ನವದೆಹಲಿ: ಕಬ್ಬಿನ ಉಪ ಉತ್ಪನ್ನವಾದ ಕಾಕಂಬಿಯ (ಮೊಲಾಸಿಸ್) ಮೇಲೆ ಕೇಂದ್ರ ಸರಕಾರವು ಶೇ 50ರಷ್ಟು ರಫ್ತು ಸುಂಕ ವಿಧಿಸಿದೆ. ಈ ನಿಯಮ ಜನವರಿ 18ರಿಂದ ಜಾರಿಗೆ ಬರಲಿದೆ. ಆಲ್ಕೋಹಾಲ್ ಉತ್ಪಾದಿಸಲು ಕಾಕಂಬಿಯನ್ನು ಒಂದು ಮೂಲ ವಸ್ತುವಾಗಿ ಬಳಸಲಾಗುತ್ತದೆ.
ವಾಹನಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪೆಟ್ರೋಲ್ನೊಂದಿಗೆ ಎಥೆನಾಲ್ (ಆಲ್ಕೋಹಾಲ್) ಬೆರೆಸಲಾಗುತ್ತದೆ. ಈ ಎಥೆನಾಲ್ ಉತ್ಪಾದನೆಗೆ ಕಾಕಂಬಿಯೇ ಪ್ರಮುಖ ವಸ್ತುವಾಗಿದೆ. ಹೀಗಾಗಿ ಎಥೆನಾಲ್ ಉತ್ಪಾದನೆಗೆ ದೇಶದಲ್ಲಿ ಸಾಕಷ್ಟು ಪ್ರಮಾಣದ ಕಾಕಂಬಿ ಲಭ್ಯವಿರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಈಗ ಅದರ ಮೇಲೆ ಶೇ 50ರಷ್ಟು ರಫ್ತು ಸುಂಕ ವಿಧಿಸಿದೆ. ಇದಲ್ಲದೆ ಔಷಧ ತಯಾರಿಕೆಗಾಗಿಯೂ ಕಾಕಂಬಿ ಪ್ರಮುಖವಾಗಿ ಬೇಕಾಗುತ್ತದೆ.
ಅನಿಶ್ಚಿತ ಮಾನ್ಸೂನ್ ಕಾರಣದಿಂದಾಗಿ ಪ್ರಸಕ್ತ ಋತುವಿನಲ್ಲಿ ದೇಶೀಯ ಕಬ್ಬಿನ ಉತ್ಪಾದನೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಬಹುದು ಎಂಬ ಆತಂಕ ಮೂಡಿದೆ. ಹೀಗಾಗಿ ದೇಶದಲ್ಲಿ ಕಾಕಂಬಿಯ ಕೊರತೆಯನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಜೈವಿಕ ಇಂಧನ ನೀತಿಯನ್ನು ಉತ್ತೇಜಿಸುವ ಭಾಗವಾಗಿ 2025-26ರ ವೇಳೆಗೆ E20 ಅಂದರೆ ಶೇಕಡಾ 12 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಮತ್ತೊಂದು ಅಧಿಸೂಚನೆಯಲ್ಲಿ, ಹಣಕಾಸು ಸಚಿವಾಲಯವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳಾದ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಆಮದಿನ ಮೇಲೆ ಅಸ್ತಿತ್ವದಲ್ಲಿರುವ ರಿಯಾಯಿತಿ ಸುಂಕ ದರಗಳನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷ ವಿಸ್ತರಿಸಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಕಳೆದ ವರ್ಷ ಜೂನ್ನಲ್ಲಿ 17.5% ರಿಂದ 12.5% ಕ್ಕೆ ಇಳಿಸಲಾಗಿತ್ತು.
ನವೆಂಬರ್ 30 ರ ಹೊತ್ತಿಗೆ, ಭಾರತದ ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 13.8 ಬಿಲಿಯನ್ ಲೀಟರ್ ಆಗಿತ್ತು. ಇದರಲ್ಲಿ ಸುಮಾರು 8.75 ಬಿಲಿಯನ್ ಲೀಟರ್ ಕಾಕಂಬಿ ಆಧಾರಿತ ಮತ್ತು ಸುಮಾರು 5.05 ಬಿಲಿಯನ್ ಲೀಟರ್ ಧಾನ್ಯ ಆಧಾರಿತವಾಗಿದೆ.
ಭಾರತವು ವಿಶ್ವದ ಅತಿದೊಡ್ಡ ಕಾಕಂಬಿ ರಫ್ತುದಾರ ದೇಶವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 25 ಪ್ರತಿಶತದಷ್ಟು ಪಾಲು ಹೊಂದಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಿಂದ ಪ್ರಮುಖವಾಗಿ ಕಾಕಂಬಿಯನ್ನು ರಫ್ತು ಮಾಡಲಾಗುತ್ತದೆ. ಕಾಕಂಬಿಯನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ನೆದರ್ಲೆಂಡ್ಸ್, ಫಿಲಿಪೈನ್ಸ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮತ್ತು ಇಟಲಿ ಸೇರಿವೆ.
ಇದನ್ನೂ ಓದಿ : ಚಳಿಗೆ ಭರಪೂರ ಫಸಲು, ಇಳಿದ ಬೆಲೆ; ಕೈಗೆಟುಕುವ ದರದಲ್ಲಿ ಏಲಕ್ಕಿ ಬಾಳೆ