ಮುಂಬೈ: ಕೇವಲ ನಂಬಿಕೆಯ ಆಧಾರದ ಮೇಲೆ ಮೌಲ್ಯ ಪಡೆಯುವ, ಅತ್ಯಾಧುನಿಕತೆಯ ಹೆಸರಿನ ಮೇಲೆ ನಡೆಯುವ, ಯಾವುದೇ ವಾಸ್ತವ ಆಧಾರವಿಲ್ಲದ ಕ್ರಿಪ್ಟೊಕರೆನ್ಸಿಗಳು "ನಿಜವಾದ ಅಪಾಯ" ವಾಗಿವೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಎಚ್ಚರಿಸಿದ್ದಾರೆ.
ಕ್ರಿಪ್ಟೊಕರೆನ್ಸಿ ವಲಯದಲ್ಲಿರುವ ಭಾಗಿದಾರರು ಮತ್ತು ಸಂಸ್ಥೆಗಳಿಂದ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಸರ್ಕಾರವು ಕ್ರಿಪ್ಟೊಕರೆನ್ಸಿಗಳ ಕುರಿತಾದ ಸಮಾಲೋಚನಾ ವರದಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಹೆಚ್ಚು ಊಹಾತ್ಮಕ ಆಸ್ತಿಯಾಗಿ ಕಂಡುಬರುವ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.
ಹಣಕಾಸು ವ್ಯವಸ್ಥೆಯು ಹೆಚ್ಚು ಡಿಜಿಟಲೀಕರಣಗೊಳ್ಳುತ್ತಿದ್ದಂತೆ ಸೈಬರ್ ಅಪಾಯಗಳು ಬೆಳೆಯುತ್ತಿವೆ ಮತ್ತು ಅದರ ಬಗ್ಗೆ ವಿಶೇಷ ಗಮನದ ಅಗತ್ಯವಿದೆ ಎಂದು ಗುರುವಾರ ಬಿಡುಗಡೆಯಾದ ಹಣಕಾಸು ಸ್ಥಿರತೆ ವರದಿಯ (ಎಫ್‌ಎಸ್‌ಆರ್) 25 ನೇ ಸಂಚಿಕೆಯ ಮುನ್ನುಡಿಯಲ್ಲಿ ದಾಸ್ ಹೇಳಿದ್ದಾರೆ.
ಈ ವಿಷಯದಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು. ಕೇವಲ ನಂಬಿಕೆಯ ಆಧಾರದ ಮೇಲೆ ಮೌಲ್ಯ ಪಡೆಯುವ, ಅತ್ಯಾಧುನಿಕತೆಯ ಹೆಸರಿನ ಮೇಲೆ ನಡೆಯುವ, ಯಾವುದೇ ವಾಸ್ತವ ಆಧಾರವಿಲ್ಲದ ಕ್ರಿಪ್ಟೊಕರೆನ್ಸಿಗಳು ನಿಜವಾದ ಅಪಾಯವಾಗಿವೆ ಎಂದು ದಾಸ್ ಹೇಳಿದರು.
ಯಾವುದೇ ವಾಸ್ತವ ಮೌಲ್ಯ ಹೊಂದಿರದ ಕ್ರಿಪ್ಟೊಕರೆನ್ಸಿಗಳು ಜಾಗತಿಕ ಅನಿಶ್ಚಿತತೆಗಳ ನಡುವೆ ಇತ್ತೀಚಿನ ವಾರಗಳಲ್ಲಿ ಭಾರಿ ಏರಿಳಿತಕ್ಕೆ ಒಳಗಾಗಿವೆ. ಆರ್‌ಬಿಐ ಮೊದಲ ಬಾರಿಗೆ 2018 ರಲ್ಲಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿ, ಕಂಪನಿಗಳು ಕ್ರಿಪ್ಟೊಕರೆನ್ಸಿಗಳಂಥ ಕರೆನ್ಸಿಗಳಲ್ಲಿ ವ್ಯವಹರಿಸುವುದರಿಂದ ನಿರ್ಬಂಧಿಸಿತ್ತು. ಆದಾಗ್ಯೂ, 2020 ರ ಆರಂಭದಲ್ಲಿ, ಸುಪ್ರೀಂಕೋರ್ಟ್ ಈ ಸುತ್ತೋಲೆಯನ್ನು ರದ್ದುಗೊಳಿಸಿತು.