ನವದೆಹಲಿ : ಕೋವಿಡ್ -19 ಇನ್ನು ಮುಂದೆ ಜಾಗತಿಕ ತುರ್ತು ಪರಿಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿರುವುದರಿಂದ, ಇನ್ನು ಮುಂದೆ ವೈದ್ಯಕೀಯ ಸಾಧನಗಳನ್ನು ತಯಾರಿಸುವ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಮಂಗಳವಾರ ವರದಿಯೊಂದು ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಳೆದ ಮೂರು ವರ್ಷಗಳಲ್ಲಿ ವೈದ್ಯಕೀಯ ಸಾಧನ ತಯಾರಿಸುವ ಅನೇಕ ಕಂಪನಿಗಳು ರೋಗ ಪರೀಕ್ಷೆಗಳು ಮತ್ತು ಔಷಧಗಳ ಮಾರಾಟದ ಮೂಲಕ ಶತಕೋಟಿಗಳಷ್ಟು ಆದಾಯ ಗಳಿಸಿವೆ.
ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿ ಗ್ಲೋಬಲ್‌ಡೇಟಾದ ವರದಿಯ ಪ್ರಕಾರ ಮುಂಬರುವ ವರ್ಷಗಳಲ್ಲಿ, ಹೊಸ ಕೋವಿಡ್-19 ಪರೀಕ್ಷೆಗಳು ಮಾರುಕಟ್ಟೆಗೆ ಬರಲಿವೆ. ಅಲ್ಲದೆ ಅಸ್ತಿತ್ವದಲ್ಲಿರುವ ಪರೀಕ್ಷೆಗಳನ್ನು ಸುಧಾರಿಸಲಾಗುವುದು. ಇದು ಪರೀಕ್ಷೆಗಳ ನಿರ್ದಿಷ್ಟತೆ ಮತ್ತು ಸೂಕ್ಷ್ಮತೆ ಸುಧಾರಿಸುವುದು ಮತ್ತು ಅಸ್ತಿತ್ವದಲ್ಲಿರುವ ತಂತ್ರಜ್ಞಾನದೊಂದಿಗೆ ಮಲ್ಟಿಪ್ಯಾರಾಮೀಟರ್ ಪರೀಕ್ಷೆಗಳನ್ನು ರಚಿಸಲಿವೆ ಎಂದರ್ಥ.
ಕಳೆದ ಎರಡು ತ್ರೈಮಾಸಿಕಗಳಲ್ಲಿ ಕೋವಿಡ್-19 ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ಕಂಪನಿಗಳು ಕಡಿಮೆಗೊಳಿಸಿವೆ ಎಂದು ವರದಿಯಾಗಿದೆ. ಇನ್ನು ಮುಂದೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸ್ಥಳೀಯ ವೈರಸ್ ಎಂದು ಘೋಷಿಸಲಾಗಿರುವುದು ಮತ್ತು ಕೋವಿಡ್ -19 ಪರೀಕ್ಷೆಗಳ ತುರ್ತು ಬಳಕೆಯ ಅಧಿಕಾರವನ್ನು ತೆಗೆದುಹಾಕುವುದರೊಂದಿಗೆ, ಇನ್ ವಿಟ್ರೋ ಡಯಾಗ್ನೋಸ್ಟಿಕ್ಸ್ (IVD) ಕಂಪನಿಗಳು ತಮ್ಮ ನಷ್ಟ ಕಡಿಮೆ ಮಾಡಲು ಪರದಾಡುತ್ತಿವೆ ಎಂದು ಗ್ಲೋಬಲ್‌ಡೇಟಾದ ವೈದ್ಯಕೀಯ ವಿಶ್ಲೇಷಕ ಸೆಲೆನಾ ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್ (IVD) ಎನ್ನುವುದು ಮಾನವ ದೇಹದಿಂದ ತೆಗೆದ ರಕ್ತ ಅಥವಾ ಅಂಗಾಂಶದಂತಹ ಮಾದರಿಗಳ ಮೇಲೆ ಮಾಡಲಾದ ಪರೀಕ್ಷೆಗಳು ಎಂದರ್ಥ.
ಪ್ರಸ್ತುತ 132 ಸಕ್ರಿಯ ಕ್ಲಿನಿಕಲ್ ಪ್ರಯೋಗಗಳಿವೆ. ಜನವರಿ 2023 ರಲ್ಲಿ ಕೋವಿಡ್-19 ಪರೀಕ್ಷೆಗಳಲ್ಲಿ ತೊಡಗಿರುವ ಅನೇಕ ಕಂಪನಿಗಲಾದ ಡಾನಾಹರ್, ಅಬಾಟ್, ಲ್ಯಾಬ್‌ಕಾರ್ಪ್, ಮತ್ತು BD ಎಂದೂ ಕರೆಯಲ್ಪಡುವ ಬೆಕ್ಟನ್, ಡಿಕಿನ್ಸನ್ ಮತ್ತು ಕಂಪನಿ ಕೋವಿಡ್ -19 ಪರೀಕ್ಷೆಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ ಎಂದು ಹೇಳಿವೆ. ಕೋವಿಡ್ ಸಾಂಕ್ರಾಮಿಕವು ಇನ್ನು ಮುಂದೆ ತುರ್ತುಸ್ಥಿತಿಯಲ್ಲ ಎಂದು ಘೋಷಿಸಲಾಗಿದೆ. ಆದರೆ ಶರತ್ಕಾಲ ಮತ್ತು ಚಳಿಗಾಲದ ಋತುಗಳಲ್ಲಿ ಉಸಿರಾಟದ ಕಾಯಿಲೆಯು ಮತ್ತೆ ಪ್ರಾರಂಭವಾಗುವುದರಿಂದ ಗರಿಷ್ಠ ಮಾರಾಟವಾಗಬಹುದು ಎಂದು ಯು ಹೇಳಿದರು.
2020ರಲ್ಲಿ ಘೋಷಿಸಿತ್ತು ವಿಶ್ವ ಆರೋಗ್ಯ ಸಂಸ್ಥೆ: COVID-19 ಇನ್ನು ಮುಂದೆ ಜಾಗತಿಕ ತುರ್ತುಸ್ಥಿತಿಯಾಗಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮೇ 5 ರಂದು ಘೋಷಿಸಿದೆ. ತುರ್ತು ಹಂತವು ಮುಗಿದಿದ್ದರೂ ಸಹ, ಸಾಂಕ್ರಾಮಿಕ ರೋಗವು ಕೊನೆಗೊಂಡಿಲ್ಲ ಎಂದು WHO ಹೇಳಿದೆ. ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಅದು ಉಲ್ಲೇಖಿಸಿದೆ. 2020 ರ ಜನವರಿ 30 ರಂದು ಯುಎನ್ ಆರೋಗ್ಯ ಸಂಸ್ಥೆಯು ಕೊರೊನಾವೈರಸ್ ಅನ್ನು ಅಂತರರಾಷ್ಟ್ರೀಯ ಬಿಕ್ಕಟ್ಟು ಎಂದು ಮೊದಲ ಬಾರಿಗೆ ಘೋಷಿಸಿತ್ತು. ಆವಾಗ ಅದಕ್ಕೆ ಇನ್ನೂ COVID-19 ಎಂದು ಹೆಸರು ಇಡಲಾಗಿರಲಿಲ್ಲ.
ಇದನ್ನೂ ಓದಿ : ಕಲ್ಲಿದ್ದಲು ಲೆವಿ ಸುಲಿಗೆ ಹಗರಣ: EDಯಿಂದ 51 ಕೋಟಿ ಮೌಲ್ಯದ ಆಸ್ತಿ ಜಪ್ತಿ