ಬೆಂಗಳೂರು: ತನ್ನ ಗ್ರಾಹಕರನ್ನು ಎಟಿಎಂ ವಂಚನೆಯ ವಹಿವಾಟಿನಿಂದ ರಕ್ಷಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ಬಾರಿ ಪಾಸ್‌ವರ್ಡ್ (OTP) ಆಧಾರಿತ ನಗದು ಹಿಂಪಡೆಯುವ ಸೇವೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಇನ್ನೂ ಅನೇಕ ಬ್ಯಾಂಕ್‌ಗಳು ಇದೇ ವಿಧಾನವನ್ನು ಅನುಸರಿಸುವ ನಿರೀಕ್ಷೆಯಿದೆ.
ಇದು ಅನಧಿಕೃತ ವಹಿವಾಟುಗಳ ವಿರುದ್ಧ ಹೆಚ್ಚುವರಿ ರಕ್ಷಣೆಯ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಎಸ್‌ಬಿಐ ಪ್ರಕಾರ, ಇನ್ನು ಮುಂದೆ ಗ್ರಾಹಕರು ವಹಿವಾಟು ಪೂರ್ಣಗೊಳಿಸಲು ಎಟಿಎಂಗಳಲ್ಲಿ ನಗದು ಹಿಂಪಡೆಯುವ ಸಮಯದಲ್ಲಿ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಓಟಿಪಿ ಎಂಬುದು ಸಿಸ್ಟಂನಿಂದ ರಚಿತವಾಗುವ ನಾಲ್ಕು-ಅಂಕಿಯ ಸಂಖ್ಯೆಯಾಗಿದ್ದು, ಅದನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಓಟಿಪಿ ನಗದು ಹಿಂಪಡೆಯುವಿಕೆಯನ್ನು ದೃಢೀಕರಿಸುತ್ತದೆ ಮತ್ತು ಇದು ಕೇವಲ ಒಂದು ವಹಿವಾಟಿಗೆ ಮಾತ್ರ ಮಾನ್ಯವಾಗಿರುತ್ತದೆ.
ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಎಸ್‌ಬಿಐ ಜನವರಿ 1, 2020 ರಿಂದ OTP ಆಧಾರಿತ ನಗದು ಹಿಂಪಡೆಯುವ ಸೇವೆಗಳನ್ನು ಪ್ರಾರಂಭಿಸಿದೆ. ಎಸ್‌ಬಿಐ ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳ ಮೂಲಕ ಕಾಲಕಾಲಕ್ಕೆ ಎಟಿಎಂ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಎಸ್‌ಬಿಐ ಎಟಿಎಂಗಳಲ್ಲಿ ಒಂದು ವಹಿವಾಟಿನಲ್ಲಿ 10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್‌ಡ್ರಾ ಮಾಡುವ ಸಂದರ್ಭಗಳಲ್ಲಿ ವಹಿವಾಟನ್ನು ಪೂರ್ಣಗೊಳಿಸಲು ಓಟಿಪಿ ಅಗತ್ಯವಿರುತ್ತದೆ.
ಓಟಿಪಿ ಬಳಸಿ ನಗದು ಹಿಂಪಡೆಯುವುದು ಹೇಗೆ?
- ಎಸ್‌ಬಿಐ ಎಟಿಎಂನಲ್ಲಿ ಹಣ ಹಿಂಪಡೆಯುವಾಗ ನಿಮ್ಮ ಡೆಬಿಟ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ನೀವು ಹೊಂದಿರಬೇಕು.
- ನಿಮ್ಮ ಡೆಬಿಟ್ ಕಾರ್ಡ್ ಅನ್ನು ಎಟಿಎಂನೊಳಗೆ ಸೇರಿಸಿ, ಹಿಂಪಡೆಯುವ ಮೊತ್ತ, ಎಟಿಎಂ ಪಿನ್ ನಮೂದಿಸಿದ ನಂತರ ಓಟಿಪಿ ಕೇಳಲಾಗುತ್ತದೆ.
- ಎಸ್‌ಎಂಎಸ್ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
- ಎಟಿಎಂ ಪರದೆಯಲ್ಲಿ ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಓಟಿಪಿ ನಮೂದಿಸಿ.
- ನೀವು ಸರಿಯಾದ ಓಟಿಪಿ ನಮೂದಿಸಿದ್ದರೆ ವಹಿವಾಟು ಪೂರ್ಣಗೊಳ್ಳುತ್ತದೆ.