ವಾಷಿಂಗ್ಟನ್: ಎಲೋನ್ ಮಸ್ಕ್ ಶುಕ್ರವಾರದಿಂದ ಟ್ವಿಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಲಿದ್ದಾರೆ. ಸಹಿ ಮಾಡದ ಆಂತರಿಕ ಜ್ಞಾಪನಾ ಪತ್ರದ (ಮೆಮೊ) ಪ್ರಕಾರ, ಟ್ವಿಟರ್ ಉದ್ಯೋಗಿಗಳ ವಜಾಗೊಳಿಸುವಿಕೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಇಮೇಲ್ ಕಳುಹಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಟ್ವಿಟರ್‌ನ ಕಚೇರಿಗಳಿಗೆ ಉದ್ಯೋಗಿಗಳು ತಮ್ಮ ಬ್ಯಾಡ್ಜ್ ಬಳಸಿ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಉದ್ಯೋಗಿಗಳು ನವೆಂಬರ್ 4 ರಂದು PST ಕಾಲಮಾನ ಬೆಳಗ್ಗೆ 9 ಗಂಟೆಯಿಂದ ಉದ್ಯೋಗಿಗಳಿಗೆ ಅವರನ್ನು ವಜಾಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸುವ ಇಮೇಲ್ ಬರಲಾರಂಭಿಸಲಿವೆ.
ಇದೊಂದು ದಾಟಲು ಕಷ್ಟಕರವಾದ ಸನ್ನಿವೇಶವಾಗಿದೆ. ಈ ಕ್ರಮದಿಂದ ನಿಮ್ಮ ಮೇಲೆ ಪ್ರಭಾವ ಬೀರಬಹುದು ಅಥವಾ ಬೀರದಿರಬಹುದು. ಸಾಮಾಜಿಕ ಮಾಧ್ಯಮದಲ್ಲಿ, ಪತ್ರಿಕೆ ಅಥವಾ ಬೇರೆಡೆ ಗೌಪ್ಯ ಕಂಪನಿ ಮಾಹಿತಿಯನ್ನು ಚರ್ಚಿಸುವುದನ್ನು ನಿಷೇಧಿಸುವ ಟ್ವಿಟರ್‌ನ ನೀತಿಗಳಿಗೆ ಬದ್ಧವಾಗಿರುವುದನ್ನು ಮುಂದುವರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಮೆಮೊದಲ್ಲಿ ಬರೆಯಲಾಗಿದೆ.
ಟ್ವಿಟರ್‌ನಲ್ಲಿರುವ ಸರಿಸುಮಾರು 7,500 ಉದ್ಯೋಗಿಗಳ ಪೈಕಿ ಅರ್ಧದಷ್ಟು ಜನರನ್ನು ಮನೆಗೆ ಕಳುಹಿಸುವ ಸಾಧ್ಯತೆಯಿದೆ. ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ ಈ ಬೆಳವಣಿಗೆಗಳು ನಡೆಯುತ್ತಿವೆ.
ಇದನ್ನೂ ಓದಿ: ಬಳಕೆಗಿಂತ ನಕಲಿ ಖಾತೆಗಳೇ ಹೆಚ್ಚು.. ಟ್ವಿಟರ್ ಖರೀದಿ ಒಪ್ಪಂದ ಸದ್ಯಕ್ಕೆ ಸ್ಥಗಿತ ಎಂದ ಎಲಾನ್ ಮಸ್ಕ್