ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಜನ್ ಧನ್’‘ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ ಎಂದು ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. 50 ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆ ತರಲಾಗಿದೆ. ಈ ಖಾತೆಗಳಲ್ಲಿ ಸುಮಾರು 2 ಲಕ್ಷ ಕೋಟಿ ಸಂಚಿತ ಠೇವಣಿ ಇಡಲಾಗಿದೆ ಎಂಬ ವಿಚಾರವನ್ನು ನಿರ್ಮಲಾ ಸೀತಾರಾಮನ್ ಬಹಿರಂಗ ಪಡಿಸಿದ್ದಾರೆ.
ಪಿಎಂಜೆಡಿವೈ 9ನೇ ವಾರ್ಷಿಕೋತ್ಸವ: ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ) ಒಂಬತ್ತನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಯೋಜನೆಯ ಅನ್ವಯ ಶೇ.55.5 ರಷ್ಟು ಬ್ಯಾಂಕ್ ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ. ಗ್ರಾಮೀಣ, ಅರೆ-ನಗರ ಪ್ರದೇಶಗಳಲ್ಲಿ ಶೇ.67ದಷ್ಟು ಖಾತೆಗಳನ್ನು ತೆರೆಯಲಾಗಿದೆ. ಯೋಜನೆಯಡಿ ಬ್ಯಾಂಕ್ ಖಾತೆಗಳ ಸಂಖ್ಯೆ ಮಾರ್ಚ್ 2015ರಲ್ಲಿ 14.72 ಕೋಟಿ ಇದ್ದದ್ದು, ಪ್ರಸ್ತುತ 3.4 ಪಟ್ಟು ಹೆಚ್ಚಾಗಿದೆ. ಆಗಸ್ಟ್ 16, 2023ಕ್ಕೆ 50.09 ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
34 ಕೋಟಿ ರೂ. ಕಾರ್ಡ್‌ಗಳನ್ನು ಶುಲ್ಕವಿಲ್ಲದೇ ವಿರತಣೆ: ಒಟ್ಟು ಠೇವಣಿಗಳೂ ಸಹ ಮಾರ್ಚ್ 2015ರ ವೇಳೆಗೆ 15,670 ಕೋಟಿ ರೂ. ಇತ್ತು. 2023ರ ಆಗಸ್ಟ್‌ಗೆ 2.03 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಜನ್ ಧನ್ ಖಾತೆಗಳಲ್ಲಿನ ಸರಾಸರಿ ಠೇವಣಿಗಳು ಮಾರ್ಚ್ 2015 ರಂತೆ 1,065 ರೂಪಾಯಿ ಇತ್ತು. ಆಗಸ್ಟ್ 2023 ರಲ್ಲಿ 4,063 ರೂಪಾಯಿಗೆ ತಲುಪಿದೆ. 3.8 ಪಟ್ಟು ಹೆಚ್ಚಾಗಿದೆ. ಆಗಸ್ಟ್ 2023ರಲ್ಲಿ ಈ ಖಾತೆಗಳಿಗೆ ಸುಮಾರು 34 ಕೋಟಿ ರೂಪಾಯಿ ಕಾರ್ಡ್‌ಗಳನ್ನು ಶುಲ್ಕ ಇಲ್ಲದೇ ನೀಡಲಾಗಿದೆ. ಇದು 2 ಲಕ್ಷ ರೂ. ಅಪಘಾತ ವಿಮಾ ರಕ್ಷಣೆಯನ್ನು ಸಹ ಒದಗಿಸುತ್ತದೆ.
ಯೋಜನೆಯಡಿ ಶೂನ್ಯ ಠೇವಣಿ ಖಾತೆಗಳು, ಮಾರ್ಚ್ 2015ರಲ್ಲಿ 58 ಪ್ರತಿಶತದಿಂದ ಆಗಸ್ಟ್ 2023ರ ಹೊತ್ತಿಗೆ ಒಟ್ಟು ಖಾತೆಗಳ 8 ಪ್ರತಿಶತಕ್ಕೆ ಕಡಿಮೆಯಾಗಿದೆ. 9 ವರ್ಷಗಳ ಪಿಎಂಜೆಡಿವೈ ನೇತೃತ್ವದ ಮಧ್ಯಸ್ಥಿಕೆ ಮತ್ತು ಡಿಜಿಟಲ್ ರೂಪಾಂತರವು ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಮಧ್ಯಸ್ಥಗಾರರು, ಬ್ಯಾಂಕ್‌ಗಳು, ವಿಮಾ ಕಂಪನಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸಹಯೋಗದ ಪ್ರಯತ್ನಗಳೊಂದಿಗೆ, ಪಿಎಂಜೆಡಿವೈ ಒಂದು ಪ್ರಮುಖ ಉಪಕ್ರಮವಾಗಿ ಮಾರ್ಪಟ್ಟಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಮಾಹಿತಿ: ಜನ್ ಧನ್ ಆಧಾರ್ ಮೊಬೈಲ್ (ಜೆಎಎಂ) ಸೌಲಭ್ಯವು ಸಾಮಾನ್ಯ ಜನರ ಖಾತೆಗಳಿಗೆ ಸರ್ಕಾರಿ ಸವಲತ್ತುಗಳನ್ನು ಮನಬಂದಂತೆ ಯಶಸ್ವಿಯಾಗಿ ವರ್ಗಾಯಿಸಲು ಅನುವು ಮಾಡಿಕೊಟ್ಟಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಹೇಳಿದ್ದಾರೆ. "ಪಿಎಂಜೆಡಿವೈ ಖಾತೆಗಳು ನೇರ ಲಾಭ ವರ್ಗಾವಣೆಯು (ಡಿಬಿಟಿ) ಜನರ ಕೇಂದ್ರಿತ ಉಪಕ್ರಮಗಳ ಆಧಾರವಾಗಿದೆ. ಸಮಾಜದ ಎಲ್ಲ ವರ್ಗಗಳ, ವಿಶೇಷವಾಗಿ ಹಿಂದುಳಿದವರ ಅಂತರ್ಗತ ಬೆಳವಣಿಗೆಗೆ ಕೊಡುಗೆ ನೀಡಿವೆ" ಎಂದು ಅವರು ಹೇಳಿದರು.
ಸಾರ್ವತ್ರಿಕ ಬ್ಯಾಂಕಿಂಗ್ ಸೇವೆ: ಪಿಎಂಜೆಡಿವೈ ಅನ್ನು ಆಗಸ್ಟ್ 28, 2014 ರಂದು ಪ್ರಾರಂಭಿಸಲಾಯಿತು. ಪ್ರತಿ ಕುಟುಂಬಕ್ಕೂ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಸಾರ್ವತ್ರಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ಬ್ಯಾಂಕಿಂಗ್ ಸೇವೆಯಲ್ಲಿ ಅಸುರಕ್ಷಿತರನ್ನು ಸುರಕ್ಷಿತಗೊಳಿಸುವುದು ಮತ್ತು ಹಣವಿಲ್ಲದವರಿಗೆ ಧನಸಹಾಯ ಮಾಡುವ ಮಾರ್ಗಸೂಚಿಗಳ ಆಧಾರದ ಮೇಲೆ ಈ ಯೋಜನೆ ಆರಂಭಿಸಲಾಯಿತು. (ಪಿಟಿಐ)
ಇದನ್ನೂ ಓದಿ: 1200 ಡಾಲರ್ಗಿಂತ ಕಡಿಮೆ ದರದಲ್ಲಿ ಬಾಸ್ಮತಿ ರಫ್ತಿಗೆ ನಿರ್ಬಂಧ; ಅಕ್ರಮ ತಡೆಗೆ ಕೇಂದ್ರದ ನಿಯಮ