ನವದೆಹಲಿ: ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ ಮಂಜೂರು ಮಾಡಿದ ಸಾಲದಲ್ಲಿ ವಂಚನೆ ಹಾಗೂ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ, ಬ್ಯಾಂಕ್‌ನ ಈ ಹಿಂದಿನ ಸಿಇಒ ಹಾಗೂ ಎಂಡಿ ಚಂದಾ ಕೊಚ್ಚಾರ್ ಅವರನ್ನು ಬಂಧಿಸಿದೆ. ಇದೇ ವೇಳೆ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನೂ ತನಿಖಾ ದಳ ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಾರ್ ಅವರನ್ನು ಅಧಿಕಾರಿಗಳು ಸಿಬಿಐನ ಪ್ರಧಾನ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಈ ವಿಚಾರಣೆ ಬಳಿಕ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಚಂದಾ ಕೊಚ್ಚಾರ್ ತನಿಖೆಗೆ ಸಹಕರಿಸಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಆರೋಪಿಸಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಮಾಜಿ ಎಂಡಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಇಂದು ಅವರನ್ನು ಸಿಬಿಐ, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಪ್ರಧಾನ ಕಚೇರಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕೊಚ್ಚಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ, ನೆಲ ಮಹಡಿಯಲ್ಲಿ ಪ್ರತ್ಯೇಕ ಲಾಕಪ್‌ಗಳಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?: ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್ ಅವರಿಗೆ ಅನಧಿಕೃತವಾಗಿ ಸಾಲ ನೀಡಿದ ಆರೋಪ ಚಂದಾ ಕೊಚ್ಚಾರ್ ಮೇಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಹಾಗೂ ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕಿನ ಸಾಲ ನೀತಿಯನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್‌ನ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದ ಆರೋಪ ಕೊಚ್ಚಾರ್ ಎದುರಿಸುತ್ತಿದ್ದಾರೆ.
ಐಸಿಐಸಿಐ ಬ್ಯಾಂಕ್‌ನಲ್ಲಿ ಚಂದಾ ಕೊಚ್ಚಾರ್ ಅವರ ಅಧಿಕಾರಾವಧಿಯಲ್ಲಿ ಅಂದರೆ 2009-11ರ ಅವಧಿಯಲ್ಲಿ ವಿಡಿಯೋಕಾನ್ ಗ್ರೂಪ್ ಮತ್ತು ಅದರ ಸಂಬಂಧಿತ ಕಂಪನಿಗಳಿಗೆ 1,875 ಕೋಟಿ ರೂಪಾಯಿ ಮೌಲ್ಯದ ಆರು ಸಾಲಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಾಲಗಳಲ್ಲಿ ಹೆಚ್ಚಿನವು ಅನುತ್ಪಾದಕ ಆಸ್ತಿಗಳಾಗಿ ಮಾರ್ಪಟ್ಟಿವೆ, ಇದರಿಂದಾಗಿ ಬ್ಯಾಂಕ್‌ಗೆ 1,730 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ. ಮೇ 1, 2009 ರಂದು, ಚಂದಾ ಕೊಚ್ಚರ್ ICICI ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನು ಓದಿ:ನಿದ್ದೆಗೆಟ್ಟು ಯಶಸ್ಸಿನ ಬೆನ್ನೇರಿದ ಪಿಂಕ್ವಿಲ್ಲಾ ನಂದಿನಿ ಶೆಣೈ.. ಸಾಫ್ಟ್ವೇರ್ ಕೆಲಸ ಬಿಟ್ಟು ಉದ್ಯಮಿಯಾದ ಯಶೋಗಾಥೆ