದರಲ್ಲಿ ಪ್ರಮುಖವಾಗಿ ತಮ್ಮ ಹಣದ ಸುರಕ್ಷತೆಯನ್ನು ಬಯಸುವವರು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡುವ ತೆರಿಗೆ ಉಳಿತಾಯ ಸ್ಥಿರ ಠೇವಣಿ (ಎಫ್‌ಡಿ)ಗಳ ಮೊರೆ ಹೋಗಬಹುದು. ಇಲ್ಲಿ ಪ್ರತಿಯೊಬ್ಬರೂ ತಮ್ಮ ವಾರ್ಷಿಕ ಹಣಕಾಸು ಯೋಜನೆಗಳ ಪ್ರಮುಖ ಭಾಗವಾಗಿ ತೆರಿಗೆ ಉಳಿತಾಯವನ್ನು ಪರಿಗಣಿಸಬೇಕು.
ಸ್ಥಿರ ಠೇವಣಿಗಳ ಪ್ರಯೋಜನಗಳು : ಈ ಸ್ಥಿರ ಠೇವಣಿ (ಎಫ್‌ಡಿ) ಹೂಡಿಕೆಯಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ. ಸ್ಥಿರ ಠೇವಣಿ ಹೊಂದುವುದರಿಂದ ನಮಗೆ ತೆರಿಗೆ ವಿನಾಯಿತಿ, ಹೂಡಿಕೆ ಮೊತ್ತದ ಸುರಕ್ಷತೆ ಮತ್ತು ಸ್ಥಿರವಾದ ಬಡ್ಡಿದರ ಮುಂತಾದ ಉಪಯೋಗಳಿವೆ. ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡಲು ಬ್ಯಾಂಕ್‌ಗಳು ಕೊಡಮಾಡುವ ಈ ಎಫ್‌ಡಿಗಳನ್ನು ಸುರಕ್ಷಿತ ಯೋಜನೆಗಳೆಂದು ಪರಿಗಣಿಸಲಾಗುತ್ತದೆ. ಅನೇಕರು ಈ ರೀತಿ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿ ನಿರ್ದಿಷ್ಟ ಆದಾಯ ಮತ್ತು ಸುಮಾರು 7% ಬಡ್ಡಿ ದರಗಳಿಂದ ಆದಾಯ ಗಳಿಸುತ್ತಿದ್ದಾರೆ.
ನಿರ್ದಿಷ್ಟ ಮಿತಿಗಳ ಒಳಗೆ ತೆರಿಗೆ ವಿನಾಯಿತಿ : ಇನ್ನು ತೆರಿಗೆ ಉಳಿಸಲು ಬಯಸುವವರು ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಮೊದಲು ಎಫ್‌ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80C ಅಡಿಯಲ್ಲಿ ನಿರ್ದಿಷ್ಟ ಮಿತಿಗಳವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ವಿವಿಧ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಮಾಡಿದ ಹೂಡಿಕೆಯ ಮೇಲೆ 1,50,000 ರೂ.ವರೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ.
ತೆರಿಗೆ ವಿನಾಯಿತಿ ಪಡೆಯಲು ನಿರ್ದಿಷ್ಟ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬಗಳು (HUFs) ಈ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು. ಈ ಠೇವಣಿಗಳನ್ನು ನೀವು ಈಗಾಗಲೇ ಖಾತೆ ಹೊಂದಿರುವ ಬ್ಯಾಂಕಿನಲ್ಲಿ ಅಥವಾ ಬೇರೆ ಯಾವುದೇ ಬ್ಯಾಂಕ್‌ನಲ್ಲಿ ತೆರೆಯಬಹುದು. ಈ ಠೇವಣಿಗಳ ಮೇಲಿನ ಬಡ್ಡಿಯನ್ನು ನಮ್ಮ ಒಟ್ಟು ಆದಾಯದಲ್ಲಿ ಸೇರಿಸಬೇಕು. ಬಳಿಕ ನಮಗೆ ಅನ್ವಯವಾಗುವ ತೆರಿಗೆಯ ಮಿತಿಗಳ ಆಧಾರದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಹಣಕಾಸು ವರ್ಷದಲ್ಲಿ ಬ್ಯಾಂಕ್‌ನಲ್ಲಿ ಠೇವಣಿಯಿಂದ ಪಡೆದ ಬಡ್ಡಿಯು 40,000 ರೂ.ಗಳನ್ನು ಮೀರಿದಾಗ ಟಿಡಿಎಸ್(TDS) ವಿಧಿಸಲಾಗುತ್ತದೆ. ಈ TDS ಅನ್ನು ಫಾರ್ಮ್ 15G ಮತ್ತು ಫಾರ್ಮ್ 15H ಸಲ್ಲಿಸುವ ಮೂಲಕ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ FD ಗಳ ಮೇಲಿನ ಬಡ್ಡಿ ಆದಾಯವು ರೂ 50,000 ವರೆಗೆ ತೆರಿಗೆ ಮುಕ್ತವಾಗಿದೆ.
ಸ್ಥಿರ ಠೇವಣಿಯ ಲಾಭಗಳು : ಈ ಸ್ಥಿರ ಠೇವಣಿಗಳನ್ನು ಸ್ವೀಕರಿಸುವ ಮೊದಲು ನಾವು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಸ್ಥಿರ ಠೇವಣಿಗಳು ಐದು ವರ್ಷದ ಅವಧಿಗಳನ್ನು ಹೊಂದಿರುತ್ತದೆ. ಈ ನಿರ್ದಿಷ್ಟ ಅವಧಿಯಲ್ಲಿ ( ಲಾಕ್-ಇನ್) ನಾವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಲ್ಲದೆ, ಈ ಸ್ಥಿರ ಠೇವಣಿಗಳ ಮೂಲಕ ಯಾವುದೇ ಸಾಲವನ್ನು ಪಡೆಯಲಾಗುವುದಿಲ್ಲ. ಈ ಠೇವಣಿಗಳ ಮೇಲಿನ ಬಡ್ಡಿ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಿರುತ್ತದೆ.
ಇದನ್ನೂ ಓದಿ : ಹೊಸ ವಾಹನ ವಿಮೆಯಲ್ಲಿ ಪ್ರೀಮಿಯಂನ ಹೊರೆಯನ್ನು 'ನೋ ಕ್ಲೈಮ್ ಬೋನಸ್' ಹೇಗೆ ಕಡಿಮೆ ಮಾಡುತ್ತದೆ ಗೊತ್ತಾ?