ನವದೆಹಲಿ: ಕಾಯಿನ್ ಮಾರ್ಕೆಟ್ ಕ್ಯಾಪ್ ಅಂಕಿಅಂಶಗಳ ಪ್ರಕಾರ, ಬಿಟ್ ಕಾಯಿನ್ ಅಕ್ಟೋಬರ್ 24 ರಂದು ಶೇಕಡಾ 11.86 ರಷ್ಟು ಏರಿಕೆಯಾಗಿ 34,322.47 ಡಾಲರ್ಗೆ ತಲುಪಿದೆ. ಒಂದು ವಾರದಲ್ಲಿ ಇದು ಶೇಕಡಾ 21.33 ರಷ್ಟು ಏರಿಕೆಯಾಗಿದೆ. 2022ರ ಮೇ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬಿಟ್ ಕಾಯಿನ್ ಬೆಲೆ ವಹಿವಾಟಿನಲ್ಲಿ 35,000 ಡಾಲರ್ ಗಡಿ ದಾಟಿದ್ದು, ಅಚ್ಚರಿ ಮೂಡಿಸಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಅಕ್ಟೋಬರ್ 23 ರಂದು ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್ ಕಾಯಿನ್ ಶೇಕಡಾ 10 ರಷ್ಟು ಏರಿಕೆಯಾಗಿ ಒಂದೂವರೆ ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇತರ ದೊಡ್ಡ ಕ್ರಿಪ್ಟೋ ಕರೆನ್ಸಿಗಳ ಪೈಕಿ ಕಾಯಿನ್ ಬೇಸ್ ಮತ್ತು ಮೈಕ್ರೋ ಸ್ಟ್ರಾಟಜಿ ಕೂಡ ಏರಿಕೆಯಾಗಿವೆ. ಈಥರ್ ಶೇಕಡಾ 6 ರಷ್ಟು ಏರಿಕೆಯಾಗಿ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ಮತ್ತು ಅದರ 200 ದಿನಗಳ ಸರಾಸರಿ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಎಕ್ಸ್ಚೇಂಜ್ನಲ್ಲಿ ಟ್ರೇಡ್ ಮಾಡಬಹುದಾದ ಬಿಟ್ ಕಾಯಿನ್ ಫಂಡ್ಗೆ ಅನುಮತಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಕ್ರಿಪ್ಟೊ ಕರೆನ್ಸಿಗಳ ಬೆಲೆಗಳು ಹೆಚ್ಚಾಗುತ್ತಿವೆ.
ಮೊದಲ ಯುಎಸ್ ಸ್ಪಾಟ್ ಬಿಟ್ ಕಾಯಿನ್ ಇಟಿಎಫ್ ಗಳಿಗೆ ಮುಂಬರುವ ವಾರಗಳಲ್ಲಿ ಅನುಮೋದನೆ ಸಿಗುವ ಸಂಭವವಿದೆ ಎಂಬ ಊಹಾಪೋಹಗಳು ಬಿಟ್ ಕಾಯಿನ್ ಮಾರುಕಟ್ಟೆಯಲ್ಲಿ ಉತ್ಸಾಹ ಹೆಚ್ಚಿಸುತ್ತಿವೆ. ಅಸೆಟ್ ಮ್ಯಾನೇಜಮೆಂಟ್ ಕಂಪನಿಗಳಾದ ಬ್ಲ್ಯಾಕ್ರಾಕ್ ಇಂಕ್ ಮತ್ತು ಫಿಡೆಲಿಟಿ ಇನ್ವೆಸ್ಟ್ಮೆಂಟ್ ಇಂಥ ಉತ್ಪನ್ನಗಳನ್ನು ಆರಂಭಿಸಲು ಪೈಪೋಟಿ ನಡೆಸುತ್ತಿವೆ. ಇಟಿಎಫ್ಗಳು ಕ್ರಿಪ್ಟೋಕರೆನ್ಸಿಯ ವಹಿವಾಟನ್ನು ವಿಸ್ತರಿಸುತ್ತವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿ ಎಂಬುದು ಕ್ರಿಪ್ಟೋಗ್ರಫಿಯಿಂದ ಸುರಕ್ಷಿತವಾದ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದೆ. ಇದನ್ನು ನಕಲಿ ಮಾಡುವುದು ಅಥವಾ ದ್ವಿ-ಖರ್ಚು ಮಾಡುವುದು ಅಸಾಧ್ಯವಾಗಿದೆ. ಹೆಚ್ಚಿನ ಕ್ರಿಪ್ಟೋಕರೆನ್ಸಿಗಳು ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ವಿಕೇಂದ್ರೀಕೃತ ನೆಟ್ವರ್ಕ್ಗಳಲ್ಲಿ ಅಸ್ತಿತ್ವದಲ್ಲಿವೆ. ಕ್ರಿಪ್ಟೋಕರೆನ್ಸಿಗಳ ಪ್ರಮುಖ ಲಕ್ಷಣವೆಂದರೆ ಅವುಗಳನ್ನು ಸಾಮಾನ್ಯವಾಗಿ ಯಾವುದೇ ಸರ್ಕಾರಿ ಪ್ರಾಧಿಕಾರವು ನೀಡುವುದಿಲ್ಲ. ಹಾಗಾಗಿ ಇದು ಸೈದ್ಧಾಂತಿಕವಾಗಿ ಸರ್ಕಾರದ ಹಸ್ತಕ್ಷೇಪ ಅಥವಾ ಅಧಿಕಾರ ವ್ಯಾಪ್ತಿಯಿಂದ ಮುಕ್ತವಾಗಿದೆ.
ಕ್ರಿಪ್ಟೋಕರೆನ್ಸಿಗಳು ಕ್ರಿಪ್ಟೋಗ್ರಾಫಿಕ್ ವ್ಯವಸ್ಥೆಗಳಿಂದ ಬೆಂಬಲಿತವಾದ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಗಳಾಗಿವೆ. ಥರ್ಡ್ ಪಾರ್ಟಿ ಪ್ಲಾಟ್ಫಾರ್ಮ್ ಅಗತ್ಯವಿಲ್ಲದೆ ಇವನ್ನು ಸುರಕ್ಷಿತ ಆನ್ ಲೈನ್ ಪಾವತಿಗಳಿಗಾಗಿ ಬಳಸಬಹುದು. ಮಾರುಕಟ್ಟೆಯಲ್ಲಿ ಅನೇಕ ಕ್ರಿಪ್ಟೋಕರೆನ್ಸಿಗಳು ಇರುವುದರಿಂದ, ಕ್ರಿಪ್ಟೋಕರೆನ್ಸಿಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: 2030ಕ್ಕೆ ಜಪಾನ್ ಹಿಂದಿಕ್ಕಿ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಎಸ್&ಪಿ ವರದಿ