ನವದೆಹಲಿ: 2022 ನೇ ವರ್ಷಕ್ಕಾಗಿ ಫಾರ್ಚೂನ್ ಮ್ಯಾಗಜೀನ್ ಪ್ರಕಟಿಸಿದ ಇತ್ತೀಚಿನ ಜಾಗತಿಕ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ ಖಾಸಗಿ ವಲಯದ ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉನ್ನತ ಶ್ರೇಣಿಯನ್ನು ಕಾಯ್ದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಹಿಂದಿನ ವರ್ಷದ 155ನೇ ಶ್ರೇಯಾಂಕದಿಂದ 104 ನೇ ತನ್ನ ಶ್ರೇಯಾಂಕಕ್ಕೆ ಜಿಗಿದಿದೆ. ಇದು ಶ್ರೇಯಾಂಕ ಪಟ್ಟಿಯಲ್ಲಿ 51 ಸ್ಥಾನಗಳ ಏರಿಕೆಯಾಗಿದೆ.
ಐದು ಸಾರ್ವಜನಿಕ ವಲಯ ಮತ್ತು ನಾಲ್ಕು ಖಾಸಗಿ ವಲಯದ ಕಂಪನಿಗಳು ಸೇರಿ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದ ಒಂಬತ್ತು ಕಂಪನಿಗಳಿವೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾತ್ರ ಇದೇ ಮೊದಲ ಬಾರಿಗೆ ಪಟ್ಟಿಗೆ ಸೇರ್ಪಡೆಯಾಗಿದೆ. ಈ ವರ್ಷದ ಆರಂಭದಲ್ಲಿ ಐಪಿಓ ಜಾರಿ ಮಾಡಿದ್ದ ಸಾರ್ವಜನಿಕ ವಲಯದ ಕಂಪನಿಯಾಗಿರುವ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಗೂ ಮೇಲಿನ ಶ್ರೇಯಾಂಕದಲ್ಲಿ ಅಂದರೆ 98ನೇ ಸ್ಥಾನದಲ್ಲಿದೆ.
ಫಾರ್ಚೂನ್ 500 ಪಟ್ಟಿಯಲ್ಲಿ ಆರ್ಐಎಲ್ ಸ್ಥಾನ ಪಡೆದಿರುವುದು ಇದು 19 ನೇ ವರ್ಷವಾಗಿದೆ. ದೇಶದ ಯಾವುದೇ ಖಾಸಗಿ ವಲಯದ ಕಂಪನಿ ಇಷ್ಟೊಂದು ವರ್ಷಗಳ ಕಾಲ ಫಾರ್ಚೂನ್ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಫಾರ್ಚೂನ್ ಗ್ಲೋಬಲ್ 500 ಪಟ್ಟಿಯು ಮಾರ್ಚ್ 31 ರಂದು ಅಥವಾ ಅದಕ್ಕಿಂತ ಮೊದಲು ಕೊನೆಗೊಂಡ ಆಯಾ ಹಣಕಾಸಿನ ವರ್ಷಗಳ ಒಟ್ಟು ಆದಾಯದ ಪ್ರಕಾರ ಕಂಪನಿಗಳನ್ನು ಶ್ರೇಣೀಕರಿಸುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ 2022ರ ಹಣಕಾಸು ವರ್ಷದಲ್ಲಿ 7.92 ಲಕ್ಷ ಕೋಟಿ ರೂಪಾಯಿಗಳ ಏಕೀಕೃತ ಆದಾಯ ಗಳಿಸಿದೆ. ಇದು ಕಳೆದ ಬಾರಿಗಿಂತ ಶೇ 47 ರಷ್ಟು ಹೆಚ್ಚಾಗಿದೆ.
ಇದನ್ನು ಓದಿ:ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್!