ನವದೆಹಲಿ: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತದ ಬದಲಾವಣೆಗೆ ನಾಂದಿ ಹಾಡಲಿರುವ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ರಿಲಯನ್ಸ್ ಜಿಯೋ ಅತಿ ಹೆಚ್ಚು ಸ್ಪೆಕ್ಟ್ರಂ ಖರೀದಿ ಮಾಡಿತು. ಇದೇ ಮೊದಲ ಬಾರಿಗೆ ಟೆಲಿಕಾಂ ಕ್ಷೇತ್ರಕ್ಕೆ ಅಡಿಇಟ್ಟಿದ್ದ ವಿಶ್ವದ 4ನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ 212 ಕೋಟಿ ರೂಪಾಯಿ ಮಾತ್ರ ಬಿಡ್ ಮಾಡಿದೆ.
5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ರಿಲಾಯನ್ಸ್ ಜಿಯೋಗೆ ಭಾರೀ ಸವಾಲಾಗಲಿದೆ ಎಂದು ಊಹಿಸಲಾಗಿದ್ದ ಅದಾನಿ ಗ್ರೂಪ್ 212 ಕೋಟಿ ರೂಪಾಯಿಗೆ 26Ghz ಸಾಮರ್ಥ್ಯದ 400 Mhz ಸ್ಪೆಕ್ಟ್ರಂ ಮಾತ್ರ ಖರೀದಿಸಿತು. ರಿಲಯನ್ಸ್ ಜಿಯೋ 24,740 MHz, ವೊಡಾಫೋನ್ ಐಡಿಯಾ 1800 MHz, ಭಾರ್ತಿ ಏರ್‌ಟೆಲ್ 19,867 MHz ತರಂಗಾಂತರ ಖರೀದಿಸಿವೆ.
ಯಾವ ಸ್ಪೆಕ್ಟ್ರಂಗೆ, ಎಷ್ಟು ಮೊತ್ತ?: ನಿನ್ನೆ ಮುಕ್ತಾಯವಾದ 5 ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಶೇ.71 ರಷ್ಟು ಸ್ಪೆಕ್ಟ್ರಂ ಬಿಕರಿಯಾಗಿವೆ. 1,50,173 ಕೋಟಿ ರೂಪಾಯಿ ಮೌಲ್ಯದ ಬಿಡ್ ಸಲ್ಲಿಕೆಯಾಗಿತ್ತು.
ಇದರಲ್ಲಿ ಅತಿ ದುಬಾರಿಯಾದ 5-10 ಕಿಮೀ ವ್ಯಾಪ್ತಿಯನ್ನು ಹೊಂದಿರುವ 700 MHz ಬ್ಯಾಂಡ್ ಅತಿಹೆಚ್ಚು ಮೌಲ್ಯಕ್ಕೆ ಅಂದರೆ 39,270 ಕೋಟಿಗೆ ಮಾರಾಟವಾಗಿದೆ. ಜನಪ್ರಿಯವಾದ 3300MHz ಬ್ಯಾಂಡ್ 80,590 ಕೋಟಿ, 1800MHz ಬ್ಯಾಂಡ್ 10,376 ಕೋಟಿ, 26MHz ಬ್ಯಾಂಡ್ 14,709 ಕೋಟಿ ರೂ. ಮೌಲ್ಯಕ್ಕೆ ಖರೀದಿಯಾಗಿದೆ.
800 MHz ಬ್ಯಾಂಡ್ 1,050 ಕೋಟಿ, 2500 MHz ಸ್ಪೆಕ್ಟ್ರಂ 650 ಕೋಟಿಗೆ, 900 MHz ಬ್ಯಾಂಡ್ 349 ಕೋಟಿ, 2100 MHz ಬ್ಯಾಂಡ್ 3,180 ಕೋಟಿ ರೂಪಾಯಿಗೆ ಬಿಡ್ ಕಂಡಿದೆ.
ರಿಲಯನ್ಸ್ ಜಿಯೋ 22 ವಲಯಗಳ ಸ್ಪೆಕ್ಟ್ರಂಗಳಲ್ಲಿ ಅತಿ ದುಬಾರಿಯಾದ 700MHz ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ಬ್ಯಾಂಡ್ 5 ರಿಂದ 10 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಭಾರತೀ ಏರ್‌ಟೆಲ್ 900 MHz, 1800 MHz, 2100MHz, 3300 MHz ಮತ್ತು 26 GHz ಆವರ್ತನ ಬ್ಯಾಂಡ್‌ಗಳಲ್ಲಿ 19,867.8 MHz ಸ್ಪೆಕ್ಟ್ರಮ್ ಅನ್ನು 43,084 ಕೋಟಿಗೆ ಖರೀದಿಸಿದೆ.
ಓದಿ: ಅಮೆರಿಕ ಡ್ರೋನ್ ದಾಳಿ: ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹತ್ಯೆ