ನವದೆಹಲಿ: 2023 ನೇ ಸಾಲಿನ ವಿಶ್ವದ ಶ್ರೀಮಂತ ವ್ಯಕ್ತಿಗಳನ್ನು ಫೋರ್ಬ್ಸ್ ಪಟ್ಟಿ ಮಾಡಿದೆ. ಇದು ಫೋರ್ಬ್ಸ್ನ 37 ನೇ ವಾರ್ಷಿಕ ಪಟ್ಟಿಯಾಗಿದ್ದು, ಅದರಲ್ಲಿ ಭಾರತದ ಉದ್ಯಮಿ, ರಿಲಯನ್ಸ್ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಟಾಪ್ 9ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ವಿಶ್ವದಲ್ಲಿಯೇ 2ನೇ ಧನಿಕರಾಗಿದ್ದ ಅದಾನಿ ಗ್ರೂಪ್ನ ಗೌತಮ್ ಅದಾನಿ ಅವರು 24 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆಯ ಆರೋಪಿತ ವರದಿಯ ಬಳಿಕ ಅದಾನಿ ಗ್ರೂಪ್ ಮೌಲ್ಯ ತೀವ್ರ ಕುಸಿತ ಕಂಡಿರುವುದೇ ಇದಕ್ಕೆ ಕಾರಣ.
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ವಿಶ್ವದ ಟಾಪ್ 10 ರೊಳಗೆ ಸ್ಥಾನ ಪಡೆಯುವುದರ ಜೊತೆಗೆ ಏಷ್ಯಾದಲ್ಲಿಯೇ ನಂಬರ್ 1 ಶ್ರೀಮಂತ ವ್ಯಕ್ತಿ ಪಟ್ಟವನ್ನು ಉಳಿಸಿಕೊಂಡರು. ಅಂಬಾನಿ ಅಂದಾಜು ನಿವ್ವಳ ಮೌಲ್ಯ 83.4 ಬಿಲಿಯನ್ ಡಾಲರ್ ಆಗಿದೆ.
ಅಂಬಾನಿ ಕಳೆದ ವರ್ಷ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದರು. ಅಜಮಾಸು 90.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದರು. ಈ ವರ್ಷ ಮೌಲ್ಯದಲ್ಲಿ ಇಳಿಕೆ ಕಂಡರೂ ಟಾಪ್ 9 ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಶ್ರೀಮಂತರ ಆದಾಯವೂ ಇಳಿಕೆಯಾಗಿದ್ದು, ಇದಕ್ಕೆ ಕಾರಣವಾಗಿದೆ. ಇದಲ್ಲದೇ, ಮೈಕ್ರೋಸಾಫ್ಟ್ನ ಸ್ಟೀವ್ ಬಾಲ್ಮರ್, ಲ್ಯಾರಿ ಪೇಜ್ ಮತ್ತು ಗೂಗಲ್ನ ಸೆರ್ಗೆ ಬ್ರಿನ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, ಡೆಲ್ ಟೆಕ್ನಾಲಜೀಸ್ನ ಮೈಕೆಲ್ ಡೆಲ್ ಅವರಿಗಿಂತ ಅಂಬಾನಿ ಉನ್ನತ ಸ್ಥಾನದಲ್ಲಿದ್ದಾರೆ.
ಅದಾನಿ ತೀವ್ರ ಇಳಿಕೆ: ಇನ್ನೊಂದೆಡೆ, ಕಳೆದ ವರ್ಷ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಪಟ್ಟ ಧರಿಸಿದ್ದ ಅದಾನಿ ಗ್ರೂಪ್ನ ಗೌತಮ್ ಅದಾನಿ ಈ ವರ್ಷ 24 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಿಂಡನ್ಬರ್ಗ್ ವರದಿಯ ಬಳಿಕ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತದ ನಂತರ ಜಾಗತಿಕ ಧನಿಕರ ಪಟ್ಟಿಯಲ್ಲಿ ಇಳಿಕೆ ದಾಖಲಿಸಿದ್ದಾರೆ. ಅವರ ನಿವ್ವಳ ಮೌಲ್ಯವು 47.2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯರ ಪೈಕಿ 2 ನೇ ಸ್ಥಾನ ಪಡೆದಿದ್ದಾರೆ.ಇನ್ನು, ಹೆಚ್ಸಿಎಲ್ ಟೆಕ್ನಾಲಜೀಸ್ನ ಶಿವ ನಾಡಾರ್ ಅವರು 25.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದುವ ಮೂಲಕ ವಿಶ್ವದ 55 ನೇ, ಭಾರತದ 3ನೇ ಧನಿಕ ಸ್ಥಾನದಲ್ಲಿದ್ದಾರೆ.
ಸಿರಿವಂತರ ಸಂಖ್ಯೆ ಕುಸಿತ: ಫೋರ್ಬ್ಸ್ನ ಜಾಗತಿಕ ಬಿಲಿಯನೇರ್ಗಳ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಕುಸಿತ ಕಂಡಿದೆ. ಕಳೆದ ಸಲ ಇದ್ದ 2,668 ಜನರನ್ನು ಸಿರಿವಂತರು ಎಂದು ಪಟ್ಟಿ ಮಾಡಲಾಗಿತ್ತು. ಈ ಬಾರಿ ಅದು 2,640 ಕ್ಕೆ ಇಳಿಕೆಯಾಗಿದೆ. ಭಾರತದ ಸಿರಿವಂತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2022 ರಲ್ಲಿ 166 ಜನರಿದ್ದ ಧನಿಕರು ಈ ಬಾರಿ 169 ರಷ್ಟಿದ್ದಾರೆ ಎಂದು ಫೋರ್ಬ್ಸ್ ಪಟ್ಟಿ ಮಾಡಿದೆ. ಷೇರುಗಳು ಸತತ ಕುಸಿತ, ಯುನಿಕಾರ್ನ್ಗಳ ಹಿನ್ನಡೆ, ಏರುತ್ತಿರುವ ಬಡ್ಡಿದರಗಳ ಕಾರಣದಿಂದ ವಿಶ್ವದ ಶ್ರೀಮಂತರು ನಷ್ಟಕ್ಕೀಡಾಗಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
ವಿಶ್ವದ ಒಟ್ಟು ಶ್ರೀಮಂತರ ಮೌಲ್ಯ 12.2 ಟ್ರಿಲಿಯನ್ ಡಾಲರ್ ಆಗಿದೆ. 2022 ರಲ್ಲಿದ್ದ 12.7 ಟ್ರಿಲಿಯನ್ ಡಾಲರ್ನಲ್ಲಿ 500 ಟ್ರಿಲಿಯನ್ ಡಾಲರ್ ಈ ವರ್ಷ ಕುಸಿತ ಕಂಡಿದೆ. ಪಟ್ಟಿಯಲ್ಲಿ ಈ ವರ್ಷವೂ ಅಮೆರಿಕನ್ನರೇ ಸಿಂಹಪಾಲು ಹೊಂದಿದ್ದಾರೆ. 735 ಜನರು ಇದರಲ್ಲಿದ್ದು, 4.5 ಟ್ರಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಚೀನಾದ 562 ಜನರಲ್ಲಿ 2 ಟ್ರಿಲಿಯನ್ ಡಾಲರ್ ಆಸ್ತಿ ಇದೆ. ಭಾರತದ 169 ಸಿರಿವಂತರಲ್ಲಿ 675 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಬರ್ನಾಲ್ಡ್ ಅರ್ನಾಲ್ಟ್ ವಿಶ್ವ ನಂ.1: ಎಲ್ವಿಎಚ್ಎಂನ ಕಂಪನಿ ಮುಖ್ಯಸ್ಥ ಬರ್ನಾಲ್ಟ್ ಅರ್ನಾಲ್ಟ್ ವಿಶ್ವದ ನಂ.1 ಧನಿಕ ಎಂಬ ಪಟ್ಟವನ್ನು ಇದೇ ಮೊದಲ ಸಲ ಪಡೆದಿದ್ದಾರೆ. ಇವರು 211 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಟ್ವಿಟರ್ ಸಿಇಒ ಎಲಾನ್ ಮಸ್ಕ್ 50 ಪರ್ಸೆಂಟ್ ಆಸ್ತಿಯಲ್ಲಿ ಕುಸಿತ ಕಾಣುವ ಮೂಲಕ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರಲ್ಲಿ 44 ಬಿಲಿಯನ್ ಡಾಲರ್ ಆಸ್ತಿ ಇದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಮೂರನೇ ಸ್ಥಾನದಲ್ಲಿದ್ದಾರೆ.
ಓದಿ: 1 ಡಾಲರ್ಗೆ 288 ರೂ.: ಪಾತಾಳಕ್ಕೆ ಕುಸಿದ ಪಾಕಿಸ್ತಾನ ರೂಪಾಯಿ ಮೌಲ್ಯ