ಹೈದರಾಬಾದ್: ಆರೋಗ್ಯವೇ ಭಾಗ್ಯ. ನೀವು ಉತ್ತಮ ಆರೋಗ್ಯವನ್ನು ಹೊಂದಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವೂ ಇದ್ದಂತೆಯೇ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣದ ಅವಶ್ಯಕತೆ ಇದೆ. ಆರ್ಥಿಕವಾಗಿ ನಾವು ಉತ್ತಮವಾಗಿದ್ದರೆ ಮಾತ್ರ ನಮ್ಮ ಗುರಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಾವು ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರ ಬಳಿ ಆಗಾಗ ತಪಾಸಣೆಗೆ ಹೋಗುವಂತೆ ಆರ್ಥಿಕ ಒತ್ತಡವನ್ನು ತಪ್ಪಿಸಲು ಕಾಲಕಾಲಕ್ಕೆ ನಮ್ಮ ಯೋಜನೆಗಳನ್ನು ಪರಿಶೀಲನೆ ನಡೆಸುತ್ತಿರಬೇಕು.
ಸಮೀಕ್ಷೆಯೊಂದರ ಪ್ರಕಾರ, ಆರ್ಥಿಕ ಅಸ್ಥಿರತೆ ಇದ್ದರೆ, ಅದು ಒತ್ತಡಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೋವಿಡ್ ನಂತರ ಜನರು ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ, ಒತ್ತಡವನ್ನು ನಿವಾರಿಸಲು ನಿಖರವಾದ ಹಣಕಾಸು ಯೋಜನೆ ಅಗತ್ಯವಿದೆ. ಮಕ್ಕಳ ಶಿಕ್ಷಣ, ಮದುವೆ, ನಿವೃತ್ತಿ ಯೋಜನೆಗಳು ಮತ್ತು ಆಕಸ್ಮಿಕವಾಗಿ ಏನಾದರೂ ಅಹಿತಕರ ಘಟನೆ ನಡೆದರೆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಹಣಕಾಸು ಯೋಜನೆ ಅಗತ್ಯವಿದೆ. ನಾವು ಪರಿಪೂರ್ಣ ಆರ್ಥಿಕ ಯೋಜನೆಯನ್ನು ಹೊಂದಿದ್ದರೆ, ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಹಣಕಾಸಿನ ಗುರಿಗಳನ್ನು ಸಾಧಿಸಲು ನಾವು ಕೆಲವು ಸಲಹೆಗಳನ್ನು ಅನುಸರಿಸಬೇಕು.
ಉಳಿತಾಯ ಮತ್ತು ವೆಚ್ಚಗಳು: ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದು ಮುಖ್ಯವಲ್ಲ. ನೀವು ಸಂಪಾದಿಸಿರುವುದರಲ್ಲಿ ಎಷ್ಟು ಉಳಿಸುತ್ತೀರಿ ಎಂಬುದು ಮುಖ್ಯ. ಭವಿಷ್ಯದಲ್ಲಿ ಆರ್ಥಿಕ ಒತ್ತಡವನ್ನು ತಪ್ಪಿಸಲು, ನಿಮ್ಮ ಗಳಿಕೆಯ ಶೇಕಡಾ 30ರಷ್ಟನ್ನಾದರೂ ಉಳಿಸುವುದು ಉತ್ತಮ. ನೀವು ಇನ್ನೂ ಹೆಚ್ಚು ಉಳಿಸಲು ಸಾಧ್ಯವಾದರೆ ಅದು ನಿಜಕ್ಕೂ ಒಳ್ಳೆಯದು. ಖರ್ಚುಗಳು ಆಹ್ವಾನಿಸದ ಅತಿಥಿಗಳಂತೆ. ಆದ್ದರಿಂದ, ತುರ್ತು ಉದ್ದೇಶಗಳಿಗಾಗಿ ಸ್ವಲ್ಪ ಹಣವನ್ನು ಉಳಿಸುವುದು ಉತ್ತಮ. ವರ್ಷದ ಒಟ್ಟು ಗಳಿಕೆಯ ಶೇಕಡಾ 15ರಷ್ಟನ್ನು ಉಳಿತಾಯವಾಗಿ ಇಟ್ಟುಕೊಳ್ಳುವುದು ಅಥವಾ ಕನಿಷ್ಠ ಮೂರು ತಿಂಗಳ ಕಾಲ ಖರ್ಚುಗಳನ್ನು ಭರಿಸಲು ಸ್ವಲ್ಪ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಈ ಉಳಿತಾಯಗಳು ಸ್ಥಿರ ಠೇವಣಿಯ ರೂಪದಲ್ಲಿರಬೇಕು. ಸಾಲಗಳು ನಿಮ್ಮ ಸ್ವತ್ತುಗಳ ಮೌಲ್ಯದ ಶೇಕಡಾ 50ರಷ್ಟನ್ನು ಮೀರಬಾರದು.
ಇಎಂಐ ಮತ್ತು ವಿಮೆ: ನೀವು ಪ್ರತಿ ತಿಂಗಳು ಕಟ್ಟುವ ಇಎಂಐಗಳು ನಿಮ್ಮ ಮಾಸಿಕ ಆದಾಯದ ಶೇಕಡಾ 40ಕ್ಕಿಂತ ಕಡಿಮೆ ಇರಬೇಕು. ಇಲ್ಲದಿದ್ದರೆ ನೀವು ಆರ್ಥಿಕ ಒತ್ತಡ ಎದುರಿಸಬೇಕಾಗುತ್ತದೆ. ಜೀವ ವಿಮೆ ವಾರ್ಷಿಕ ಆದಾಯದ ಶೇಕಡಾ 10ರಿಂದ 15 ಪಟ್ಟು ಇರಬೇಕು. ಇಡೀ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಲು ಮರೆಯಬೇಡಿ.
ಮಕ್ಕಳ ಶಿಕ್ಷಣ: ಹೆಚ್ಚುತ್ತಿರುವ ಶಿಕ್ಷಣದ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಗಳನ್ನು ಮಾಡಬೇಕು. ಈಗ ಇರುವ ಹೂಡಿಕೆಗಳೊಂದಿಗೆ ಮುಂದುವರೆಯುವುದರ ಜೊತೆಗೆ ಮತ್ತಷ್ಟು ಹೂಡಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಗಮನ ಹರಿಸಬೇಕು. ಒಮ್ಮೊಮ್ಮೆ ಕೇವಲ ಹಣಕಾಸಿನ ಯೋಜನೆಯಿಂದ ಆರ್ಥಿಕ ಒತ್ತಡವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ನಾವು ಕೆಲವೊಂದು ಅನಿರೀಕ್ಷಿತ ಆರ್ಥಿಕ ಒತ್ತಡಗಳನ್ನು ತಪ್ಪಿಸಲು ನೀಲನಕ್ಷೆ ಅಗತ್ಯವಿದೆ. ಇದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಟ್ರೇಡ್ಸ್ಮಾರ್ಟ್ ಸಿಇಒ ವಿಕಾಸ್ ಸಿಂಘಾನಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಗೊತ್ತಾ?