ಬೆಂಗಳೂರು: ಅಟಲ್ ಪಿಂಚಣಿ ಯೋಜನೆ ಇದು ನಾಗರಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದವರಿಗೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆಯನ್ನು ಒದಗಿಸುತ್ತದೆ. ನಾಗರಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸೃಷ್ಟಿಸಲು ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ, ಇದಕ್ಕಾಗಿ ಯಾವೆಲ್ಲ ಅರ್ಹತೆಗಳಿರಬೇಕು, ವಯಸ್ಸಿನ ಮಿತಿ ಎಷ್ಟು ಎಂಬೆಲ್ಲ ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ?: ಅಟಲ್ ಪಿಂಚಣಿ ಯೋಜನೆಯ ಫಾರ್ಮ್ಗಳನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಬ್ಯಾಂಕಿನಿಂದ ಪಡೆಯಬಹುದು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಈ ಯೋಜನೆಯನ್ನು ಒದಗಿಸುತ್ತವೆ. ನೀವು ಅಧಿಕೃತ ವೆಬ್ಸೈಟ್ನಿಂದ ಫಾರ್ಮ್ ಡೌನ್ಲೋಡ್ ಮಾಡಬಹುದು.
ಪ್ರಸ್ತುತ, ಆನ್ಲೈನ್ ಮೂಲಕವೇ ಎಪಿವೈಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಫಾರ್ಮ್ ಗಳನ್ನು ಭರ್ತಿ ಮಾಡಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಬ್ಯಾಂಕಿಗೆ ಸಲ್ಲಿಸಿ. ಜೊತೆಗೆ ನಿಮ್ಮ ಆಧಾರ್ ಕಾರ್ಡ್ ನ ಫೋಟೋಕಾಪಿಯನ್ನು ಸಲ್ಲಿಸಿ. ಅರ್ಜಿಯ ಅನುಮೋದನೆಯ ನಂತರ ನಿಮಗೆ ದೃಢೀಕರಣ ಸಂದೇಶ ಬರುತ್ತದೆ.
ಅಟಲ್ ಪಿಂಚಣಿ ಯೋಜನೆ-2023 ಪ್ರಯೋಜನಗಳು: ಎಪಿವೈ ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್ಪಿಎಸ್) ಒಟ್ಟಾರೆ ಆಡಳಿತಾತ್ಮಕ ಮತ್ತು ಸಾಂಸ್ಥಿಕ ವಿಭಾಗದ ಅಡಿಯಲ್ಲಿ ನಿರ್ವಹಿಸುತ್ತದೆ.
ನಿವೃತ್ತಿಯ ನಂತರದ ಪ್ರಯೋಜನಗಳು: ಚಂದಾದಾರರು ತಾವು ನೀಡುವ ವಂತಿಗೆಗಳನ್ನು ಆಧರಿಸಿ 60 ವರ್ಷ ವಯಸ್ಸಿನಿಂದ ತಿಂಗಳಿಗೆ ಕನಿಷ್ಠ 1000 ರಿಂದ 5000 ರೂ.ಗಳವರೆಗೆ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯುತ್ತಾರೆ. ಇದು ಎಪಿವೈಗೆ ಸೇರುವ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.
ಮರಣ ಪ್ರಯೋಜನಗಳು: ಚಂದಾದಾರರ ಮರಣದ ನಂತರ ಚಂದಾದಾರರ ಸಂಗಾತಿಗೆ ಅದೇ ಮೊತ್ತದ ಪಿಂಚಣಿಯನ್ನು ಪಾವತಿಸಲಾಗುತ್ತದೆ ಮತ್ತು ಒಂದು ವೇಳೆ ಚಂದಾದಾರರು ಮತ್ತು ಸಂಗಾತಿ ಇಬ್ಬರೂ ಪಿಂಚಣಿ ಪಡೆಯುವ ಮೊದಲೇ ನಿಧನರಾದರೆ ಅಂಥ ಸಂದರ್ಭದಲ್ಲಿ ಚಂದಾದಾರರ 60 ವರ್ಷ ವಯಸ್ಸಿನವರೆಗೆ ಸಂಗ್ರಹವಾದ ಪಿಂಚಣಿ ಮೊತ್ತವನ್ನು ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ.
ಅಟಲ್ ಪಿಂಚಣಿ ಯೋಜನೆ-2023 ಅರ್ಹತೆ:
- ಭಾರತದ ಪ್ರಜೆಯಾಗಿರಬೇಕು.
- 18-40 ವರ್ಷ ವಯಸ್ಸಿನವರಾಗಿರಬೇಕು.
- ಕನಿಷ್ಠ 20 ವರ್ಷ ವಂತಿಗೆ ಸಲ್ಲಿಸಬೇಕು.
- ಬ್ಯಾಂಕ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಿರಬೇಕು.
- ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆ ಹೊಂದಿರಬೇಕು.
ಅಟಲ್ ಪಿಂಚಣಿ ಯೋಜನೆ ಲೆಕ್ಕಾಚಾರ: 18 ನೇ ವಯಸ್ಸಿನಿಂದ ದಿನಕ್ಕೆ ಕೇವಲ 7 ರೂ.ಗಳನ್ನು ಉಳಿಸುವ ಮೂಲಕ ಮತ್ತು ಈ ಮೊತ್ತವನ್ನು ಮಾಸಿಕ ಆಧಾರದ ಮೇಲೆ ಅಟಲ್ ಪಿಂಚಣಿ ಯೋಜನೆ (ಎಪಿವೈ) ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಿವೃತ್ತಿಯ ನಂತರ ತಿಂಗಳಿಗೆ 5000 ರೂ.ಗಳ ಪಿಂಚಣಿ ಪಡೆಯಬಹುದು. ಅಂದರೆ 18ನೇ ವಯಸ್ಸಿನಿಂದ ನೀವು ಎಪಿವೈ ಆರಂಭಿಸಿದರೆ ತಿಂಗಳಿಗೆ 210 ರೂ. ಪಾವತಿಸಿ 60ನೇ ವಯಸ್ಸಿನ ನಂತರ ಮಾಸಿಕ 5000 ರೂ. ಪಿಂಚಣಿ ಪಡೆಯಬಹುದು.
ಹಾಗೆಯೇ, ನೀವು 25 ನೇ ವಯಸ್ಸಿನಲ್ಲಿ ಎಪಿವೈ ಖಾತೆಯನ್ನು ತೆರೆದರೆ, ಈ ಯೋಜನೆಯಡಿ ಮಾಸಿಕ 5000 ರೂ.ಗಳ ಪಿಂಚಣಿಗಾಗಿ ನೀವು ತಿಂಗಳಿಗೆ 376 ರೂ.ಗಳನ್ನು ವಂತಿಗೆ ನೀಡಬೇಕಾಗುತ್ತದೆ. ಈ ಯೋಜನೆಯಡಿ ನಿವೃತ್ತಿಯ ನಂತರ ತಿಂಗಳಿಗೆ 5000 ರೂ.ಗಳನ್ನು ಪಡೆಯಲು ಅಗತ್ಯವಿರುವ ಮಾಸಿಕ ಕೊಡುಗೆ ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗುತ್ತದೆ. 30 ನೇ ವಯಸ್ಸಿನಿಂದ 5000 ರೂ.ಗಳ ಪಿಂಚಣಿಗೆ ಅಗತ್ಯವಿರುವ ಮಾಸಿಕ ಕೊಡುಗೆ 577 ರೂ ಮತ್ತು 35 ನೇ ವಯಸ್ಸಿನಿಂದ ಇದು ತಿಂಗಳಿಗೆ 902 ರೂ. ಆಗುತ್ತದೆ.
ಆದಾಯ ತೆರಿಗೆ ಪಾವತಿಸುವವರಿಗೆ ಎಪಿವೈ ಲಭ್ಯವಿಲ್ಲ: ಆಗಸ್ಟ್ 2022 ರಲ್ಲಿ, ಹಣಕಾಸು ಸಚಿವಾಲಯವು ತನ್ನ ಅಧಿಸೂಚನೆಯಲ್ಲಿ, "2022 ರ ಅಕ್ಟೋಬರ್ 1 ರಿಂದ, ಆದಾಯ ತೆರಿಗೆ ಪಾವತಿಸುವ ಯಾವುದೇ ನಾಗರಿಕರು ಎಪಿವೈಗೆ ಸೇರಲು ಅರ್ಹರಾಗಿರುವುದಿಲ್ಲ" ಎಂದು ಹೇಳಿದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ ಆದಾಯ ತೆರಿಗೆ ಪಾವತಿಸಲು ಬಾಧ್ಯಸ್ಥರಾಗಿರುವ ವ್ಯಕ್ತಿಯನ್ನು ತೆರಿಗೆದಾರ ಎಂದು ಕರೆಯಲಾಗುತ್ತದೆ.
ಇದಲ್ಲದೆ, ಮತ್ತೊಂದು ಅಧಿಸೂಚನೆಯಲ್ಲಿ, "2022 ರ ಅಕ್ಟೋಬರ್ 1 ರಂದು ಅಥವಾ ನಂತರ ಸೇರಿದ ಚಂದಾದಾರರು ಅರ್ಜಿಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿಸಿರುವುದು ಕಂಡುಬಂದರೆ, ಎಪಿವೈ ಖಾತೆಯನ್ನು ಮುಚ್ಚಲಾಗುವುದು ಮತ್ತು ಇಲ್ಲಿಯವರೆಗೆ ಸಂಗ್ರಹಿಸಿದ ಪಿಂಚಣಿ ಸಂಪತ್ತನ್ನು ಚಂದಾದಾರರಿಗೆ ಮರಳಿಸಲಾಗುವುದು" ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : 16ನೇ ಹಣಕಾಸು ಆಯೋಗದ ಮುಂದಿನ ಸವಾಲುಗಳು: ಒಂದು ವಿಶ್ಲೇಷಣೆ