ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಅಧಿಕೃತವಾಗಿ 5G ಬಿಡುಗಡೆ ಘೋಷಿಸಲಿದ್ದಾರೆ. ಮುಂದಿನ ತಿಂಗಳಿನಿಂದ 5ಜಿ ಯುಗ ಆರಂಭವಾಗಲಿದ್ದು, ಅಂತರ್ಜಾಲ ಸೇವೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಇದು ದೇಶದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ಎಷ್ಟು ಬದಲಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಚೀನಾದ ಮೊಬೈಲ್ ಕಂಪನಿಗಳಿಗೆ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಇದಕ್ಕೆ ಕಾರಣ ಚೀನಾ ನಿರ್ಮಿತ ಸ್ಮಾರ್ಟ್ಫೋನ್ಗಳು ದೇಶದಲ್ಲಿ ಭಾರೀ ಬೇಡಿಕೆ ಮತ್ತು ಬೇರೂರಿವೆ. 5 ಜಿ ಬಿಡುಗಡೆ ಬಳಿಕ ಚೀನಾದ ಮೊಬೈಲ್ ಕಂಪನಿಗಳ ಮಾರಾಟವೂ ಹೆಚ್ಚಲಿದೆ. ಇದರಿಂದ ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ದೇಶದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸುವ ನಿರೀಕ್ಷೆಯಿದೆ ಎಂದು ತಜ್ಞರ ವಿಶ್ಲೇಷಣೆಯಾಗಿದೆ.
ಭಾರತದಲ್ಲಿ ಚೀನಾ ಮೂಲದ ಮೊಬೈಲ್ ಕಂಪನಿಗಳು 3/2 ರಷ್ಟು ಮಾರುಕಟ್ಟೆಯನ್ನು ಹೊಂದಿವೆ. ಇದು ಇನ್ನಷ್ಟು ವಿಸ್ತರಿಸುವುದರ ಮೂಲಕ ಕಂಪನಿಗಳಿಗೆ ಹಲವಾರು ಅವಕಾಶಗಳೂ ತೆರೆಯಲಿವೆ ಎಂದು ಹೇಳಲಾಗಿದೆ. ಚೀನಾದ 20 ಮಿಲಿಯನ್ 5G ಫೋನ್‌ಗಳ ಮಾರಾಟ ಕಾಣುವ ನಿರೀಕ್ಷೆಯೂ ಇದೆ ಎಂದು ವರದಿಯೊಂದು ಉಲ್ಲೇಖಿಸಿದೆ.
ಸರ್ಕಾರ ಚೀನಾ ನಿರ್ಮಿತ ಮೊಬೈಲ್ ಕಂಪನಿಗಳ ಮೇಲೆ ಹದ್ದಿನಕಣ್ಣಿಟ್ಟ ಹೊರತಾಗಿಯೂ ಜನರಲ್ಲಿ ಆ ದೇಶದ ಮೊಬೈಲ್ಗಳ ಮೇಲೆ ವ್ಯಾಮೋಹ ಹೆಚ್ಚಿದೆ. ಅದರ ಜನಪ್ರಿಯತೆ ಇನ್ನೂ ಹೆಚ್ಚಲಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವು 36.4 ಮಿಲಿಯನ್ ತಲುಪಿದೆ. ಚೀನಾದ ಬ್ರ್ಯಾಂಡ್‌ಗಳು ಇದರಲ್ಲಿ 70 ಪ್ರತಿಶತದಷ್ಟು ಪಾಲು ಹೊಂದಿವೆ.
ತೆರಿಗೆ ವಂಚನೆ, ಭದ್ರತೆ ಆಪಾದನೆಯ ಮೇಲೆ ಕೇಂದ್ರ ಸರ್ಕಾರ ಚೀನೀ ಮೊಬೈಲ್ ಕಂಪನಿಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಉತ್ಪಾದನೆ ಮತ್ತು ಮಾರಾಟದಲ್ಲಿ ವ್ಯತ್ಯಯ ಉಂಟಾಗಿ ಆ ಕಂಪನಿಗಳು ಈಜಿಪ್ಟ್, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ನೈಜೀರಿಯಾದಂತಹ ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸುತ್ತಿವೆ ಎಂದು ಈ ಹಿಂದೆ ವರದಿಯಾಗಿತ್ತು.
ಓದಿ: ಕಾರಿನಲ್ಲಿ 6 ಏರ್ಬ್ಯಾಗ್ ಕಡ್ಡಾಯ.. ಮುಂದಿನ ವರ್ಷ ನಿಯಮ ಜಾರಿ: ಕೇಂದ್ರ ಸರ್ಕಾರ