ನವದೆಹಲಿ : ಡಾನ್ಸ್ಕೆ ಬ್ಯಾಂಕ್‌ನ ಡಿಜಿಟಲ್ ರೂಪಾಂತರ ಉಪಕ್ರಮಗಳನ್ನು ವೇಗಗೊಳಿಸಲು ಬ್ಯಾಂಕ್ ಕಾರ್ಯತಂತ್ರದ ಪಾಲುದಾರನಾಗಿ ತಮ್ಮ ಕಂಪನಿ ಆಯ್ಕೆಯಾಗಿರುವುದಾಗಿ ಐಟಿ ಸರ್ವಿಸಸ್ ಕಂಪನಿ ಇನ್ಫೋಸಿಸ್ ಸೋಮವಾರ ಪ್ರಕಟಿಸಿದೆ. ಇನ್ಫೋಸಿಸ್ ಜಾಗತಿಕ ಐಟಿ ಸೇವೆಗಳ ಮುಂದಾಳು ಕಂಪನಿಯಾಗಿದ್ದು, 50ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಐಟಿ ವಲಯದಲ್ಲಿ ನಾಲ್ಕು ದಶಕಗಳ ಅನುಭವವನ್ನು ಹೊಂದಿದೆ.
ಒಪ್ಪಂದದ ಅಂದಾಜು ಮೌಲ್ಯವು ಐದು ವರ್ಷಗಳ ಅವಧಿಗೆ USD 454 ಮಿಲಿಯನ್ ಆಗಿದ್ದು, ಒಂದು ಹೆಚ್ಚುವರಿ ವರ್ಷಕ್ಕೆ ಗರಿಷ್ಠ ಮೂರು ಬಾರಿ ನವೀಕರಿಸಲು ಅವಕಾಶವಿದೆ. ಈ ಸಹಯೋಗವು ನೆಕ್ಸ್ಟ್ ಜೆನ್ ಪರಿಹಾರಗಳ ಮೂಲಕ ಉತ್ತಮ ಗ್ರಾಹಕ ಅನುಭವಗಳು, ಕಾರ್ಯಾಚರಣೆಯ ಉತ್ಕೃಷ್ಟತೆಯ ಕಡೆಗೆ ತನ್ನ ಕಾರ್ಯತಂತ್ರದ ಆದ್ಯತೆಗಳನ್ನು ಸಾಧಿಸಲು ಡಾನ್ಸ್ಕೆ ಬ್ಯಾಂಕ್‌ಗೆ ಸಹಾಯ ಮಾಡಲಿದೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಡಾನ್ಸ್ಕೆ ಬ್ಯಾಂಕ್ ಡೆನ್ಮಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಪರ್ಸನಲ್, ದೊಡ್ಡ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಭಾರತದಲ್ಲಿರುವ ಡಾನ್ಸ್ಕೆ ಬ್ಯಾಂಕ್‌ನ IT ಕೇಂದ್ರವನ್ನು ಕೂಡ ಇನ್ಫೋಸಿಸ್ ಸ್ವಾಧೀನಪಡಿಸಿಕೊಳ್ಳಲಿದೆ. ಈ ಕೇಂದ್ರದಲ್ಲಿ ಒಟ್ಟು 1,400 ವೃತ್ತಿಪರರು ಕೆಲಸ ಮಾಡಲಿದ್ದಾರೆ.
ಇನ್ಫೊಸಿಸ್ ಟೋಪಾಜ್ ಮೂಲಕ ತನ್ನ ಜಾಗತಿಕ ಪರಿಣತಿ ಮತ್ತು ಉದ್ಯಮ-ಪರಿಹಾರಗಳೊಂದಿಗೆ, ಇನ್ಫೋಸಿಸ್ ತನ್ನ ಐಟಿ ಕಾರ್ಯಾಚರಣೆಗಳು ಮತ್ತು ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಬ್ಯಾಂಕಿನ ಡಿಜಿಟಲ್ ಕಾರ್ಯಸೂಚಿಯನ್ನು ವೇಗಗೊಳಿಸಲಿದೆ ಎಂದು ಇನ್ಫೋಸಿಸ್ ಹೇಳಿದೆ. ನಾರ್ಡಿಕ್ಸ್ ಪ್ರದೇಶವು ಇನ್ಫೋಸಿಸ್‌ಗೆ ಬಹಳ ಆದ್ಯತೆಯ ಮಾರುಕಟ್ಟೆಯಾಗಿದೆ ಮತ್ತು ಈ ಸಹಯೋಗವು ಆ ಪ್ರದೇಶಕ್ಕೆ ಕಂಪನಿಯ ಬದ್ಧತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
"ನಮ್ಮ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು ಸೂಕ್ತ ಪಾರ್ಟನರ್ ಕಂಪನಿಯೊಂದನ್ನು ನಾವು ಹುಡುಕುತ್ತಿದ್ದೆವು. ನಮ್ಮ ಕೆಲಸಕ್ಕೆ ಬೇಕಾದಂಥ ಎಲ್ಲ ಪರಿಕರಗಳು, ಅನುಭವ ಮತ್ತು ಪರಿಣತಿಯನ್ನು ಇನ್ಫೋಸಿಸ್ ಹೊಂದಿದೆ. ಕ್ಲೌಡ್ ಮತ್ತು AI ತಂತ್ರಜ್ಞಾನಗಳನ್ನು ಬಳಸಿಕೊಂಡು ನಮ್ಮ ರೂಪಾಂತರವನ್ನು ವೇಗಗೊಳಿಸುವಲ್ಲಿ ಇನ್ಫೋಸಿಸ್‌ನ ಜಾಗತಿಕ ಉಪಸ್ಥಿತಿ ಮತ್ತು ಪ್ರಮಾಣವನ್ನು ಗಮನಿಸಿದರೆ, ಈ ಸಹಯೋಗವು ನಮಗೆ ವಿಶಾಲವಾದ ಪ್ರತಿಭೆಗಳನ್ನು ಒದಗಿಸಲಿದೆ" ಎಂದು ಡಾನ್ಸ್ಕೆ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫ್ರಾನ್ಸ್ ವೋಲ್ಡರ್ಸ್ ಹೇಳಿದ್ದಾರೆ.
ಡಾನ್ಸ್ಕೆ ಬ್ಯಾಂಕ್ ಡೆನ್ಮಾರ್ಕ್‌ನ ಅತಿದೊಡ್ಡ ಬ್ಯಾಂಕ್ ಆಗಿದೆ ಮತ್ತು ಸ್ಕ್ಯಾಂಡಿನೇವಿಯನ್ ಹಣಕಾಸು ಮಾರುಕಟ್ಟೆಗಳಲ್ಲಿನ ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಡಾನ್ಸ್ಕೆ ಬ್ಯಾಂಕ್ ಗ್ರೂಪ್ ಡಾನ್ಸ್ಕೆ ಬ್ಯಾಂಕ್, ರಿಯಲ್ ಕ್ರೆಡಿಟ್ ಡೆನ್ಮಾರ್ಕ್, ದಾನಿಕಾ ಪೆನ್ಷನ್, ನೋರ್ಡಾನಿಯಾ ಲೀಸಿಂಗ್ ಮತ್ತು ಹಲವಾರು ಇತರ ಅಂಗಸಂಸ್ಥೆಗಳನ್ನು ಒಳಗೊಂಡಿದೆ. ವಿಮೆ, ಅಡಮಾನ ಹಣಕಾಸು, ಆಸ್ತಿ ನಿರ್ವಹಣೆ, ಬ್ರೋಕರೇಜ್, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಸೇವೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.
ಇದನ್ನೂ ಓದಿ : FCI: ಇ-ಹರಾಜು ಮೂಲಕ ಮಾತ್ರ ಅಕ್ಕಿ, ಗೋಧಿ ಮಾರಾಟ- ಎಫ್ಸಿಐಗೆ ಕೇಂದ್ರ ಸರ್ಕಾರ ಸೂಚನೆ