ಹೈದರಾಬಾದ್: ಕೊರೊನಾ ಮಾರಿಗೆ ಕೊವ್ಯಾಕ್ಸಿನ್ ಮದ್ದು ಅರೆದಿದ್ದ ಭಾರತ್ ಬಯೋಟೆಕ್ ಸಂಸ್ಥೆ ಇದೀಗ ವಿಶ್ವದಲ್ಲಿಯೇ ಮೊದಲ ಇಂಟ್ರಾನಾಸಲ್ ಲಸಿಕೆಯನ್ನು ಪರಿಚಯಿಸಿದ್ದು ದರ ಕೂಡ ನಿಗದಿ ಮಾಡಿದೆ. ಬೂಸ್ಟರ್ ಡೋಸ್ ಆಗಿ ಮೂಗಿನ ಮೂಲಕ ಪಡೆಯುವ ಇಂಕೋವ್ಯಾಕ್ ಲಸಿಕೆಯನ್ನು CoWin ವೆಬ್ಸೈಟ್ನಲ್ಲಿ ಲಭ್ಯವಿದೆ.
ಖಾಸಗಿ ಮಾರುಕಟ್ಟೆಯಲ್ಲಿ ಇಂಕೋವ್ಯಾಕ್ 800 ರೂಪಾಯಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸರಬರಾಜು ಮಾಡಲು 325 ರೂಪಾಯಿಯನ್ನು ದರ ನಿಗದಿ ಮಾಡಲಾಗಿದೆ ಎಂದು ಹೈದರಾಬಾದ್ ಮೂಲದ ಕಂಪನಿ ತಿಳಿಸಿದೆ. ಕಳೆದ ತಿಂಗಳು ಭಾರತ್ ಬಯೋಟೆಕ್ನ iNCOVACC ಇಂಟ್ರಾನಾಸಲ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ಕೇಂದ್ರ ಔಷಧೀಯ ನಿಯಂತ್ರಣ ಮಂಡಳಿ ಅನುಮತಿ ನೀಡಿತ್ತು.
ವಿಶ್ವದಲ್ಲಿಯೇ ಮೊದಲ ಇಂಟ್ರಾನಾಸಲ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು SARS-CoV-2 ಸ್ಪೈಕ್ ಪ್ರೊಟೀನ್‌ನೊಂದಿಗೆ ಮರುಸಂಯೋಜಿಸಿ ಅಡೆನೊವೈರಸ್ ವೆಕ್ಟರ್ಡ್ ಲಸಿಕೆಯಾಗಿದೆ. ಇದನ್ನು ಮೂರು ಹಂತಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಇಂಟ್ರಾನಾಸಲ್ ಲಸಿಕೆಗಳು ಮತ್ತು ಅವುಗಳ ಕಾರ್ಯವಿಧಾನ
- ಈವರೆಗೆ ನೀಡಲಾದ ಲಸಿಕೆಗಳನ್ನು ಇಂಟ್ರಾಮಸ್ಕುಲರ್ ಅಥವಾ ಸಬ್ಕ್ಯುಟೇನಿಯಸ್ ಚುಚ್ಚುಮದ್ದಿನ ಮೂಲಕ ನೀಡಲಾಗಿತ್ತು. ಆದರೆ, ಈ ಲಸಿಕಾ ವಿಧಾನವು ಮೂಗಿನ ಹೊಳ್ಳೆಯ ಮೂಲಕ ನೀಡಲಾಗುವುದರಿಂದ, ಇದು ಸೂಜಿಯ ಮೇಲಿನ ಅನಗತ್ಯ ಖರ್ಚನ್ನು ಕಡಿಮೆ ಮಾಡುತ್ತದೆ.
- ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು 'ಭಾರತ್ ಬಯೋಟೆಕ್' ಸಂಸ್ಥೆಯು ಅಭಿವೃದ್ಧಿಪಡಿಸಿರುವ ಇಂಟ್ರಾನಾಸಲ್ ಲಸಿಕೆಯು ಸೂಜಿ ಮುಕ್ತವಾಗಿದೆ. ಸಾಮಾನ್ಯವಾಗಿ ಕೊರೊನಾ ವೈರಸ್ ನಮ್ಮ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವುದರಿಂದ, ಈ ಲಸಿಕೆ ರಕ್ತದಲ್ಲಿ ರೋಗ ನಿರೋಧಕ ಶಕ್ತಿಯನ್ನು ಮತ್ತು ಮೂಗಿನಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸಿ ವೈರಸ್ ವಿರುದ್ಧ ಹೋರಾಡುತ್ತದೆ.
- ಈ ರೀತಿಯ ಲಸಿಕೆಯ ನಿರ್ವಹಣೆ ಸುಲಭವಲ್ಲದಿದ್ದರೂ, ಸೂಜಿಗೆ ಭಯಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೇ, ಇದನ್ನು ಸೂಜಿ, ಸಿರಿಂಜ್ಗಳ ಬಳಕೆಯಿಲ್ಲದೆ ನೀಡುವುದರಿಂದ ಇದು ರೋಗಿಗಳ ನಡುವೆ ಹರಡಬಹುದಾದ ಸೋಂಕನ್ನು ಕಡಿಮೆಗೊಳಿಸಲಿದೆ.
- ಇಂಟ್ರಾನಾಸಲ್ ಲಸಿಕೆಯನ್ನು ಇತರೆ ಲಸಿಕೆಗಳಿಗೆ ಹೋಲಿಸಿದರೆ, ಉತ್ತಮ ರೋಗನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ಇದನ್ನು ಸ್ವಯಂ-ನಿರ್ವಹಣೆ ಮಾಡುವುದು ಸುಲಭವಾಗಿದೆ. ಅಲ್ಲದೇ, ಇದು ಸೂಜಿ, ಸಿರಿಂಜ್ಗಳಂತಹ ವೈದ್ಯಕೀಯ ಉಪಭೋಗ್ಯದ ಬಳಕೆಯನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಮೇಲಿನ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಭಾರತ್ ಬಯೋಟೆಕ್ ಏನು ಹೇಳುತ್ತದೆ?
ಇಂಟ್ರಾನಾಸಲ್ ಲಸಿಕೆಗಳನ್ನು ಉತ್ಪಾದಿಸಿರುವ ಭಾರತ್ ಬಯೋಟೆಕ್ ಸಂಸ್ಥೆಯು ಇದರ ಅನುಕೂಲಕರ ಅಂಶಗಳ ಬಗ್ಗೆ ಈ ರೀತಿಯಾಗಿ ಹೇಳಿದೆ.
- ಇಂಟ್ರಾನಾಸಲ್ ಲಸಿಕೆ ದೀರ್ಘವಾದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದನ್ನು ಮೂಗಿನ ಹೊಳ್ಳೆ( ಲೋಳೆಪೊರೆ)ಯಲ್ಲಿ ಹಾಕುವುದರಿಂದ ಸೋಂಕು ಮತ್ತು ಕೊರೊನಾ ಹರಡುವಿಕೆ ಎರಡನ್ನೂ ತಡೆಯಲು ಸಾಧ್ಯವಾಗುತ್ತದೆ.
- ಈ ಲಸಿಕೆಯು ಸೂಜಿ ಮುಕ್ತವಾಗಿದ್ದು, ಅಡ್ಡಪರಿಣಾಮಗಳಿಲ್ಲ.
- ಲಸಿಕೆ ನಿರ್ವಹಣೆ ಸುಲಭ - ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ.
- ಸೂಜಿ ಸಂಬಂಧಿತ ಅಪಾಯಗಳು ಇರುವುದಿಲ್ಲ (ಗಾಯಗಳು ಮತ್ತು ಸೋಂಕುಗಳು).
- ಮಕ್ಕಳು ಮತ್ತು ವಯಸ್ಕರಿಗೆ ಸೂಕ್ತವಾಗಿದೆ.
- ಜಾಗತಿಕ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ.
ಓದಿ: ಭಾರತ್ ಬಯೋಟೆಕ್ನಿಂದ 'ಇಂಟ್ರಾನಾಸಲ್' ಲಸಿಕೆ: ಇಲ್ಲಿದೆ ತಿಳಿದುಕೊಳ್ಳಬೇಕಾದ ಮಾಹಿತಿ..