ಹೈದರಾಬಾದ್: ದೇಶದಲ್ಲಿ ಇಂದಿನಿಂದ ಡಿಜಿಟಲ್ ಕರೆನ್ಸಿ ಯುಗ ಆರಂಭವಾಗಿದೆ. ಇನ್ನು ಮುಂದೆ ನಾವು ಹಣವನ್ನು ಜೇಬಿನಲ್ಲಿ ಕೊಂಡೊಯ್ಯುವುದರಿಂದ ದೂರವಾಗಬಹುದು. ಅದರ ಬದಲಾಗಿ ಡಿಜಿಟಲ್ ಕರೆನ್ಸಿಯನ್ನೇ ವಹಿವಾಟಿನಲ್ಲಿ ಬಳಸಿಕೊಳ್ಳಬಹುದಾಗಿದೆ. ದೇಶದ ಮುಖ್ಯ ಬ್ಯಾಂಕ್ಗಳ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗೆ ನಾಂದಿ ಹಾಡಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಇದನ್ನು ಮೊದಲ ಹಂತದಲ್ಲಿ ಸಗಟು ವ್ಯಾಪಾರದಲ್ಲಿ ಪ್ರಾಯೋಗಿಕ ಚಾಲನೆಗೆ ನೀಡಿದೆ. ಮುಂದಿನ ದಿನಗಳಲ್ಲಿ ಇದು ಚಿಲ್ಲರೆ ವ್ಯಾಪಾರಕ್ಕೂ ಅಡಿಇಡಲಿದೆ.
ಡಿಜಿಟಲ್ ಕರೆನ್ಸಿ ಸಂಪೂರ್ಣವಾಗಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಫೋನ್ ಮೂಲಕವೇ ಹಣದ ವ್ಯವಹಾರ ನಡೆಸಬಹುದು. ವ್ಯಾಲೆಟ್ನಲ್ಲಿನ ಭೌತಿಕ ನೋಟುಗಳನ್ನು ಎಣಿಸಿ ಕೊಡುವ ಪದ್ಧತಿಯೇ ಮರೆಯಾಗಬಹುದು. ಇ-ಕರೆನ್ಸಿ ನೋಟುಗಳು ಭೌತಿಕ ನೋಟಿಗಳ ಜಾಗೆಯನ್ನು ಆಕ್ರಮಿಸಲಿವೆ.
ಏನಿದು ಡಿಜಿಟಲ್ ಕರೆನ್ಸಿ: ಡಿಜಿಟಲ್ ಕರೆನ್ಸಿ ಎಂಬುದು ಭೌತಿಕವಾಗಿ ನಾವಿಂದು ಬಳಸುವ ನೋಟು, ನಾಣ್ಯಗಳಂತೆಯೇ ಇರಲಿದೆ. ಅವುಗಳನ್ನು ಮುಟ್ಟಲಾಗುವುದಿಲ್ಲ ಅಷ್ಟೇ. ಇವು ಸಂಪೂರ್ಣವಾಗಿ ಇ-ರುಪಿಯಾಗಲಿದೆ. ಡಿಜಿಟಲ್ ಮಾದರಿಯಲ್ಲಿರುವ ಕರೆನ್ಸಿ ಸವೆಯುವುದಿಲ್ಲ, ಹರಿಯುವುದಿಲ್ಲ, ಕಳ್ಳತನವನ್ನೂ ಮಾಡಲಾಗುವುದಿಲ್ಲ.
ಇ-ರುಪಿ ಕರೆನ್ಸಿಯನ್ನು ಆರ್ಬಿಐ ಬಿಡುಗಡೆ ಮಾಡುತ್ತಿರುವ ಕಾರಣ ಗ್ರಾಹಕರು ಇದನ್ನು ಅನುಮಾನಿಸಬೇಕಿಲ್ಲ. ಈಗಿರುವ ಹಣಕ್ಕೆ ಆರ್ಬಿಐ ಹೇಗೆ ಭದ್ರತೆ ನೀಡುತ್ತದೆಯೋ ಹಾಗೆಯೇ ಡಿಜಿಟಲ್ ಕರೆನ್ಸಿಗೂ ಅದು ಖಾತ್ರಿ ನೀಡುತ್ತದೆ. ಈ ತಾಂತ್ರಿಕ ಹಣದಿಂದಾಗಿ ಭೌತಿಕ ನೋಟುಗಳನ್ನು ಮುದ್ರಿಸುವ, ಸಾಗಣೆ, ವಿತರಣೆಯ ಶ್ರಮ ಇದರಿಂದ ತಪ್ಪಲಿದೆ. ಇ-ರುಪಿಯ ಸಂಪೂರ್ಣ ನಿಯಂತ್ರಣವನ್ನು ಆರ್ಬಿಐ ಹೊಂದಿದೆ.
ಈಗಿರುವ ಡಿಜಿಟಲ್ ವಹಿವಾಟಿಗಿಂತ ಇ-ರುಪಿಯ ಬಳಕೆ ಭಿನ್ನವಾಗಿರುತ್ತದೆ. ಖಾಸಗಿ ಕಂಪನಿಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂಗೆ ನಾವು ಬ್ಯಾಂಕ್ ಖಾತೆ ಅಳವಡಿಡಬೇಕು. ಆ ಖಾತೆಯಿಂದಲೇ ನೇರವಾಗಿ ಹಣವನ್ನು ಇನ್ನೊಂದು ಖಾತೆಗೆ ವರ್ಗವಾಗುತ್ತದೆ. ಆದರೆ, ಇ-ರುಪಿ ಬ್ಯಾಂಕ್ ಖಾತೆ ಮೂಲಕವಲ್ಲದೇ ಅದನ್ನು ಪ್ರತ್ಯೇಕವಾಗಿ ಕರೆನ್ಸಿ ಮಾದರಿಯಲ್ಲೇ ವ್ಯವಹಾರ ನಡೆಸುವುದಾಗಿದೆ. ಅಂದರೆ, ಇದಕ್ಕೆ ಯಾವುದೇ ಖಾತೆ, ಇಂಟರ್ನೆಟ್ ಸೌಲಭ್ಯ ಬೇಕಾಗಿಲ್ಲ.
ಭದ್ರತೆ, ಶುಲ್ಕ ರಹಿತ ವಹಿವಾಟು: ಡಿಜಿಟಲ್ ಕರೆನ್ಸಿಯ ಇನ್ನೊಂದು ಪ್ರಯೋಜನವೆಂದರೆ ಭೌತಿಕ ಕರೆನ್ಸಿಗಳಂತೆಯೇ ಇದನ್ನು ಶುಲ್ಕಗಳಿಲ್ಲದೇ ಪರಸ್ಪರ ಬದಲಾಯಿಸಬಹುದಾಗಿದೆ. ಡಿಜಿಟಲ್ ಕರೆನ್ಸಿ ವಹಿವಾಟುಗಳು ಭೌತಿಕ ಕರೆನ್ಸಿ ಪಾವತಿಗಳಿಗಿಂತ ವೇಗವಾಗಿ ಮಾಡಬಹುದು. ವಿಶ್ವದಲ್ಲಿ ಸದ್ದು ಮಾಡುತ್ತಿರುವ ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ರೂಪದಲ್ಲಿ ಈ ಡಿಜಿಟಲ್ ಕರೆನ್ಸಿ ಇರುವುದಿಲ್ಲ. ಇ-ರುಪಿ ಮೇಲೆ ಆರ್‌ಬಿಐನ ಸಂಪೂರ್ಣ ನಿಯಂತ್ರಣವಿರುತ್ತದೆ. ಕ್ರಿಪ್ಟೋಕರೆನ್ಸಿಗೆ ಯಾವುದೇ ಭದ್ರತೆ ಇರುವುದಿಲ್ಲ. ಯಾವುದೇ ಬ್ಯಾಂಕ್ ಇವುಗಳಿಗೆ ವಾರಸತ್ವ ಹೊಂದಿರುವುದಿಲ್ಲ.
ಎರಡು ಸ್ವರೂಪಗಳಲ್ಲಿ ಕರೆನ್ಸಿ: ಈ ಡಿಜಿಟಲ್ ಕರೆನ್ಸಿ ಎರಡು ರೂಪಗಳಲ್ಲಿ ಬರಲಿದೆ. ಒಂದು ಖಾತೆ ರಹಿತ ವಹಿವಾಟು ಅಂದರೆ, ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳ ಮಧ್ಯೆ ನಡೆಯುವ ವ್ಯವಹಾರಕ್ಕೆ ಬಳಸುವ ಕರೆನ್ಸಿ. ಇದಕ್ಕೆ ಯಾವುದೇ ಬ್ಯಾಂಕ್ ಖಾತೆಯ ಅಗತ್ಯವಿಲ್ಲ. ಇನ್ನೊಂದು ಹಣಕಾಸು ಸಂಸ್ಥೆಗಳ ನಡುವಿನ ಖಾತೆ ಸಹಿತ ಕರೆನ್ಸಿ ವಹಿವಾಟು. ಮೊದಲ ಹಂತದಲ್ಲಿ ಡಿಜಿಟಲ್ ಕರೆನ್ಸಿಯನ್ನು ನಿಗದಿತ ವಹಿವಾಟಿಗೆ ನಿರ್ಬಂಧಿಸಲಾಗಿರುತ್ತದೆ.
ಇದರಿಂದಾಗುವ ಲಾಭವೇನು?: ಡಿಜಿಟಲ್ ಕರೆನ್ಸಿಯಿಂದ ಈಗಿರುವ ಭೌತಿಕ ನೋಟುಗಳು ಮತ್ತು ನಾಣ್ಯಗಳನ್ನು ಮುದ್ರಿಸುವ ಮತ್ತು ವಿತರಿಸಲು ಖರ್ಚು ಉಳಿತಾಯವಾಗಲಿದೆ. ಇದು ಸಂಪೂರ್ಣ ಪಾರದರ್ಶಕವಾಗಿರಲಿದ್ದು, ಕಪ್ಪು ಹಣದ ಹಾವಳಿಯನ್ನು ತಡೆಯುತ್ತದೆ. ಅಲ್ಲದೇ, ಇವುಗಳನ್ನು ಮೊಬೈಲ್ನಲ್ಲಿ ವಹಿವಾಟು ನಡೆಸಿದರೂ, ಇಂಟರ್ನೆಟ್ ಅಗತ್ಯವಿಲ್ಲ. ವಿವಿಧ ದೇಶಗಳೊಂದಿಗೆ ಹಣಕಾಸಿನ ವಹಿವಾಟುಗಳನ್ನೂ ಹೆಚ್ಚಿಸಬಹುದು.
ಓದಿ: ಜಿಎಸ್ಟಿ ಸಂಗ್ರಹ : ಖಜಾನೆಗೆ ಬಂತು ದಾಖಲೆಯ ಮೊತ್ತ.. ಇದು ಎರಡನೇ ಅತಿ ಹೆಚ್ಚು ಜಿಎಸ್ಟಿ ಕಲೆಕ್ಷನ್