ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ ಮೇಲೆ ಹಿಡಿತ ಸಾಧಿಸಿದ ಬೆನ್ನೆಲ್ಲೇ ಮೈಕ್ರೋಬ್ಲಾಗಿಂಗ್ ಸೈಟ್ ಸಾರ್ವಜನಿಕರು ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟ್ವಿಟರ್ ಸಾರ್ವಜನಿಕರ ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಸೋಮವಾರ 44 ಬಿಲಿಯನ್ ಡಾಲರ್ (₹3.36 ಲಕ್ಷ ಕೋಟಿ) ಮೊತ್ತಕ್ಕೆ ಟ್ವಿಟರ್‌ನ ಪೂರ್ತಿ ಷೇರು ಎಲಾನ್ ಮಸ್ಕ್ ಪಾಲಾಗಿದೆ. ಒಪ್ಪಂದದ ನಿಯಮಗಳ ಅಡಿಯಲ್ಲಿ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ.
ಓದಿ: $44 ಬಿಲಿಯನ್ಗೆ ಟ್ವಿಟರ್ ಖರೀದಿಗೆ ಎಲಾನ್ ಮಸ್ಕ್ ಒಪ್ಪಂದ: ಟ್ವಿಟರ್ ಷೇರು ಮೌಲ್ಯದಲ್ಲಿ ಜಿಗಿತ
ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್ (₹4,149) ನಂತೆ ಪಾವತಿಸಿ ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸುವುದ್ದರಿಂದ ಕಂಪನಿ ಪೂರ್ತಿಯಾಗಿ ಎಲಾನ್ ಮಸ್ಕ್ ಪಾಲಾಯಿತು.
ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಮಾತನಾಡಿ, ಸದ್ದುಗದ್ದಲದ ನಡುವೆಯೂ ಏಕಾಗ್ರತೆ ಮತ್ತು ತುರ್ತಾಗಿ ಕೆಲಸವನ್ನು ಮುಂದುವರಿಸುವ ಉದ್ಯೋಗಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಟ್ವಿಟರ್ ಅನ್ನು ಉತ್ತಮ, ಅಗತ್ಯವಿರುವಲ್ಲಿ ಸರಿಪಡಿಸಲು ಮತ್ತು ಸೇವೆಯನ್ನು ಬಲಪಡಿಸಲು ನಾನು ಈ ಕೆಲಸವನ್ನು ತೆಗೆದುಕೊಂಡಿದ್ದೇನೆ ಎಂದು ಅಗ್ರವಾಲ್ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್‌ಗಳನ್ನು ಮಾಡಿದ ಮೈಕ್ರೋಬ್ಲಾಗಿಂಗ್ ಸೈಟ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ, ಇದು ಪ್ರೋಟೋಕಾಲ್ ಮಟ್ಟದಲ್ಲಿ ಸಾರ್ವಜನಿಕ ಒಳಿತನ್ನು ಬಯಸುತ್ತದೆ, ಕಂಪನಿಯಲ್ಲ. ಅದು ಕಂಪನಿಯಾಗಿರುವುದರ ಸಮಸ್ಯೆಯನ್ನು ಪರಿಹರಿಸುತ್ತದೆ. ಪ್ರಜ್ಞೆಯ ಬೆಳಕನ್ನು ವಿಸ್ತರಿಸುವ ಅವರ ಉದ್ದೇಶವನ್ನು ನಾನು ನಂಬುತ್ತೇನೆ ಎಂದು ಡಾರ್ಸೆ ಟ್ವೀಟ್ ಮಾಡಿದ್ದಾರೆ.
ನವೆಂಬರ್ 29, 2021 ರಂದು ಟ್ವಿಟರ್‌ನ ಮೇವರಿಕ್ ಸಹ - ಸಂಸ್ಥಾಪಕ ಡಾರ್ಸೆ ಅವರು ತಮ್ಮ ರಾಜೀನಾಮೆಯನ್ನು ಇದ್ದಕ್ಕಿದ್ದಂತೆ ಘೋಷಿಸಿದರು. ಟ್ವಿಟರ್‌ನಲ್ಲಿ ಸಿಟಿಒ ಆಗಿದ್ದ IITian ಪರಾಗ್ ಅಗ್ರವಾಲ್ನ್ನು ಅವರ ಸ್ಥಾನಕ್ಕೆ ನೇಮಿಸಲಾಯಿತು.