ಮುಂಬೈ: ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ಜಾಗತಿಕ ಮಾರುಕಟ್ಟೆಗಳ ಮಿಶ್ರ ಪ್ರವೃತ್ತಿಗಳ ಮಧ್ಯೆ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಗುರುವಾರ 143 ಪಾಯಿಂಟ್ ಗಳಷ್ಟು ಕುಸಿದಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 143.41 ಪಾಯಿಂಟ್ಸ್ ಅಥವಾ ಶೇಕಡಾ 0.22 ರಷ್ಟು ಕುಸಿದು 64,832.20 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 206.85 ಪಾಯಿಂಟ್ ಅಥವಾ ಶೇಕಡಾ 0.31 ರಷ್ಟು ಕುಸಿದು 64,768.76 ಕ್ಕೆ ತಲುಪಿತ್ತು. ಇನ್ನು ನಿಫ್ಟಿ 48.20 ಪಾಯಿಂಟ್ ಅಥವಾ ಶೇಕಡಾ 0.25 ರಷ್ಟು ಕುಸಿದು 19,395.30 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಷೇರುಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೈಟಾನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಮಹೀಂದ್ರಾ & ಮಹೀಂದ್ರಾ, ಪವರ್ ಗ್ರಿಡ್, ಇಂಡಸ್ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಲಾರ್ಸನ್ & ಟೂಬ್ರೊ ಮತ್ತು ಮಾರುತಿ ಲಾಭ ಗಳಿಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಏರಿಕೆಯಲ್ಲಿದ್ದರೆ, ಹಾಂಕಾಂಗ್ ಕೆಳಮಟ್ಟದಲ್ಲಿ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಹೆಚ್ಚಾಗಿ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದವು. ಅಮೆರಿಕದ ಮಾರುಕಟ್ಟೆಗಳು ಬುಧವಾರ ಮಿಶ್ರ ಟಿಪ್ಪಣಿಯಲ್ಲಿ ಕೊನೆಗೊಂಡವು.
ನಿನ್ನೆ ಅಂದರೆ ಬುಧವಾರದ ಷೇರು ವಹಿವಾಟು ನೋಡುವುದಾದರೆ- ಬಿಎಸ್ಇ ಬೆಂಚ್ಮಾರ್ಕ್ ಬುಧವಾರ 33.21 ಪಾಯಿಂಟ್ ಅಥವಾ ಶೇಕಡಾ 0.05 ರಷ್ಟು ಏರಿಕೆ ಕಂಡು 64,975.61 ಕ್ಕೆ ತಲುಪಿತ್ತು. ವಿಶಾಲ ನಿಫ್ಟಿ 36.80 ಪಾಯಿಂಟ್ ಅಥವಾ ಶೇಕಡಾ 0.19 ರಷ್ಟು ಏರಿಕೆ ಕಂಡು 19,443.50 ಕ್ಕೆ ತಲುಪಿತ್ತು.
ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.99 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 80.33 ಡಾಲರ್ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ 84.55 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವಿನ ಮಧ್ಯೆ ಭಾರತೀಯ ರೂಪಾಯಿ ಗುರುವಾರ ಕೊಂಚ ಕುಸಿತ ಕಂಡಿದೆ. ಭಾರತೀಯ ರೂಪಾಯಿ ಡಾಲರ್ ಎದುರು ನಿನ್ನೆಯ 83.27 ಕ್ಕೆ ಹೋಲಿಸಿದರೆ 1 ಪೈಸೆ ಕುಸಿದು ಇಂದು 83.28 ರಲ್ಲಿ ಕೊನೆಗೊಂಡಿತು.
ಇದನ್ನೂ ಓದಿ : ಜಿ20 ರಾಷ್ಟ್ರಗಳನ್ನು ಮೀರಿಸಲಿದೆ ಭಾರತದ ಆರ್ಥಿಕ ಬೆಳವಣಿಗೆ; ಮೂಡೀಸ್ ವರದಿ